ಹೊಸಪೇಟೆ: ವಿಜಯನಗರ ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ಸುವ್ಯವಸ್ಥಿತವಾಗಿ ನಡೆಸಲು ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಜಿಲ್ಲೆಯಲ್ಲಿ 21,429 ಹೊಸ ಮತ್ತು 1271 ಪುನರಾವರ್ತಿತ ವಿದ್ಯಾರ್ಥಿಗಳು ಸೇರಿ ಒಟ್ಟು 22,700 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ಪರೀಕ್ಷಾ ಕೇಂದ್ರಗಳಲ್ಲಿ ಮೂಲಸೌಕರ್ಯ ವ್ಯವಸ್ಥೆ, ಕೊಠಡಿ ನಿರ್ವಹಣೆ, ಕುಡಿಯುವ ನೀರು, ಶೌಚಾಲಯ, ಬೆಳಕು, ಸೂಕ್ತ ಆಸನ ವ್ಯವಸ್ಥೆ ಸೇರಿದಂತೆ ಪರೀಕ್ಷೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ವೆಬ್ ಕಾಸ್ಟಿಂಗ್‌ಗೆ ವ್ಯವಸ್ಥೆ ಕೂಡ ಮಾಡಲಾಗಿದೆ.
ಜಿಲ್ಲೆಯ 71 ಪರೀಕ್ಷಾ ಕೇಂದ್ರಗಳಲ್ಲಿ ಈಗಾಗಲೇ ಆಯಾ ಬಿಇಒಗಳ ನಿರ್ದೇಶನದ ಮೇರೆಗೆ ಪರೀಕ್ಷಾ ಕೇಂದ್ರಗಳಲ್ಲಿ ಮಕ್ಕಳ ನೋಂದಣಿ ಸಂಖ್ಯೆಯನ್ನು ನಮೂದು ಮಾಡಲಾಗಿದೆ. ಇನ್ನೂ ಪರೀಕ್ಷಾ ಮುನ್ನಾ ದಿನ ಬಿಇಒಗಳು ಸಭೆ ನಡೆಸಿ; ಮುಖ್ಯ ಅಧೀಕ್ಷಕರು ಮತ್ತು ಸ್ಕ್ವಾಡ್‌ಗಳಿಗೆ ಪರೀಕ್ಷಾ ಮಾರ್ಗಸೂಚಿ ಪಾಲಿಸಲು ನಿರ್ದೇಶನ ಕೂಡ ನೀಡಿದ್ದಾರೆ. ಪರೀಕ್ಷಾ ದಿನ ಝರಾಕ್ಸ್ ಅಂಗಡಿಗಳನ್ನು ಕೂಡ ಮುಚ್ಚಲು ನಿರ್ದೇಶನ ನೀಡಲಾಗಿದೆ. ನಕಲಿಗೆ ಅವಕಾಶ ಇಲ್ಲದಂತೆ ಪಾರದದರ್ಶಕವಾಗಿ ಪರೀಕ್ಷೆಗಳನ್ನು ನಡೆಸಲು ಈಗಾಗಲೇ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಸೂಚಿಸಿದ್ದು, ಅದರಂತೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಆಯಾ ಪರೀಕ್ಷಾ ಕೇಂದ್ರಗಳಲ್ಲಿ ಕಟ್ಟುನಿಟ್ಟಾಗಿ ಪರೀಕ್ಷೆ ನಡೆಸಲು ನಿರ್ದೇಶನ ಕೂಡ ನೀಡಿದ್ದಾರೆ.ಪರೀಕ್ಷಾ ಕೇಂದ್ರದಿಂದ ದೂರ ಇರುವ ಶಾಲೆಗಳ ಮಕ್ಕಳಿಗೆ ವಾಹನ ಸೌಕರ್ಯ, ಸಕಾಲಕ್ಕೆ ಬಸ್‌ಗಳ ವ್ಯವಸ್ಥೆ ಕೂಡ ಮಾಡಲಾಗುತ್ತಿದೆ. ಪೊಲೀಸರು ಕೂಡ ಪರೀಕ್ಷಾ ಕೇಂದ್ರದ ಸುತ್ತ ಗಸ್ತು ತಿರುಗಲಿದ್ದಾರೆ. ಏ. 4ರ ವರೆಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಲಿದ್ದು, ಎಲ್ಲ ಪರೀಕ್ಷಾ ಕೇಂದ್ರಗಳಲ್ಲೂ ಸಿಸಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ.
ಶುಭವಾಗಲಿ: ಕನ್ನಡಪ್ರಭ ಹಾರೈಕೆ:ವಿಜಯನಗರ ಜಿಲ್ಲೆಯ 71 ಪರೀಕ್ಷಾ ಕೇಂದ್ರಗಳಲ್ಲಿ 22,700 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಈ ಪೈಕಿ 11,376 ಬಾಲಕರು, 11,324 ಬಾಲಕಿಯರು ಇದ್ದಾರೆ. ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮವಾಗಿ ಬರೆದು, ಉತ್ತಮ ಅಂಕಗಳನ್ನು ಪಡೆಯಲಿ; ಆತಂಕ ಪಡದೇ ಧೈರ್ಯದಿಂದ ಮಕ್ಕಳು ಪರೀಕ್ಷೆ ಬರೆಯಲಿ ಎಂದು ಕನ್ನಡಪ್ರಭ ಜಿಲ್ಲೆ ಮಕ್ಕಳಿಗೆ ಶುಭ ಹಾರೈಸಿದೆ.
ವಿಜಯನಗರ ಜಿಲ್ಲೆಯಲ್ಲಿ ಪರೀಕ್ಷೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪಾರದರ್ಶಕ ಹಾಗೂ ನಿಯಮಾನುಸಾರ ಪರೀಕ್ಷೆ ನಡೆಸಲು ನಿರ್ದೇಶನ ನೀಡಲಾಗಿದೆ. ವಿದ್ಯಾರ್ಥಿಗಳು ಆತಂಕಗೊಳ್ಳದೇ ಪರೀಕ್ಷೆ ಬರೆಯಲಿ ಎಂದು ವಿಜಯನಗರ ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಹೇಳಿದರು.