ಹೊಸಪೇಟೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಜೂ.21ರಂದು ಬೆಳಗ್ಗೆ 11 ಗಂಟೆಗೆ ಹೊಸಪೇಟೆಯಲ್ಲಿರುವ ವಿಜಯನಗರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ.
ಕೆಡಿಪಿ ಸಭೆಯಲ್ಲಿ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್. ಜಮೀರ್ ಅಹ್ಮದ್ ಖಾನ್, ವಿಜಯನಗರ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಜಿಲ್ಲೆಯ ಶಾಸಕರಾದ ಎಚ್.ಆರ್. ಗವಿಯಪ್ಪ, ಕೆ.ನೇಮರಾಜ್ ನಾಯ್ಕ, ಎಂ.ಪಿ. ಲತಾ, ಡಾ. ಎನ್.ಟಿ. ಶ್ರೀನಿವಾಸ್, ಕೃಷ್ಣ ನಾಯ್ಕ ಸೇರಿದಂತೆ ಜನಪ್ರತಿನಿಧಿಗಳು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್‌ರಾಜ್ ಸಿಂಗ್, ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್, ಎಸ್ಪಿ ಶ್ರೀಹರಿಬಾಬು, ಜಿಪಂ ಸಿಇಒ ಸದಾಶಿವಪ್ರಭು ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನಿರ್ದೇಶನ:ವಿಶಿಷ್ಟವಾದ ಐತಿಹಾಸಿಕ ಪರಂಪರೆಯನ್ನು ಹೊಂದಿದ ವಿಜಯನಗರ ಸಾಮ್ರಾಜ್ಯದ ನೆಲೆವೀಡಾದ ವಿಜಯನಗರ ಜಿಲ್ಲೆಯು ಹೊಸದಾಗಿ ರಚನೆಗೊಂಡು ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎನ್ನುವ ಸಂದೇಶ ರವಾನೆಯಾಗಬೇಕು. ಈ ದಿಸೆಯಲ್ಲಿ ನಾವೆಲ್ಲ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದೇವೆ ಎಂಬುದನ್ನು ತಿಳಿಸುವ ಹಾಗೆ ಸಭೆಯು ವೈಶಿಷ್ಟ್ಯಪೂರ್ಣವಾಗಿ ನಡೆಯಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಸಭೆಯ ಘನತೆಯನ್ನು ಹೆಚ್ಚಿಸುವ ಹಾಗೆ ಪೂರ್ಣ ಮಾಹಿತಿಯೊಂದಿಗೆ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ನವೀನ್‌ರಾಜ್ ಸಿಂಗ್ ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ಮಳೆಯ ಪ್ರಮಾಣ, ಬಿತ್ತನೆ ಬೀಜ ಹಾಗೂ ರಸಗೊಬ್ಬರದ ಲಭ್ಯತೆ, ಮೇವಿನ ಪೂರೈಕೆ ಸೇರಿದಂತೆ ಮಹತ್ವದ ಮಾಹಿತಿಯೊಂದಿಗೆ ಮುಖ್ಯವಾಗಿ ಕೃಷಿ, ತೋಟಗಾರಿಕೆ, ಪಶುಪಾಲನೆ ಮತ್ತು ಇನ್ನಿತರ ಇಲಾಖೆಯ ಅಧಿಕಾರಿಗಳು ಹಾಜರಿರಬೇಕು. ಈ ಭಾಗದ ಜನರ ಜೀವನಾಡಿ ತುಂಗಭದ್ರಾ ಡ್ಯಾಮ್‌ನಲ್ಲಿನ ನೀರಿನ ಲಭ್ಯತೆ, ಕುಡಿಯುವ ನೀರಿನ ಸರಬರಾಜು, ನೀರಾವರಿ ಯೋಜನೆಗಳ ಪ್ರಗತಿಯ ಚರ್ಚೆಗೆ ಬೇರೆ, ಬೇರೆ ಇಲಾಖೆಗಳ ಅಧಿಕಾರಿಗಳು ನೀಡುವ ಮಾಹಿತಿ ಪೂರಕವಾಗಿರಬೇಕು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್, ಜಿಪಂ ಸಿಇಒ ಸದಾಶಿವ ಪ್ರಭು ಬಿ., ಎಸ್ಪಿ ಶ್ರೀಹರಿಬಾಬು, ಅಪರ ಜಿಲ್ಲಾಧಿಕಾರಿ ಅನುರಾಧ ಜಿ., ಸಹಾಯಕ ಆಯುಕ್ತ ಚಿದಾನಂದ ಗುರುಸ್ವಾಮಿ, ಜಿಪಂ ಮುಖ್ಯ ಯೋಜನಾಧಿಕಾರಿ ಅನ್ನದಾನೇಶ್ವರ ಸ್ವಾಮಿ ಜೆ.ಎಂ. ಮತ್ತಿತರರಿದ್ದರು.