ವಿಜಯನಗರ ಸಾರಿಗೆ ವಿಭಾಗದ ಸಿಬ್ಬಂದಿ ದುಶ್ಚಟ ಜೋಳಿಗೆಯ ಪಾಲು

KannadaprabhaNewsNetwork |  
Published : Aug 25, 2026, 03:00 AM IST
ಹೂವಿನಹಡಗಲಿಯ ಸಾರಿಗೆ ಘಟಕದ ಸಿಬ್ಬಂದಿ ತಮ್ಮ ದುಶ್ಚಟಗಳ ತ್ಯಾಗ ಪ್ರತಿಜ್ಞಾ ಪತ್ರಗಳನ್ನು ಜೋಳಿಗೆಯಲ್ಲಿ ಹಾಕುತ್ತಿರುವುದು.  | Kannada Prabha

ಸಾರಾಂಶ

ಇಂದಿನ ಒತ್ತಡದ ಬದುಕಿನಲ್ಲಿ ಸಾರಿಗೆ ಸಿಬ್ಬಂದಿ ಚಟಕ್ಕೆ ದಾಸರಾಗುವ ಬದಲು ಉತ್ತಮ ಆರೋಗ್ಯ, ಮಾನಸಿಕ ನೆಮ್ಮದಿ ಹೊಂದಬೇಕು ಎಂಬ ಆಶಯದಿಂದ ದುರ್ವ್ಯಸನ ತ್ಯಾಗ ಪ್ರತಿಜ್ಞಾ ಜೋಳಿಗೆ ಅಭಿಯಾನಕ್ಕೆ ಮುಂದಾಗಿದೆ.

ಚಂದ್ರು ಕೊಂಚಿಗೇರಿ

ಹೂವಿನಹಡಗಲಿ: ಇಂದಿನ ಒತ್ತಡದ ಬದುಕಿನಲ್ಲಿ ಸಾರಿಗೆ ಸಿಬ್ಬಂದಿ ಚಟಕ್ಕೆ ದಾಸರಾಗುವ ಬದಲು ಉತ್ತಮ ಆರೋಗ್ಯ, ಮಾನಸಿಕ ನೆಮ್ಮದಿ ಹೊಂದಬೇಕು ಎಂಬ ಆಶಯದಿಂದ ದುರ್ವ್ಯಸನ ತ್ಯಾಗ ಪ್ರತಿಜ್ಞಾ ಜೋಳಿಗೆ ಅಭಿಯಾನಕ್ಕೆ ಮುಂದಾಗಿದೆ.

ಇಳಕಲ್‌ ಮಹಾಂತ ಶಿವಯೋಗಿಗಳಿಂದ ಪ್ರಭಾವಿತರಾಗಿರುವ ವಿಜಯನಗರ ಸಾರಿಗೆ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ ಹುದ್ದಾರ್‌, ತಾವು ಸೇವೆ ಮಾಡುವ ಸಾರಿಗೆ ಇಲಾಖೆ ಸಿಬ್ಬಂದಿಯ ಆರೋಗ್ಯ ಕಾಪಾಡಲು ಇಡೀ ವಿಜಯನಗರ ಜಿಲ್ಲೆಯ 5 ತಾಲೂಕಿನ ಸಾರಿಗೆ ಘಟಕಗಳಲ್ಲಿ, ದುರ್ವ್ಯಸನ ತ್ಯಾಗ ಪ್ರತಿಜ್ಞಾ ಜೋಳಿಗೆ ಅ‍ಳವಡಿಸುವ ಮೂಲಕ ಸಿಬ್ಬಂದಿಯನ್ನು ದುಶ್ಚಚಗಳಿಂದ ದೂರ ಮಾಡುವ ಪ್ರಯತ್ನಕ್ಕೆ ಕೈಹಾಕಿದ್ದಾರೆ.

ವಿಜಯನಗರ ಜಿಲ್ಲೆ ವ್ಯಾಪ್ತಿಯ ಹೂವಿನಹಡಗಲಿ, ಹೊಸಪೇಟೆ, ಕೂಡ್ಲಿಗಿ, ಕೊಟ್ಟೂರು, ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ ತಾಲೂಕಿನಲ್ಲಿ ಒಟ್ಟು 1678 ಸಿಬ್ಬಂದಿ ಸಾರಿಗೆ ಘಟಕಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕರ್ತವ್ಯದ ಒತ್ತಡಕ್ಕೆ ಒಳಗಾಗಿ ಕೆಲ ದುಶ್ಚಟಗಳಿಗೆ ದಾಸರಾಗಿರುತ್ತಾರೆ. ಅವರನ್ನೇ ನಂಬಿಕೊಂಡು ಬಸ್ಸಿನಲ್ಲಿ ನೂರಾರು ಪ್ರಯಾಣಿಕರು ಪ್ರಯಾಣಿಸುತ್ತಾರೆ. ಜತೆಗೆ ಕುಟುಂಬ ವರ್ಗವೂ ಅವರನ್ನೇ ನಂಬಿಕೊಂಡಿರುತ್ತಾರೆ. ಆದರಿಂದ ಮೊದಲು ಸಿಬ್ಬಂದಿ ಆರೋಗ್ಯ ಚೆನ್ನಾಗಿ ಇದ್ದರೆ ಎಲ್ಲವೂ ಸಾಧ್ಯ. ಚಟಗಳಿಂದ ಅನಾರೋಗ್ಯ ಉಂಟಾದರೆ ಎಲ್ಲವೂ ನಷ್ಟವಾಗುತ್ತದೆ. ಈ ನಿಟ್ಟಿನಲ್ಲಿ ಆರೋಗ್ಯ ಜಾಗೃತಿ ಮೂಡಿಸುತ್ತಿದ್ದಾರೆ.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಹೊಸಪೇಟೆ ವಿಭಾಗ ವ್ಯಾಪ್ತಿಯ ಸಿಬ್ಬಂದಿ ಮತ್ತು ಅಧಿಕಾರಿಗಳು ಈ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು. ಸಿಬ್ಬಂದಿ ಚಟಗಳಿಂದ ದೂರ ಇದ್ದರೆ ಅವರಿಗೆ ಏಕಾಗ್ರತೆ ಬರುತ್ತದೆ. ಇದರಿಂದ ಯಾವುದೇ ಅಪಘಾತ ಸಂಭವಿಸುವುದಿಲ್ಲ. ಅದೇ ರೀತಿ ತಂಬಾಕು, ಗುಟಕಾ, ಧೂಮಪಾನ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಮಾರಕವಾಗುತ್ತದೆ. ಇದರಿಂದ ಇಲಾಖೆಯಲ್ಲಿ ನೌಕರಿ ಮಾಡುವುದು ಕಷ್ಟವಾಗುತ್ತದೆ. ಇಂದು ಮೊಬೈಲ್ ಬಳಕೆ ಅತಿಯಾಗಿದ್ದು ಇದರಿಂದ ಮಾನಸಿಕ ನೆಮ್ಮದಿಯೇ ಹಾಳಾಗಿದೆ. ಕರ್ತವ್ಯದಲ್ಲಿದ್ದಾಗ ಮೊಬೈಲ್ ಬಳಸುವುದಿಲ್ಲ, ತುರ್ತು ಸಮಯದಲ್ಲಿ ಮಾತ್ರ ಮೊಬೈಲ್ ಬಳಕೆ ಮಾಡುತ್ತೇವೆ. ಹೀಗೆಂದು ಪ್ರತಿಜ್ಞೆ ಮಾಡಿ ಪ್ರತಿಜ್ಞಾ ಪತ್ರಗಳನ್ನು ಜೋಳಿಗೆಗೆ ಹಾಕುವ ಮೂಲಕ ತಕ್ಕ ಮಟ್ಟಿಗಾದರೂ ಬದಲಾವಣೆ ತರುವ ಉದ್ದೇಶ ಹೊಂದಲಾಗಿದೆ.

ದುಶ್ಚಟಗಳ ಪಟ್ಟಿಯನ್ನು ಜೋಳಿಗೆಯಲ್ಲಿ ಹಾಕಿ 15 ದಿನಗಳ ವರೆಗೆ ಸಿಬ್ಬಂದಿಯನ್ನು ಗಮನಿಸುತ್ತೇವೆ. ಆದರೂ ದುಶ್ಚಟಗಳಿಂದ ದೂರವಾಗದಿದ್ದರೆ ಮತ್ತಷ್ಟು ತಿಳಿವಳಿಕೆ ಹೇಳಿ ಸರಿದಾರಿಗೆ ತರುವ ಪ್ರಯತ್ನ ಮಾಡುತ್ತೇವೆ ಎನ್ನುತ್ತಾರೆ ಸಾರಿಗೆ ಇಲಾಖೆ ಅಧಿಕಾರಿಗಳು.

ಪ್ರಯಾಣಿಕರಿಗೆ ಸೇವೆ ನೀಡಲು ಸಿಬ್ಬಂದಿ ಸಶಕ್ತನಾಗಿರಬೇಕು. ಇದಕ್ಕೆ ಸಿಬ್ಬಂದಿ ಆರೋಗ್ಯ ಬಹಳ ಮುಖ್ಯ. ಇಳಕಲ್‌ ಮಹಾಂತ ಶಿವಯೋಗಿಗಳು ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ರೀತಿಯಲ್ಲಿ ನಮ್ಮ ಸಿಬ್ಬಂದಿಯಲ್ಲಿ ಆರೋಗ್ಯ ಜಾಗೃತಿ ಮೂಡಿಸುತ್ತಿದ್ದೇವೆ.

ರಾಜೇಶ ಹುದ್ದಾರ್‌, ವಿಭಾಗೀಯ ನಿಯಂತ್ರಣಾಧಿಕಾರಿ, ವಿಜಯನಗರ ವಿಭಾಗ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನವೋದಯ ಸಹಕಾರ ಸಂಘ: ಶೇ.9 ಡಿವಿಡೆಂಡ್ ಘೋಷಣೆ
ಭಾಗಮಂಡಲ ವಲಯ ಪ್ರೌಢಶಾಲೆ ವಿಭಾಗ ಕ್ರೀಡಾಕೂಟ