ಕನ್ನಡಪ್ರಭ ವಾರ್ತೆ ವಿಜಯಪುರ
ರಾಜ್ಯದಲ್ಲಿಯೇ ವಿಜಯಪುರದಲ್ಲಿ ಅತಿ ಹೆಚ್ಚು ವಕ್ಫ್ ಆಸ್ತಿ ಇದೆ. ವಕ್ಫ್ ಆಸ್ತಿಯ ಸದ್ಭಳಕೆ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸೂರು ಕಲ್ಪಿಸುವ ಸದುದ್ದೇಶ ಹೊಂದಲಾಗಿದೆ. ರಾಜ್ಯದಲ್ಲಿ ಒಟ್ಟು ೧.೧೨ ಲಕ್ಷ ಎಕರೆ ವಕ್ಫ್ ಆಸ್ತಿಯಲ್ಲಿ ೮೫ ಸಾವಿರ ಎಕರೆ ಅತಿಕ್ರಮಣವಾಗಿ ಕೇವಲ ೨೩ ಸಾವಿರ ಎಕರೆ ಮಾತ್ರ ಉಳಿದಿದೆ. ವಕ್ಫ್ ಆಸ್ತಿ ಕಬಳಿಕೆ- ಹಗರಣಕ್ಕೆ ಮುಂದಾಗಬಾರದು. ವಕ್ಫ್ ಆಸ್ತಿ ದೇವರ ಆಸ್ತಿಯಾಗಿದ್ದು, ಪ್ರತಿಯೊಬ್ಬರು ಅದರ ಸಂರಕ್ಷಣೆಗೆ ಮುಂದಾಗುವಂತೆ ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಜಮೀರ್‌ಅಹ್ಮದ ಖಾನ್ ಕರೆ ನೀಡಿದರು.ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ರಾಜ್ಯ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ, ವಕ್ಫ್ ಇಲಾಖೆ ಹಾಗೂ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಸಹಯೋಗದಲ್ಲಿ ಜಿಲ್ಲೆಯ ಮುತ್ತವಲ್ಲಿಗಳ ಸಮ್ಮೇಳನ ಹಾಗೂ ವಕ್ಫ್ ಅದಾಲತ್‌ಗೆ ಚಾಲನೆ ನೀಡಿ ಮಾತನಾಡಿದರು. ಪ್ರತಿಯೊಬ್ಬರಿಗೂ ತಮ್ಮ ಹಕ್ಕು ಪ್ರತಿಪಾದನೆಗೆ ಸಂವಿಧಾನ ಅವಕಾಶ ನೀಡಿದ. ವಕ್ಫ್ ಆಸ್ತಿ ಯಾವುದೇ ವೈಯಕ್ತಿಕ ಸ್ವತ್ತಲ್ಲ, ಇದು ದೇವರ ಆಸ್ತಿ, ಇದರ ಸಂರಕ್ಷಣೆ ನಮ್ಮ ಹಕ್ಕು ಹಾಗೂ ಜವಾಬ್ದಾರಿಯಾಗಿದೆ ಎಂದು ವಸತಿ, ಹೇಳಿದರು.
ವಕ್ಫ್ ಆಸ್ತಿ ಸಂರಕ್ಷಣೆ ಹಾಗೂ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಈವರೆಗೆ ರಾಜ್ಯಾದ್ಯಂತ ೧೦ ಜಿಲ್ಲೆಗಳಲ್ಲಿ ವಕ್ಫ್ ಅದಾಲತ್ ಹಮ್ಮಿಕೊಳ್ಳಲಾಗಿದ್ದು, ವಿಜಯಪುರದಲ್ಲಿ ೧೧ನೇ ಅದಾಲತ್ ಹಮ್ಮಿಕೊಳ್ಳಲಾಗಿದೆ. ಕಳೆದ ೧೦-೧೫ ವರ್ಷಗಳಿಂದ ಬಾಕಿ ಉಳಿದ ವಕ್ಫ್ ಖಾತೆ ಬದಲಾವಣೆ ಪ್ರಕರಣಗಳಿಗೆ ಸಂಬಂಧಿಸಿದಂತೆ ನಾನು ಸಚಿವನಾದ ಮೇಲೆ ೭೨೭ ಖಾತೆ ಬದಲಾವಣೆಗೆ ಕ್ರಮ ವಹಿಸಲಾಗಿದೆ ಎಂದರು.ಈ ಅದಾಲತ್‌ನಲ್ಲಿ ವಕ್ಫ್ ಆಸ್ತಿಗಳ ಅತಿಕ್ರಮಣದ ೧೭ ಅರ್ಜಿಗಳು, ಖಬರಸ್ಥಾನ್, ಖಾತೆ ಬದಲಾವಣೆಯ ೮೧ ಅರ್ಜಿಗಳು, ಸರ್ವೇ ಕಾರ್ಯಕ್ಕಾಗಿ ೨೫ ಅರ್ಜಿ ಸೇರಿದಂತೆ ಒಟ್ಟು ೩೩೦ ಅರ್ಜಿ ಸಲ್ಲಿಕೆಯಾಗಿವೆ. ಇಲ್ಲಿ ಸಲ್ಲಿಕೆಯಾದ ಅರ್ಜಿಗಳು ಯಾವುದೇ ಕಾರಣಕ್ಕೂ ವ್ಯರ್ಥವಾಗುವುದಿಲ್ಲ, ಪ್ರತಿಯೊಂದು ಅರ್ಜಿಗಳಿಗೂ ಸ್ಪಂದಿಸಲಾಗುವುದು. ಸ್ವೀಕರಿಸಲಾದ ಅರ್ಜಿಗಳಿಗೆ ನಾಳೆಯೇ ಸಭೆ ನಡೆಸಿ, ಅಧಿಕಾರಿಗಳಿಗೆ ಒಂದು ತಿಂಗಳ ಕಾಲಾವಕಾಶ ನೀಡಿ ನಿಗದಿತ ಅವಧಿಯಲ್ಲಿಯೇ ಈ ಅರ್ಜಿಗಳ ಪರಿಹಾರಕ್ಕೆ ಕ್ರಮ ವಹಿಸಲಾಗುವುದು ಎಂದು ಹೇಳಿದರು.
ಅನುದಾನವನ್ನು ಬಳಸಿಕೊಂಡು ಅಲ್ಪಸಂಖ್ಯಾತ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿ, ರಾಜ್ಯದ ೧೫ ಜಿಲ್ಲೆಗಳಲ್ಲಿ ವಕ್ಫ್ ಮಂಡಳಿಯಿಂದ ಪಿಯು ಕಾಲೇಜ್ ನಿರ್ಮಾಣ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ಕಾಲೇಜ್ ನಿರ್ಮಾಣದ ಉದ್ದೇಶ ಹೊಂದಲಾಗಿದೆ ಎಂದು ಹೇಳಿದರು.ರಾಜ್ಯ ಸಾಬೂನು-ಮಾರ್ಜಕ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಸಿ.ಎಸ್.ನಾಡಗೌಡ ಮಾತನಾಡಿ, ವಕ್ಫ್ ಅದಾಲತ್‌ಗಳನ್ನು ಹಮ್ಮಿಕೊಳ್ಳುವ ಮೂಲಕ ಗ್ರಾಮ, ತಾಲೂಕಾ ಮಟ್ಟದ ಹಾಗೂ ಜಿಲ್ಲಾ ಮಟ್ಟದ ವಿವಿಧ ವಕ್ಫ್ ಸಮಸ್ಯೆ, ಸ್ಮಶಾನ ಜಾಗದ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವುದು ಶ್ಲಾಘನೀಯ ಎಂದರು.
ಮೌಲಾನಾ ತನ್ವೀರ ಪೀರಾ ಹಾಸ್ಮೀ, ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ, ಶಾಸಕರಾದ ಅಶೋಕ ಮನಗೂಳಿ, ವಿಠ್ಠಲ ಕಟಕದೊಂಡ, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದ ಅಧ್ಯಕ್ಷ ಅನ್ವರಬಾಶಾ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಕನ್ನಾನ್ ಮುಶ್ರೀಫ್ ಸೇರಿದಂತೆ ಹಲವರು ಇದ್ದರು.-----------ಬಾಕ್ಸ್
ಅಲ್ಲಾ ಕೇಂದ್ರ ಬಿಜೆಪಿ ಸರ್ಕಾರ ಕೆಡವುತ್ತಾನೆ: ಜಮೀರ್ವಿಜಯಪುರದಲ್ಲಿ ದೊಡ್ಡ ದೊಡ್ಡ ಸೈತಾನ್(ರಾಕ್ಷಸ) ಇವೆ. ನೀವು ಸೈತಾನಗಳಿಗೆ ಹೆದರಬೇಕಿಲ್ಲ ಎಂದು ಜಮೀರ್ ಶಾಸಕ ಯತ್ನಾಳ ವಿರುದ್ಧ ವಾಗ್ದಾಳಿ ನಡೆಸಿದರು.
ಅಲ್ಲಾ ಮನಸು ಮಾಡಿದರೆ ಕೇಂದ್ರ ಬಿಜೆಪಿ ಸರ್ಕಾರ ಕೆಡವುತ್ತಾನೆ. ಬಿಜೆಪಿ ಚಾರ್ ಸೋ ಪಾರ್ ಅಂತಿತ್ತು. ಆದರೆ ಅಲ್ಲಾ ಅವರನ್ನ 400 ದಾಟೋಕೆ ಬಿಡಲಿಲ್ಲ. ಅಲ್ಲಾಮಿಯಾ 240 ತಂದು ನಿಲ್ಲಿಸಿದ್ದಾನೆ. ಬಿಜೆಪಿ ಅಧಿಕಾರ ಎರಡು ಪಿಲ್ಲರ್ ಮೇಲೆ ನಿಂತಿದೆ. ಆಂಧ್ರ ಸಿಎಂ, ಬಿಹಾರ್ ಸಿಎಂ ಎರಡು ಪಿಲ್ಲರ್ ಒಂದು ಪಿಲ್ಲರ್ ಅಲುಗಾಡಿದ್ರು ಬಿಲ್ಡಿಂಗ್ ಬೀಳುತ್ತೆ. ಖುದಾ ಬಯಸಿದ್ರೆ ಏನುಬೇಕಾದ್ರು ಆಗುತ್ತೆ ಎಂದು ಸಚಿವ ಜಮೀರ್ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ, ವಕ್ಫ್ ರದ್ದು ವಿಚಾರದಲ್ಲಿ ಖುದಾ ನೋಡಿಕೊಳ್ತಾನೆ, ಬೇರೆ ದಾರಿ ಇವೆ ಎಂದಷ್ಟೇ ಹೇಳಿದರು.