3 ತಿಂಗಳಲ್ಲಿ ವಿಜಯಪುರ ಏರ್ಪೋರ್ಟ್ ಕಾರ್ಯಾರಂಭ: ಎಂ‌.ಬಿ. ಪಾಟೀಲ

KannadaprabhaNewsNetwork |  
Published : Jul 31, 2026, 03:00 AM IST
ಎಂ‌.ಬಿ. ಪಾಟೀಲ | Kannada Prabha

ಸಾರಾಂಶ

ವಿಜಯಪುರ: ಕಾರ್ಯಾರಂಭ‌ ಮಾಡಲು ಸಿದ್ಧವಾಗಿರುವ ವಿಜಯಪುರ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ಇದ್ದ ಪರಿಸರ ಸಂಬಂಧಿ ಅನುಮತಿಯ ಅಡೆತಡೆಯನ್ನು ಸುಪ್ರೀಂಕೋರ್ಟಿನ ತ್ರಿಸದಸ್ಯ ಪೀಠ ಬುಧವಾರ ನೀಡಿರುವ ಅಂತಿಮ‌ ತೀರ್ಪಿನಲ್ಲಿ ನಿವಾರಿಸಿದೆ. ಹೀಗಾಗಿ ಮುಂದಿನ ಪ್ರಕ್ರಿಯೆಗಳು ನಿರೀಕ್ಷೆಯಂತೆ ನಡೆದರೆ ಮೂರು ತಿಂಗಳೊಳಗೆ ವಿಮಾನ‌ ನಿಲ್ದಾಣ ಲೋಕಾರ್ಪಣೆ ನೆರವೇರಿಸಬಹುದು ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ‌.ಬಿ. ಪಾಟೀಲ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ವಿಜಯಪುರ

ಕಾರ್ಯಾರಂಭ‌ ಮಾಡಲು ಸಿದ್ಧವಾಗಿರುವ ವಿಜಯಪುರ ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ಇದ್ದ ಪರಿಸರ ಸಂಬಂಧಿ ಅನುಮತಿಯ ಅಡೆತಡೆಯನ್ನು ಸುಪ್ರೀಂಕೋರ್ಟಿನ ತ್ರಿಸದಸ್ಯ ಪೀಠ ಬುಧವಾರ ನೀಡಿರುವ ಅಂತಿಮ‌ ತೀರ್ಪಿನಲ್ಲಿ ನಿವಾರಿಸಿದೆ. ಹೀಗಾಗಿ ಮುಂದಿನ ಪ್ರಕ್ರಿಯೆಗಳು ನಿರೀಕ್ಷೆಯಂತೆ ನಡೆದರೆ ಮೂರು ತಿಂಗಳೊಳಗೆ ವಿಮಾನ‌ ನಿಲ್ದಾಣ ಲೋಕಾರ್ಪಣೆ ನೆರವೇರಿಸಬಹುದು ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ‌.ಬಿ. ಪಾಟೀಲ ತಿಳಿಸಿದ್ದಾರೆ.

ಈ ಸಂಬಂಧ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ, ನ್ಯಾ.ಜಯಮಾಲ್ಯ ಬಾಗ್ಚಿ ಮತ್ತು ನ್ಯಾ.ವಿಪುಲ್ ಪಾಂಚೋಲಿ ಅವರಿದ್ದ ಪೀಠವು ನೀಡಿರುವ ಅಂತಿಮ ತೀರ್ಪು ಸ್ವಾಗತಾರ್ಹ. ಅಲ್ಲದೆ, ಈ ವಿಚಾರದಲ್ಲಿ ವಿಜಯಪುರ ವಿಮಾನ ನಿಲ್ದಾಣ ಯೋಜನೆಯಲ್ಲಿರುವ ಸಾರ್ವಜನಿಕ ಹಿತಾಸಕ್ತಿ ತಿಳಿದುಕೊಂಡು, ರಾಜ್ಯದ ಪರವಾಗಿ ವಿಚಾರ ಮಂಡಿಸಿದ ಕೇಂದ್ರ ಸರ್ಕಾರದ ಸಾಲಿಸಿಟರ್‌ ಜನರಲ್ ತುಷಾರ ಮೆಹತಾ, ಹೆಸರಾಂತ ವಕೀರಾದ ಕಪಿಲ್ ಸಿಬಲ್, ದೇವದತ್ತ ಕಾಮತ, ಅಡ್ವೊಕೇಟ್ ಜನರಲ್ ಶಶಿಕಿರಣ ಶೆಟ್ಟಿ ಮತ್ತು ರಾಜ್ಯದ ಪರ ವಕೀಲ ನಿಶಾಂತ ಪಾಟೀಲ ಅವರಿಗೆ ಸಚಿವರು ವಿಶೇಷವಾಗಿ ಧನ್ಯವಾದ ಹೇಳಿದ್ದಾರೆ.

ಖಾಸಗಿ ಸೇರಿದಂತೆ ಸಾರ್ವಜನಿಕ ಹಿತಾಸಕ್ತಿಯ ಯೋಜನೆಗಳನ್ನು ಕೈಗೆತ್ತಿಕೊಳ್ಳುವಾಗಲೇ ಪರಿಸರ ಸಂಬಂಧಿ ಅನುಮೋದನೆ ತೆಗೆದುಕೊಳ್ಳಬೇಕಾಗಿರುವುದು ಕಡ್ಡಾಯವಾಗಿದೆ. ಇದನ್ನು ಪಾಲಿಸದ ದೇಶದ ಎಲ್ಲಾ ಯೋಜನೆಗಳನ್ನೂ ರದ್ದುಪಡಿಸುವಂತೆ ಸುಪ್ರೀಂಕೋರ್ಟ್ 2025ರ ಮೇ 16ರಂದು ಆದೇಶಿಸಿತ್ತು. ಇದರಿಂದಾಗಿ ವಿಜಯಪುರ ಏರ್ಪೋರ್ಟ್ ಯೋಜನೆಗೂ ಸಂಕಷ್ಟ ಎದುರಾಗಿತ್ತು. ಆಗ ನಾನು ಮೆಹತಾ, ಸಿಬಲ್ ಮತ್ತು ಪಾಟೀಲ್ ಅವರನ್ನು ಸಂಪರ್ಕಿಸಿ, ಈ ತೊಡಕನ್ನು ನಿವಾರಿಸಲು ಕೇಳಿಕೊಂಡಿದ್ದೆ. ಇಂದಿನ ಅಂತಿಮ ತೀರ್ಪಿನಿಂದ ನಿರಾಳವಾಗಿದ್ದೇನೆ ಎಂದವರು ನೆನಪಿಸಿಕೊಂಡಿದ್ದಾರೆ.

ಸುಪ್ರೀಂಕೋರ್ಟ್ ಈ ವರ್ಷದ ಏ.1ರಂದು ವಿಚಾರಣೆ ನಡೆಸಿದಾಗ, ಪರಿಸರ ಸಂಬಂಧಿ ಅನುಮತಿಗೆ ಕಾಯುತ್ತಿರುವ ಯೋಜನೆಗಳಿಗೆ ತಾತ್ಕಾಲಿಕ ವಿನಾಯಿತಿ ನೀಡಿ, ವಿಸ್ತೃತ ಅಧ್ಯಯನಕ್ಕೆ ಸೂಚಿಸಿ, ಅಂತಿಮ‌ ತೀರ್ಪನ್ನು ಕಾದಿರಿಸಿತ್ತು. ಇವತ್ತು ನೀಡಿರುವ ತೀರ್ಪಿನಲ್ಲಿ ಶಾಶ್ವತ ವಿನಾಯಿತಿ ನೀಡಿದೆ. ಏತನ್ಮಧ್ಯೆ ನಾವು ವಿಜಯಪುರ ಏರ್ಪೋರ್ಟ್ ಸಂಬಂಧ ಪರಿಸರ ಸಂಬಂಧಿ ಅನುಮತಿ ಕೋರಿ ಅರ್ಜಿ ಹಾಕಿದ್ದೇವೆ ಎಂದವರು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.ಪರಿಸರ ಸಂಬಂಧಿ ಒಪ್ಪಿಗೆ ಸಿಕ್ಕಿದ ಬಳಿಕ ನಾಗರಿಕ ವಿಮಾನಯಾನ ಮಹಾನಿರ್ದೇಶಕರು ವಿಜಯಪುರ ವಿಮಾನ ನಿಲ್ದಾಣದಲ್ಲಿ ಆಗಿರುವ ಕೆಲಸಗಳನ್ನು ಪರಿಶೀಲಿಸಲಿದ್ದಾರೆ. ಅದೊಂದು ಪ್ರಕ್ರಿಯೆ ಮುಗಿದರೆ ವಿಮಾನ ನಿಲ್ದಾಣ ಕಾರ್ಯಾರಂಭಕ್ಕೆ ದಾರಿ ಸುಗಮವಾಗಲಿದೆ ಎಂದು ಪಾಟೀಲ ಹೇಳಿದ್ದಾರೆ.

ಈ ವಿಮಾನ ನಿಲ್ದಾಣ ನಿರ್ಮಾಣಕ್ಕೆ 614 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣ ವಿನಿಯೋಗಿಸಲಾಗಿದೆ. ಇದು ಕಾರ್ಯಾರಂಭ ಮಾಡಿದರೆ ಕಿತ್ತೂರು ಕರ್ನಾಟಕ ಮತ್ತು ನೆರೆ ಹೊರೆ ಪ್ರದೇಶಗಳಿಗೂ ಅನುಕೂಲವಾಗಲಿದೆ ಎಂದು ಪಾಟೀಲ ಪ್ರತಿಪಾದಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಿಕೋದ್ಯಮದಲ್ಲಿ ಉದ್ಯೋಗ ಕಸಿದುಕೊಳ್ಳುತ್ತಿರುವ ಎಐ
ಮಹಾವೀರ ಸಹಕಾರಿ ಬ್ಯಾಂಕ್‌ಗೆ ₹4.01 ಕೋಟಿ ಲಾಭ