ಕನ್ನಡಪ್ರಭ ವಾರ್ತೆ ವಿಜಯಪುರ
ಈ ಬಾರಿಯ ಪಿಯುಸಿ ಫಲಿತಾಂಶದಲ್ಲಿ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ವಿದ್ಯಾರ್ಥಿನಿಯರ ಉತ್ತೀರ್ಣ ಪ್ರಮಾಣ ಶೇ.೬೫.೨೨ ರಷ್ಟಿದ್ದರೆ, ವಿದ್ಯಾರ್ಥಿಗಳ ಫಲಿತಾಂಶ ಶೇ.೫೦.೪ ಕ್ಕೆ ಸೀಮಿತವಾಗಿದೆ. ಒಟ್ಟಾರೆ ಫಲಿತಾಂಶವನ್ನು ಅವಲೋಕಿಸುವುದಾದರೆ ಪರೀಕ್ಷೆಗೆ ಹಾಜರಾದ ೧೫,೩೪೨ ವಿದ್ಯಾರ್ಥಿನಿಯರ ಪೈಕಿ ೧೦,೦೦೬ ವಿದ್ಯಾರ್ಥಿನಿಯರು ಉತ್ತೀರ್ಣರಾಗಿ ಶೇ.೬೫.೨೨ ರಷ್ಟು ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ.
ಪರೀಕ್ಷೆಗೆ ಹಾಜರಾದ ೧೭,೫೩೩ ವಿದ್ಯಾರ್ಥಿಗಳ ಪೈಕಿ ೮,೮೩೭ ಅಂದರೆ ಶೇ.೫೦.೪ ರಷ್ಟು ಬಾಲಕರು ಮಾತ್ರ ಉತ್ತೀರ್ಣರಾಗಿದ್ದಾರೆ. ವಿಭಾಗವಾರು ಫಲಿತಾಂಶದ ಪ್ರಗತಿಯನ್ನು ನೋಡಿದಾಗ ವಿಜ್ಞಾನ ವಿಭಾಗದಲ್ಲಿ ಅತೀ ಹೆಚ್ಚು ಅಂದರೆ ಶೇ.೭೫.೨೫ ರಷ್ಟು ಫಲಿತಾಂಶ ಬಂದಿದೆ. ವಾಣಿಜ್ಯ ವಿಭಾಗದಲ್ಲಿ ಶೇ.೫೭.೫೧ ಫಲಿತಾಂಶ ಬಂದರೆ, ಕಲಾ ವಿಭಾಗದಲ್ಲಿ ಶೇ.೪೩.೮೯ ಫಲಿತಾಂಶ ಬಂದಿದೆ.ವಿಜ್ಞಾನ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ ೧೪,೩೨೮ ವಿದ್ಯಾರ್ಥಿಗಳ ಪೈಕಿ ೧೦,೧೦೫ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ ೩,೭೦೪ ವಿದ್ಯಾರ್ಥಿಗಳ ಪೈಕಿ ೨,೧೩೦ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ ೧೪,೪೮೧ ವಿದ್ಯಾರ್ಥಿಗಳ ಪೈಕಿ ೬೩೫೬ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಎಂ.ಆರ್.ಅಂಬೇಡ್ಕರ ಪದವಿಪೂರ್ವ ಮಹಾವಿದ್ಯಾಲಯದ ಐಶ್ವರ್ಯ ಚವ್ಹಾಣ ಹಾಗೂ ಬಿ.ಎಂ.ಪಾಟೀಲ ಪದವಿ ಪೂರ್ವ ಮಹಾವಿದ್ಯಾಲಯದ ಜಾಹ್ನವಿ ತೋಸ್ನಿವಾಲ್ ಶೇ.೯೮.೮೩ (೫೯೩) ಅಂಕ ಪಡೆದು ಪ್ರಥಮ ಸ್ಥಾನ ಹಂಚಿಕೊಂಡಿದ್ದಾರೆ.
ನಾಗರಬೆಟ್ಟ ಎಕ್ಸಪರ್ಟ್ ಕಾಲೇಜಿನ ವಾಣಿಶ್ರೀ ಹಳ್ಳದ ಶೇ.೯೭.೮೩(೫೮೭) ಅಂಕ ಪಡೆದು ದ್ವಿತೀಯ ಸ್ಥಾನ ಪಡೆದಿದ್ದಾಳೆ. ತುಂಗಳ ಪಿಯು ಕಾಲೇಜಿನ ದಯಾನಂದ ಖಾರಟ್, ಎಕ್ಸಲೆಂಟ್ ಪಿಯು ಕಾಲೇಜಿನ ಇಷಾ ದೇಸಾಯಿ ಹಾಗೂ ಬೆನಕಟ್ಟಿ ಪದವಿಪೂರ್ವ ಕಾಲೇಜಿನ ರಕ್ಷಿತಾ ಖೇಡ ಶೇ.೯೭.೬೬(೫೮೬) ಅಂಕ ಪಡೆದು ತೃತೀಯ ಸ್ಥಾನ ಹಂಚಿಕೊಂಡಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಬಿ.ಎಂ.ಪಾಟೀಲ ಪದವಿ ಪೂರ್ವ ಕಾಲೇಜಿನ ವೈಷ್ಣವಿ ಬಿರಾದಾರ ಶೇ.೯೯.೧೬(೫೯೫) ಅಂಕ ಪಡೆದು ವಿಜಯಪುರ ಜಿಲ್ಲೆಗೆ ಟಾಪರ್ ಆಗಿದ್ದಾಳೆ. ಸೇಂಟ್ ಜೋಸೆಫ್ ಕಾಲೇಜಿನ ಅಭಿಗ್ಯ್ನಾ ಕುಲಕರ್ಣಿ ಶೇ.೯೮.೮೩ ರಷ್ಟು ಅಂಕ ಪಡೆದು ದ್ವಿತೀಯ ಸ್ಥಾನ, ಸೇಂಟ್ ಜೋಸೇಪ್ ಕಾಲೇಜಿನ ಮದಿಯಾ ಮೆಹರೀನ್ ಕಿಲ್ಲೇದಾರ ಶೇ.೯೭.೬೭(೫೮೬) ಅಂಕ ಪಡೆದು ತೃತೀಯ ಸ್ಥಾನ ಸಂಪಾದಿಸಿದ್ದಾರೆ.ಕಲಾ ವಿಭಾಗದಲ್ಲಿ ಸಿಂದಗಿಯ ಆರ್.ಡಿ.ಪಾಟೀಲ ಕಾಲೇಜಿನ ಮಲಕಣ್ಣ ತಳವಾರ ಶೇ.೯೮.೧೬ (೫೮೯) ಅಂಕ ಪಡೆದು ಜಿಲ್ಲೆಗೆ ಪ್ರಥಮ, ಮೋರಟಗಿ ಎಸ್‌ಎಸ್‌ಎಸ್‌ಎಸ್ ಕಾಲೇಜಿನ ಲಕ್ಕಮ್ಮ ಚಿನ್ನಾಗೋಳ ಶೇ.೯೭.೮೩ (೫೮೭) ದ್ವಿತೀಯ ಹಾಗೂ ಗುಣದಾಳ ವಿವೇಕಾನಂದ ಕಾಲೇಜಿನ ಪೂರ್ಣಿಮಾ ಲಕ್ಕುರಿ ಶೇ.೯೭.೬೬ (೫೮೫) ಅಂಕ ಪಡೆದು ತೃತೀಯ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಡಾ.ಸಿ.ಕೆ. ಹೊಸಮನಿ ಮಾಹಿತಿ ನೀಡಿದರು.