ವಸತಿ ಇಲಾಖೆ ಮನೆ ಬೇಕಿದ್ದರೆ ಹಣ ಕೊಡಬೇಕು

Published : Jun 22, 2025, 11:04 AM IST
Threaten phone call

ಸಾರಾಂಶ

‘ವಸತಿ ಇಲಾಖೆಯಲ್ಲಿ ಹಣ ಕೊಟ್ಟರೆ ಮನೆ ಸಿಗುತ್ತದೆ’ ಎಂದು ನಾಗಠಾಣ ಶಾಸಕರ ಆಪ್ತ ಸಹಾಯಕ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದ್ದು, ರಾಜ್ಯ ರಾಜಕೀಯದಲ್ಲಿ ಉರಿಯುತ್ತಿರುವ ತುಪ್ಪಕ್ಕೆ ಬೆಂಕಿ ಸುರಿದಂತಾಗಿದೆ.

 ವಿಜಯಪುರ :  ‘ವಸತಿ ಇಲಾಖೆಯಲ್ಲಿ ಹಣ ಕೊಟ್ಟರೆ ಮನೆ ಸಿಗುತ್ತದೆ’ ಎಂದು ನಾಗಠಾಣ ಶಾಸಕರ ಆಪ್ತ ಸಹಾಯಕ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದ್ದು, ರಾಜ್ಯ ರಾಜಕೀಯದಲ್ಲಿ ಉರಿಯುತ್ತಿರುವ ತುಪ್ಪಕ್ಕೆ ಬೆಂಕಿ ಸುರಿದಂತಾಗಿದೆ.

ಲಂಚ ನೀಡಿದವರಿಗೆ ಮಾತ್ರವೇ ರಾಜೀವ್‌ ಗಾಂಧಿ ವಸತಿ ಯೋಜನೆಯಲ್ಲಿ ಮನೆ ಮಂಜೂರು ಮಾಡಲಾಗಿದೆ ಎಂಬ ಆಳಂದ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಬಿ.ಆರ್‌.ಪಾಟೀಲ್‌ ಅವರ ಆಡಿಯೋ ಸಂಚಲನ ಮೂಡಿಸಿದ್ದು, ಅದರ ಬೆನ್ನಲ್ಲೇ ಮತ್ತೊಂದು ಆಡಿಯೋ ಬಹಿರಂಗವಾಗಿದೆ.

ನಾಗಠಾಣ ಶಾಸಕ ವಿಠಲ ಕಟಕಧೋಂಡ ಅವರ ಆಪ್ತ ಸಹಾಯಕ ವಿಠ್ಠಲ ಬಗಲಿ ಫಲಾನುಭವಿ ಜೊತೆಗೆ ಸಂಭಾಷಣೆ ನಡೆಸಿರುವ ಆಡಿಯೋ ಇದು ಎನ್ನಲಾಗಿದೆ. ‘ಗ್ರಾಮ ಪಂಚಾಯತಿಯಿಂದ ಮನೆ ಸಿಗಲ್ಲ. ಹಣ ನೀಡಿ ಮನೆ ತರುತ್ತಿದ್ದೇವೆ. ಮನೆ ಬೇಕಾದರೆ ಫಲಾನುಭವಿ ತಂದೆಗೆ ಬಂದು ಭೇಟಿ ಆಗಲು ಹೇಳಿ’ ಎಂದು ಆಡಿಯೋದಲ್ಲಿ ಹೇಳಲಾಗಿದೆ.

ಆಪ್ತ ಸಹಾಯಕ ವಿಠ್ಠಲ ಬಗಲಿ ಈ ಹಿಂದೆ ಸಿಂದಗಿ ಬಿಜೆಪಿ ಶಾಸಕ ರಮೇಶ ಭೂಸನೂರ ಅಪ್ತ ಸಹಾಯಕನಾಗಿದ್ದರು. ಇದೀಗ ನಾಗಠಾಣ ಕಾಂಗ್ರೆಸ್ ಶಾಸಕ ವಿಠ್ಠಲ ಕಟಕಧೋಂಡ ಆಪ್ತ ಸಹಾಯಕನಾಗಿ ಕೆಲಸ ಮಾಡುತ್ತಿದ್ದಾರೆ. ಈ ಹಿಂದೆ ಸಿಂದಗಿ ಮತಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಅತಿ ಹೆಚ್ಚು ಮನೆ ನೀಡಿರುವ ಆರೋಪ ಕೇಳಿ ಬಂದಿತ್ತು. ಇದೀಗ ಈ ಆಡಿಯೋ ವೈರಲ್‌ ಆದ ಬೆನ್ನಲ್ಲೇ, ಸಿಂದಗಿ ಮತಕ್ಷೇತ್ರದ ಜನ ಸಾಮಾಜಿಕ ಜಾಲತಾಣದಲ್ಲಿ ಈ ಭ್ರಷ್ಟಾಚಾರದ ಬಗ್ಗೆ ಪೋಸ್ಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.ಆರೋಪ ಸಾಬೀತಾದರೆ ರಾಜೀನಾಮೆ: ಶಾಸಕ ವಿಠ್ಠಲ

ಈ ಆಡಿಯೋ ವಿಚಾರ ನನಗೆ ಗೊತ್ತಿಲ್ಲ. ಇದು ಸಾಬೀತಾದರೆ ಈಗಲೇ ರಾಜೀನಾಮೆ ಕೊಡುತ್ತೇನೆ. ಮನೆ ಹಂಚಿಕೆ ಒಂದೇ ಅಲ್ಲ, ಗಂಗಾ ಕಲ್ಯಾಣ ಸೇರಿದಂತೆ ಯಾವುದೇ ಯೋಜನೆಯಲ್ಲಿ ಹಣ ಪಡೆದಿರುವುದು ಸಾಬೀತಾದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ. ವಿಠ್ಠಲ ಬಗಲಿ ಜೊತೆ ಮಾತನಾಡಿದ್ದೇನೆ. ಅದು ಅವನ ಧ್ವನಿ ಅಲ್ಲ ಎಂದು ಹೇಳಿದ್ದಾನೆ. ಆದರೂ ಕೂಡ ತನಿಖೆ ಆಗಲಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಲಿ.

- ವಿಠ್ಠಲ ಕಟಕಧೋಂಡ, ಕಾಂಗ್ರೆಸ್ ಶಾಸಕ.

PREV
Read more Articles on

Recommended Stories

ಪ್ರತಿಭೆ ಜನ್ಮದಿಂದ, ಪಾಂಡಿತ್ಯ ಅಧ್ಯಯನದಿಂದ ದಕ್ಕಿದೆ
ಪ್ರೀತಿ, ರಕ್ಷಣೆಯ ಪ್ರತೀಕ ರಕ್ಷಾ ಬಂಧನ