ಶಿವಮೊಗ್ಗ: ಯಡಿಯೂರಪ್ಪ ಪುತ್ರ ಅಂತೇಳಿ ವಿಜಯೇಂದ್ರನಿಗೆ ರಾಜ್ಯಾಧ್ಯಕ್ಷ ಸ್ಥಾನ ಕೊಟ್ಟಿದ್ದಾರೆ. ಬಹಳ ಹಿರಿಯರು ಇದ್ದರು. ಅವರ ತಪ್ಪಿಸಿ ಇವರಿಗೆ ಸಿಕ್ಕಿದೆ. ಇದು ಮುಳ್ಳಿನ ಹಾಸಿಗೆ, ಬಹಳ ಎಚ್ಚರಿಕೆ ಇರಬೇಕು ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.
ಶಿವಮೊಗ್ಗದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರು ತಿಂಗಳ ಮೇಲೆ ಜ್ಞಾನೋದಯವಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಆದರೆ, ರಾಜ್ಯಾಧ್ಯಕ್ಷರ ಆಯ್ಕೆ ವಿಚಾರದಲ್ಲಿ ಬಿಜೆಪಿಯಲ್ಲಿ ಅಸಮಾಧಾನ ಭುಗಿಲೆಳಲಿದೆ. ಬಸವನಗೌಡ ಯತ್ನಾಳ್ ಅವರು ಈಗ ಆಟ ಶುರು ಮಾಡುತ್ತಾರೆ ಎಂದು ವ್ಯಂಗ್ಯವಾಡಿದರು.ವಿಧಾನಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿಗೆ 65 ಸ್ಥಾನ ಬಂದಿದೆ. ಹೀಗಾಗಿ, ವಿಜಯೇಂದ್ರ ಅಧ್ಯಕ್ಷರಾಗಿದ್ದರಿಂದ ಕಾಂಗ್ರೆಸ್‌ಗೆ ಏನೂ ನಷ್ಟವಿಲ್ಲ. ವಿಜಯೇಂದ್ರ ಅಧ್ಯಕ್ಷರಾದ ಮೇಲೆ ಬಿಜೆಪಿಗೆ ನಷ್ಟವಾಗಲಿದೆ ಎಂದು ಲೇವಡಿ ಮಾಡಿದರು.
ತಮ್ಮ ವಿರುದ್ಧ ಕೆಲ ಕಾಂಗ್ರೆಸ್ ನಾಯಕರು ನಿಯೋಗ ಹೋಗಿ ಡಿ.ಕೆ.ಶಿವಕುಮಾರ್‌ಗೆ ದೂರು ಕೊಟ್ಟಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಅದರ ಬಗ್ಗೆ ಪ್ರಶ್ನೆ ಮಾಡಲು ಹೋಗಲ್ಲ. ಪಕ್ಷದ ವರಿಷ್ಠರು ಈ ಬಗ್ಗೆ ತೀರ್ಮಾನ ಮಾಡುತ್ತಾರೆ. ಸಣ್ಣಪುಟ್ಟ ಸಮಸ್ಯೆ ಸರಿಪಡಿಸುತ್ತಾರೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಇಬ್ಬರೂ ಕರೆ ಮಾಡಿ ನನ್ನ ಬಳಿ ಮಾತನಾಡಿದ್ದಾರೆ. ಆದರೆ, ಸೈಲೆಂಟ್ ಆಗಿರು ಅಂತಾ ಯಾರು ಹೇಳಿಲ್ಲ. ಸೈಲೆಂಟ್ ಆಗುವ ವ್ಯಕ್ತಿಯೂ ನಾನಲ್ಲ ಎಂದು ಪ್ರಶ್ನೆಯೊಂದಕ್ಕೆ ಖಾರವಾಗಿ ಉತ್ತರಿಸಿದರು.- - -
(-ಫೋಟೋ: ಗೋಪಾಲಕೃಷ್ಣ ಬೇಳೂರು)