ರಾಹುಲ್‌ರಿಂದ ಕಾಂಗ್ರೆಸ್‌ಗೆ ರಾಹು ಕಾಲ ಶುರು: ವಿಜಯೇಂದ್ರ ವ್ಯಂಗ್ಯ

KannadaprabhaNewsNetwork |  
Published : Nov 23, 2023, 01:45 AM IST
ಕಾರ್ಯಕರ್ತರ ಸಮಾವೇಶದಲ್ಲಿ ವಿಜಯೇಂದ್ರ ಭಾಷಣ | Kannada Prabha

ಸಾರಾಂಶ

ರಾಹುಲ್ಲ್‌ ಗಾಂಧಿ ಅವರಿಂದ ಕಾಂಗ್ರೆಸ್ಸ್‌ಗೆ ರಾಹುಕಾಲ ಶುರು: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವ್ಯಂಗ್ಯ

ಕನ್ನಡಪ್ರಭ ವಾರ್ತೆ ಮಂಗಳೂರು

ರಾಹುಕಾಲದಲ್ಲಿ ಯಾವುದೇ ಒಳ್ಳೆಯ ಕೆಲಸ ಮಾಡುವುದಿಲ್ಲ, ಹಾಗೆಯೇ ರಾಹುಲ್‌ಗಾಂಧಿ ನೇತೃತ್ವ ವಹಿಸಿದ ಅಂದಿನಿಂದ ಕಾಂಗ್ರೆಸ್‌ಗೆ ರಾಹುಕಾಲ ಶುರುವಾಗಿದೆ ಎಂದು ಶಾಸಕ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕುಹಕವಾಡಿದ್ದಾರೆ. ಪ್ರಧಾನಿ ಮೋದಿ ವಿಶ್ವಕಪ್‌ ವೀಕ್ಷಿಸಿ ಭಾರತ ತಂಡ ಸೋತಿತು ಎಂಬ ರಾಹುಲ್‌ ಗಾಂಧಿ ಹೇಳಿಕೆಗೆ ಈ ರೀತಿ ವ್ಯಂಗ್ಯವಾಡಿದರು.

ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಬುಧವಾರ ಮಂಗಳೂರಿಗೆ ಭೇಟಿ ನೀಡಿದ ವೇಳೆ ನಗರದ ಸಿ.ವಿ.ನಾಯಕ್‌ ಸಭಾಂಗಣದಲ್ಲಿ ಬಿಜೆಪಿ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಕಾಂಗ್ರೆಸ್‌ ನಾಯಕನ ಹೆಸರು ರಾಹುಲ್‌. ರಾಹುಲ್‌ ಗಾಂಧಿಗೂ ರಾಹು ಕಾಲಕ್ಕೂ ಏನೂ ವ್ಯತ್ಯಾಸ ಇಲ್ಲ. ರಾಹುಲ್‌ ಗಾಂಧಿ ಅಧಿಕಾರ ಸ್ವೀಕರಿಸಿದ ಬಳಿಕ ಕಾಂಗ್ರೆಸ್‌ಗೆ ರಾಹು ಕಾಲ ಶುರುವಾಗಿದೆ. ಸ್ವಾತಂತ್ರ್ಯ ಬಂದ ನಂತರದ ಕಾಂಗ್ರೆಸ್‌ ಆಡಳಿತಕ್ಕೆ ಇತಿಶ್ರೀ ಹಾಡಿದ್ದೇ ರಾಹುಲ್‌ ಗಾಂಧಿ. ಇಂಡಿಯಾ ಕೂಟದ ನಾಯಕ ರಾಹುಲ್‌ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆ ಅಧಿಕಾರಕ್ಕೆ ಬರುವುದನ್ನು ತಡೆಯುವ ಸಂಚು ನಡೆಸುತ್ತಿದ್ದಾರೆ. ಯಾವ ದುಷ್ಟ ಶಕ್ತಿಗೂ ಮೋದಿ ಅಧಿಕಾರವನ್ನು ತಡೆಯಲು ಸಾಧ್ಯವಿಲ್ಲ. ಪ್ರಸಕ್ತ ಅಧಿಕಾರದ ಅಮಲಿನಲ್ಲಿ ಇರುವ ಸಿಎಂ, ಡಿಸಿಎಂ ಹಾಗೂ ಕಾಂಗ್ರೆಸ್‌ಗೆ ರಾಜ್ಯದಲ್ಲಿ ಎಲ್ಲ 28 ಸೀಟುಗಳನ್ನು ಗೆಲ್ಲಿಸಿಕೊಡುವ ಮೂಲಕ ಬಿಜೆಪಿಯು ಮೋದಿ ಅವರ ಕೈಬಲಪಡಿಸಲಿದೆ ಎಂದರು.

ರೈತರ ಹಣ ಕಿತ್ತ ಕಾಂಗ್ರೆಸ್‌:

ಯಡಿಯೂರಪ್ಪ ಸಿಎಂ ಆಗಿದ್ದಾಗ ಕೇಂದ್ರದ ಪಿಎಂ ಕಿಸಾನ್‌ ಸನ್ಮಾನ್‌ 6 ಸಾವಿರ ರು.ಗೆ ರಾಜ್ಯದ ಮೊತ್ತ 4 ಸಾವಿರ ರು. ಸೇರಿಸಿ ನೀಡಲಾಗುತ್ತಿತ್ತು. ರಾಜ್ಯದ ಪಾಲಿನ ಈ ಮೊತ್ತವನ್ನು ಸಿಎಂ ಸಿದ್ದರಾಮಯ್ಯ ಸರ್ಕಾರ ಈಗ ಸ್ಥಗಿತಗೊಳಿಸಿದೆ. ಆದರೆ ಬಿಜೆಪಿ ಎಂದೂ ಅಲ್ಪಸಂಖ್ಯಾತ ವಿರೋಧಿ ಅಲ್ಲ, ದೇಶದ್ರೋಹಿಗಳನ್ನು ಮಾತ್ರ ಬಿಜೆಪಿ ಕ್ಷಮಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸುಳ್ಳು ಪ್ರಚಾರದಿಂದ ಬಿಜೆಪಿ ಸೋತಿದೆ. ಈಗ ಜನತೆಗೆ ಕಾಂಗ್ರೆಸ್‌ನ ಆರು ತಿಂಗಳ ಆಡಳಿತ ಏನು ಎಂಬುದು ಅರ್ಥವಾಗಿದೆ. ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಬಿಜೆಪಿ ಮುಂದಿನ ದಿನಗಳಲ್ಲಿ ಬೀದಿಗಿಳಿದು ಹೋರಾಟ ನಡೆಸಲಿದೆ ಎಂದರು.

ನಿಕಟಪೂರ್ವ ರಾಜ್ಯಾಧ್ಯಕ್ಷ, ಸಂಸದ ನಳಿನ್‌ ಕುಮಾರ್‌ ಮಾತನಾಡಿ, ಕಾಂಗ್ರೆಸ್‌ ಆಡಳಿತದಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದ್ದು, ಶೇ.80 ಪರ್ಸಂಟೇಜ್‌ನ ಸರ್ಕಾರವಾಗಿದೆ. ಬರ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದ್ದು, ಟಿಪ್ಪು ಖಡ್ಗದ ಮೆರವಣಿಗೆ ಮಾಡಿದವರ ಕ್ರಮ ಕೈಗೊಳ್ಳುವ ಧೈರ್ಯ ತೋರಿಸದೆ, ಬಿಜೆಪಿಗರ ವಿರುದ್ಧ ಸೇಡು ತೀರಿಸಿಕೊಳ್ಳುಲು ಹೊರಟಿದೆ. ಬಿಜೆಪಿಯ ಯಾವುದೇ ಕಾರ್ಯಕರ್ತರನ್ನು ಮುಟ್ಟಲು ಬಿಡುವುದಿಲ್ಲ ಎಂದು ಹೇಳಿದರು.

ಸ್ಪೀಕರ್‌ ಸ್ಥಾನದ ಬಗ್ಗೆ ಜಾತಿ ಧರ್ಮದ ಥಳಕು ಹಾಕಿದ ಶಾಸಕ ಜಮೀರ್‌ ಅಹ್ಮದ್‌ನ್ನು ಅಸೆಂಬ್ಲಿ ಪ್ರವೇಶಿಸಲು ಬಿಡಬಾರದು. ಕಾಂಗ್ರೆಸ್‌ನ ದುರಾಡಳಿತ ವಿರುದ್ಧ ಹೋರಾಟ ಕೈಗೆತ್ತಿಕೊಳ್ಳಲಾಗುವುದು ಎಂದರು.

ಅಶ್ವಮೇಧ ಕುದುರೆ ಕಟ್ಟಿಹಾಕಲು ಸವಾಲ್‌:

ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗೆ ವಿಜಯೇಂದ್ರ ಜತೆ ಸಾಥ್‌ ನೀಡಲಾಗುವುದು. ನರೇಂದ್ರ ಮೋದಿ ಅವರು ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡುವ ಮೂಲಕ ಅಶ್ವಮೇಧ ಕುದುರೆ ಬಿಟ್ಟಿದ್ದಾರೆ, ಇದನ್ನು ತಾಕತ್ತಿದ್ದರೆ ಕಟ್ಟಿಹಾಕುವಂತೆ ನಳಿನ್‌ ಕುಮಾರ್‌ ಕಟೀಲ್‌ ಅವರು ಕಾಂಗ್ರೆಸ್‌ಗೆ ಸವಾಲೆಸೆದರು.

ಶಾಸಕರಾದ ವೇದವ್ಯಾಸ್‌ ಕಾಮತ್‌, ಡಾ.ಭರತ್‌ ಶೆಟ್ಟಿ, ಉಮಾನಾಥ ಕೋಟ್ಯಾನ್‌, ರಾಜೇಶ್ ನಾಯ್ಕ್‌, ಹರೀಶ್‌ ಪೂಂಜಾ, ಭಾಗೀರಥಿ, ಮೇಯರ್‌ ಸುಧೀರ್‌ ಶೆಟ್ಟಿ, ಉಪ ಮೇಯರ್‌ ಸುನಿತಾ, ಮುಖಂಡ ತಮ್ಮೇಶ್ ಗೌಡ, ವಿಧಾನ ಪರಿಷತ್‌ ಮಾಜಿ ಸದಸ್ಯೆ ತಾರಾ ಅನುರಾಧ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್‌, ವಿಭಾಗ ಪ್ರಭಾರಿ ಉದಯ ಕುಮಾರ್‌ ಶೆಟ್ಟಿ, ಸಹ ಪ್ರಭಾರಿ ಗೋಪಾಲಕೃಷ್ಣ ಹೇರಳೆ, ಜಿಲ್ಲಾ ಪ್ರಭಾರಿ ರಾಜೇಶ್ ಕಾವೇರಿ, ದಕ್ಷಿಣ ಮಂಡಲ ಅಧ್ಯಕ್ಷ ವಿಜಯ ಕುಮಾರ್‌ ಶೆಟ್ಟಿ ಮತ್ತಿತರರಿದ್ದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ ಸ್ವಾಗತಿಸಿದರು. ಕಾರ್ಯದರ್ಶಿ ಸತೀಶ್‌ ಕುಂಪಲ ವಂದಿಸಿದರು. ರಾಮ್‌ದಾಸ್‌ ಬಂಟ್ವಾಳ ನಿರೂಪಿಸಿದರು.

ಸಮಾವೇಶಕ್ಕೆ ಮುನ್ನ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರನ್ನು ವಿಮಾನ ನಿಲ್ದಾಣದಿಂದ ವಾಹನ ಮೆರವಣಿಗೆಯಲ್ಲಿ ನಗರದ ಸರ್ಕ್ಯೂಟ್‌ ಹೌಸ್‌ ವರೆಗೆ ಕರೆತರಲಾಯಿತು. ಅಲ್ಲಿಂದ ತೆರೆದ ವಾಹನದಲ್ಲಿ ಮೆರವಣಿಗೆಯಲ್ಲಿ ಮುಖ್ಯ ರಸ್ತೆ ಮೂಲಕ ಬಂಟ್ಸ್‌ಹಾಸ್ಟೆಲ್‌ ಬಿಜೆಪಿ ಚುನಾವಣಾ ಕಚೇರಿಗೆ ಕರೆತರಲಾಯಿತು.

ಸಮಾವೇಶ ಆವರಣದಲ್ಲಿ ವಿಜಯೇಂದ್ರ ಅಭಿಮಾನಿಗಳು ಸಮಾರು 250 ಕಿಲೋ ತೂಕದ ಸೇಬು ಹಣ್ಣಿನ ಹಾರವನ್ನು ಕ್ರೇನ್‌ ಮೂಲಕ ವಿಜಯೇಂದ್ರಗೆ ಅರ್ಪಿಸಿದರು.

ನಳಿನ್‌ ಕುಮಾರ್‌, ಯೋಗೀಶ್‌ ಭಟ್‌, ಬೂತ್ ಅಧ್ಯಕ್ಷರ ಮನೆ ಭೇಟಿ:

ಸಮಾವೇಶ ಬಳಿಕ ವಿಜಯೇಂದ್ರ ಅವರು ಸಂಸದ ನಳಿನ್‌ ಕುಮಾರ್‌ ಕಟೀಲ್‌ ಮನೆಗೆ ತೆರಳಿ ಭೋಜನ ಸ್ವೀಕರಿಸಿದರು. ಅಲ್ಲಿಂದ ಮಾಜಿ ಶಾಸಕ ಯೋಗೀಶ್‌ ಭಟ್‌ ಅವರನ್ನು ಭೇಟಿ ಮಾಡಿ ಕುಶಲೋಪರಿ ನಡೆಸಿದರು. ಬೂತ್‌ ಸಮಿತಿ ಅಧ್ಯಕ್ಷ ಯಶವಂತ ಕುದ್ರೋಳಿ ಅವರ ಮನೆಗೂ ಭೇಟಿ ನೀಡಿ ಪಕ್ಷ ಸಂಘಟನೆ ಬಗ್ಗೆ ಮಾತನಾಡಿದರು. ರಾತ್ರಿ ಅಡ್ಯಾರಿನಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇನ್ನೂ 1 ವರ್ಷ ಸಲೀಂ ರಾಜ್ಯ ಪೊಲೀಸ್ ಬಾಸ್‌
ಸಂಪುಟ ಪುನಾರಚನೆ ಸರ್ಕಸ್; ಶಾಸಕರು- ಸುರ್ಜೇವಾಲ ಭೇಟಿ