ಕನ್ನಡಪ್ರಭ ವಾರ್ತೆ ಸರಗೂರು
ಇಲ್ಲಿನ ಶ್ರೀ ಇಂದ್ರಾಣಿ ಅಮ್ಮನವರ ದೇವಾಲಯವು ಹಿಂದಿನ ದಿನದಿಂದಲೇ ದೇವಾಲಯವನ್ನು ತಳಿರು-ತೋರಣ, ಬಣ್ಣ ಬಣ್ಣದ ರಂಗೋಲಿ ಹಾಗೂ ವಿದ್ಯುತ್ ದೀಪಗಳಿಂದ ಸುಂದರವಾಗಿ ಅಲಂಕರಿಸಲಾಗಿತ್ತು. ಬಗೆ ಬಗೆಯ ಹೂವುಗಳಿಂದ ಹಾಗೂ ದೇವಸ್ಥಾನ ಸೇರಿದಂತೆ ಸುತ್ತ ಮುತ್ತಲು ವಿದ್ಯುತ್ ದೀಪಗಳಿಂದ ಕಂಗೊಳಿಸುತಿತ್ತು.
ಬೆಳಗ್ಗೆಯಿಂದಲೇ ಗಣಪತಿ ಪೂಜೆ, ಪುಣ್ಯಾಹ, ಕಳಶ ಸ್ಥಾಪನೆ, ನವಗ್ರಹ ಸಹಿತ ದುರ್ಗಾ ಹೋಮ, ಪೂರ್ಣಾಹುತಿಯನ್ನು ಅರ್ಚಕ ಹರೀಶ್ ನೆರವೇರಿಸಿದರು. ನಂತರ ಪೂಜಾ ಕೈಂಕರ್ಯಗಳನ್ನು ಇಲ್ಲಿನ ದೇವಸ್ಥಾನದ ಅರ್ಚಕರಾದ ವಿನಯ್ ಶಾಸ್ತ್ರಿ ಹಾಗೂ ಮಹದೇವಪ್ಪರವರು ನೆರವೇರಿಸಿದರು.ಕಪಿಲಾ ನದಿಗೆ ಶ್ರೀ ಇಂದ್ರಾಣಮ್ಮನವರ ಸತ್ತಿಗೆಯನ್ನು ಕೊಂಡೊಯ್ದು ಗಂಗೆ ಪೂಜೆ ಸಲ್ಲಿಸಿ ನಂತರ ಶ್ರೀ ಇಂದ್ರಾಣಮ್ಮನವರ ಸತ್ತಿಗೆ ಸಮೇತ ಹೆಗ್ಗುಡಿಲು ನೀಲಕಂಠ ಮತ್ತು ಮಕ್ಕಳಿಂದ ವೀರಗಾಸೆ ಕುಣಿತ, ಮಂಗಳವಾದ್ಯ, ಪೂರ್ಣಕುಂಭ ಕಳಸದೊಂದಿಗೆ ಅರ್ಚಕ ಮಹದೇವಪ್ಪರವರು ದೇವಿಯ ಕಲಶ ಹೊತ್ತು, ಹೆಗ್ಗುಡಿಲಿನ ನೀಲಕಂಠ ರವರಿಂದ ಅಕ್ಕಿ ತುಂಬಿದ ಕಲಶಕ್ಕೆ ತೆಂಗಿನಕಾಯಿ ಇಟ್ಟು ಆ ಕಳಶದ ಒಳಗೆ ಕತ್ತಿ ಹಾಕಿ ಕತ್ತಿಗೆ ಕಟ್ಟಿದ್ದ ಶಲ್ಯವನ್ನು ಬಾಯಲ್ಲಿ ಹಿಡಿದು ಪ್ರದರ್ಶಿಸಿದು ತುಂಬಾ ಕುತೂಹಲವಾಗಿತ್ತು.ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಮಹಿಳೆಯರು ಸೇರಿದಂತೆ ಮೆರವಣಿಗೆಯಲ್ಲಿ ಸಾಗುತ್ತಾ ದೇವಸ್ಥಾನಕ್ಕೆ ಆಗಮಿಸಿದರು.
ಸಂಜೆ ಬ್ರಹ್ಮಶ್ರೀ ನಾರಾಯಣಗುರು ಭಜನಾ ಮಂಡಳಿ ಇವರ ವತಿಯಿಂದ ಭಜನಾ ಕಾರ್ಯಕ್ರಮ ನೆರವೇರಿತು. ಈ ಪೂಜಾ ಮಹೋತ್ಸವವು ಐದು ದಿನಗಳ ಕಾಲ ಸಂಜೆ ಏಳು ಗಂಟೆಗೆ ಮಹಾಮಂಗಳಾರತಿ ಇರುತ್ತದೆ.