- ಕೆನರಾ ಬ್ಯಾಂಕ್ ಪ್ರಯೋಜಕತ್ವದ ಕಾರ್ಯಕ್ರಮ । ವಾಹನದ ಮೇಲೆ ಸಿಎಂ ಸಿದ್ದು ಭಾವಚಿತ್ರ ಬಳಸಲು ಕೈಪಡೆ ಆಗ್ರಹ
ಇಲ್ಲಿ ಮಲ್ಲಿಕಾರ್ಜುನ ವೃತ್ತದಲ್ಲಿ ಬುಧವಾರ ಕೆನರಾ ಬ್ಯಾಂಕ್ ಪ್ರಯೋಜಕತ್ವದಲ್ಲಿ ಕೇಂದ್ರ ಸರ್ಕಾರದ ವಿಕಸಿತ ಭಾರತ ಕಾರ್ಯಕ್ರಮ ನಡೆಯುತ್ತಿತ್ತು, ಸ್ಥಳಕ್ಕೆ ಆಗಮಿಸಿದ ಕಾಂಗ್ರೆಸ್ ಮುಖಂಡರು ಮೋದಿ ಭಾವಚಿತ್ರ ಮಾತ್ರ ಹಾಕಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾವಚಿತ್ರ ಏಕೆ ಹಾಕಿಲ್ಲ ? ಎಂದು ಪ್ರಶ್ನೆ ಮಾಡಿದ್ದಕ್ಕೆ ಬಿಜೆಪಿ ಕಾರ್ಯಕರ್ತರೊಂದಿಗೆ ವಾಗ್ವಾದ ನಡೆಯಿತು.
ಸಿದ್ದರಾಮಯ್ಯ ಅವರು ಬಡವರಿಗೆ ಅನ್ನಭಾಗ್ಯ, ಗೃಹಲಕ್ಮೀ, ಶಕ್ತಿ, ಯುವನಿಧಿ ಅಂತಹ ಸಾಕಷ್ಟು ಯೋಜನೆಗಳನ್ನು ನೀಡಿದ್ದಾರೆ. ಅಂತಹ ಮುಖ್ಯಮಂತ್ರಿ ಪೋಟೋ ಏಕೆ ಹಾಕಿಲ್ಲ ಎಂದು ಸಂಸದ ರಾಘವೇಂದ್ರ ಅವರನ್ನು ಕೇಳಿದರೆ ಕಾಂಗ್ರೆಸ್‌ನವರು ಏಕೆ ಇಲ್ಲಿ ಬಂದಿದೀರಿ, ಗೂಂಡಾಗಿರಿ ಮಾಡುತ್ತೀರಾ? ಎಂದು ನಮ್ಮನ್ನು ಅವಮಾನಿಸಿದ್ದಾರೆ. ಸಂಸದ ಬಿ.ವೈ.ರಾಘವೇಂದ್ರ ಅವರು ಕೂಡಲೇ ಕ್ಷಮೆ ಕೇಳಬೇಕು ಒಬ್ಬ ಜನಪ್ರತಿನಿಧಿಯಾಗಿ ಇಂತಹ ಮಾತುಗಳು ಅವರ ಬಾಯಿಯಿಂದ ಬರಬಾರದಿತ್ತು ಎಂದು ಕಾಂಗ್ರೆಸ್ ಮುಖಂಡರು ಅಕ್ರೋಶ ವ್ಯಕ್ತಪಡಿಸಿದರು.ಕಾಂಗ್ರೆಸ್ ಸರ್ಕಾರದ ಯುವನಿಧಿ ಕಾರ್ಯಕ್ರಮದಲ್ಲಿ ಬಿಜೆಪಿ ಸಂಸದ, ಶಾಸಕರನ್ನು ಸಿದ್ದರಾಮಯ್ಯ ಗೌರವಿಸಿದ್ದಾರೆ. ಅಂತಹ ಮುಖ್ಯಮಂತ್ರಿ ಅವರ ಭಾವಚಿತ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನು ಹೇಳಿದೇ ಇರುವುದು ಸರಿಯಲ್ಲ ಎಂದು ಕಾಂಗ್ರೆಸ್ ಮುಖಂಡರಾದ ಧರ್ಮನಾಯ್ಕ, ಹನುಮಂತಪ್ಪ, ಹಬಿಬುಲ್ಲಾ ಹವಾಲ್ದಾರ್, ಎಲ್.ಜಿ ಮಾಲ ತೇಶ್, ಸುರೇಶ್ ಹಾವಣ್ಣನವರ್, ಸಂಜೀವ, ಪ್ರಭು, ಮುಸ್ತಾಕ್ ಅಕ್ರೋಶ ವ್ಯಕ್ತಪಡಿಸಿದರು.
ಇಲ್ಲಿನ ಆಯೋಜಕರಾದ ಕೆನರಾ ಬ್ಯಾಂಕ್ ವ್ಯವಸ್ಥಾಪಕರನ್ನು ಕರೆಸುವವರೆಗೂ ಸ್ಥಳ ಬಿಟ್ಟು ಹೋಗುವುದಿಲ್ಲ. ಧರಣಿ ನಡೆಸುತ್ತೇವೆ ಎಂದು ಕಾಂಗ್ರೆಸ್ ಮುಖಂಡರು ಪಟ್ಟು ಹಿಡಿದರು. ಪಿಎಸ್‌ಐ ರಾಜು ರೆಡ್ಡಿ ಅವರು ಆಯೋಜಕರನ್ನು ಠಾಣೆಗೆ ಕರೆಸುತ್ತೇವೆ. ಸಾರ್ವಜನಿಕರಿಗೆ ತೊಂದರೆ ನೀಡುವುದು ಬೇಡ, ಠಾಣೆಯಲ್ಲಿ ಕುಳಿತು ಈ ವಿಚಾರದ ಬಗ್ಗೆ ತಿಳಿದುಕೋಳ್ಳವುದು ಸೂಕ್ತ ಎಂದು ಮನವೊಲಿಸಿದರು.