- ಜಿಲ್ಲೆಯ 368 ಬೀಟ್‌ಗಳು ಇನ್ನಷ್ಟು ಸಕ್ರಿಯ । ಸಮುದಾಯ ಪೊಲೀಸ್ ಮಾದರಿ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಹತ್ತಿರವಾಗಬೇಕೆಂಬ ಉದ್ದೇಶದಿಂದ ಈಗಾಗಲೇ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತರಲಾಗಿದೆ. ಇದರ ಜತೆಗೆ ಮನೆ ಮನೆಗೆ ಪೊಲೀಸ್ ವಿನೂತನ ಕ್ರಮವನ್ನು ಅನುಷ್ಟಾನಕ್ಕೆ ತರಲಾಗಿದ್ದು, ಇದಕ್ಕೆ ಜಿಲ್ಲೆಯಾದ್ಯಂತ ಇಂದು ಚಾಲನೆ ನೀಡಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ ಹೇಳಿದರು.
ಕಾರ್ಯಕ್ರಮಕ್ಕೆ ಚಾಲನೆ ನೀಡುವ ಮೊದಲು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಒಟ್ಟು 368 ಬೀಟ್‌ಗಳು ಇವೆ. ಅವುಗಳಲ್ಲಿ ಪೊಲೀಸರು ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಬೀಟ್ ಕೇಂದ್ರಗಳಿಗೆ ಮಾತ್ರ ಹೋಗಿ ಬರುವುದಲ್ಲ, ಆಯಾ ಪ್ರದೇಶದ ಜನರನ್ನು ಭೇಟಿ ಮಾಡುವುದು ಅವರ ಸಮಸ್ಯೆಗಳನ್ನು ಆಲಿಸಲು ಮನೆ ಮನೆಗೆ ಪೊಲೀಸ್ ವಿನೂತನ ಕಾರ್ಯಕ್ರಮವನ್ನು ಜಾರಿಗೆ ತರಲಾಗಿದೆ ಎಂದು ತಿಳಿಸಿದರು.368 ಬೀಟ್‌ಗಳಿಗೆ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಅವರ ಭಾವಚಿತ್ರ, ಮೊಬೈಲ್ ಸಂಖ್ಯೆ, ಆಯಾ ವ್ಯಾಪ್ತಿಯ ಪೊಲೀಸ್ ಠಾಣೆ ಹಾಗೂ ತುರ್ತು ದೂರವಾಣಿ ಸಂಖ್ಯೆಗಳು ಒಳಗೊಂಡ ನಿಮ್ಮ ಮಿತ್ರ ಎಂಬ ಕಾರ್ಡ್‌ಗಳನ್ನು ಪ್ರತಿ ಮನೆ ಗಳಿಗೆ ಹಂಚಿಕೆ ಮಾಡಲಾಗುವುದು. ಯಾವುದಾದರೂ ಸಮಸ್ಯೆಗಳು ಇದ್ದರೆ ಕೂಡಲೇ ದೂರವಾಣಿ ಕರೆ ಮಾಡಬಹುದು ಎಂದ ಅವರು, ಪೊಲೀಸರು ಸಾರ್ವಜನಿಕರನ್ನು ಖುದ್ದಾಗಿ ಅವರ ಮನೆಗಳಲ್ಲಿ ಭೇಟಿ ಮಾಡಲಿದ್ದಾರೆ. ಇದರಿಂದಾಗಿ ಪೊಲೀಸರು ಮತ್ತು ಸಾರ್ವಜನಿಕರ ನಡುವಿನ ಬಾಂಧವ್ಯ ಹೆಚ್ಚಾಗುತ್ತದೆ. ಇದರಿಂದ ಸ್ಥಳೀಯ ಸಮಸ್ಯೆಗಳು ಹೇಳಿಕೊಳ್ಳಲು ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದರು.
ಆಯಾ ಬೀಟ್‌ನಲ್ಲಿರುವ 50 ಮನೆಗಳಿಗೆ ಓರ್ವ ಮುಖಂಡರನ್ನು ಆಯ್ಕೆ ಮಾಡಲಾಗುವುದು. ಅವರನ್ನು ಪ್ರತಿ ತಿಂಗಳು ಠಾಣೆಗೆ ಕರೆಸಿ ಸ್ಥಳೀಯ ಸಮಸ್ಯೆಗಳ ಬಗ್ಗೆ ಚರ್ಚಿಸಿ ಸೂಕ್ತ ಪರಿಹಾರ ಕಂಡುಕೊಳ್ಳಲಾಗುವುದು. ಉತ್ತಮವಾಗಿ ಕೆಲಸ ಮಾಡುವ ಮುಖಂಡರನ್ನು ಗುರುತಿಸಿ ಪೊಲೀಸ್ ಇಲಾಖೆಯಿಂದ ಸನ್ಮಾನಿಸಲಾಗುವುದು ಎಂದು ಹೇಳಿದರು.ಇನ್ನೊಂದು ಮಹತ್ವದ ಸಂಗತಿಯೆಂದರೆ, ಪ್ರಸ್ತುತ ದಿನಗಳಲ್ಲಿ ಪೊಲೀಸ್ ಇಲಾಖೆ ಜನರೊಂದಿಗೆ ನಿಕಟ ಸಂಪರ್ಕ ಕಾಯ್ದು ಕೊಳ್ಳುವ ಮೂಲಕ ಸಮುದಾಯ ಪೊಲೀಸ್ ವ್ಯವಸ್ಥೆಗೆ ಆದ್ಯತೆ ನೀಡುತ್ತಿದೆ. ಸೈಬರ್ ಅಪರಾಧ, ಮಹಿಳೆಯರು ಮತ್ತು ಮಕ್ಕಳ ವಿರುದ್ಧದ ಅಪರಾಧ ತಡೆಯುವ ದಿಶೆಯಲ್ಲಿ, ಇಲಾಖೆ ಹಗಲಿರುಳು ಶ್ರಮಿಸುತ್ತಿದೆ. ಸಾರ್ವಜನಿಕರಲ್ಲಿ ಕಾನೂನುಗಳ ಬಗ್ಗೆ ತಿಳುವಳಿಕೆ ಬೆಳೆಸುವುದು ಮತ್ತು ಪೌರಸಹಭಾಗಿತ್ವದ ಕಾರ್ಯಕ್ರಮ ರೂಪಿಸುವಲ್ಲಿ ಇಲಾಖೆ ಪ್ರಗತಿಪರ ನಿಲುವು ಗಳನ್ನು ತೆಗೆದುಕೊಳ್ಳುತ್ತಿದೆ. ಆಧುನಿಕ ತಂತ್ರಜ್ಞಾನಗಳ ಬಳಕೆಯಿಂದ ಪೊಲೀಸ್ ಇಲಾಖೆ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಸಾರ್ವಜನಿಕ ಸೇವಾ ದಿಟ್ಟ ನೋಟದೊಂದಿಗೆ ತನ್ನ ಕಾರ್ಯವ್ಯಾಪ್ತಿ ವಿಸ್ತರಿಸುತ್ತಿದೆ ಎಂದರು.
"ಮನೆ ಮನೆಗೆ ಪೊಲೀಸ್ " ಉಪಕ್ರಮದ ಭಾಗವಾಗಿ ಶಾಲಾ ಕಾಲೇಜುಗಳಲ್ಲಿ ಕಾನೂನು ಜಾಗೃತಿ ಕಾರ್ಯಕ್ರಮ, ಮಹಿಳಾ ಭದ್ರತೆ ಕುರಿತ ಕಾರ್ಯಾಗಾರ ಮತ್ತು ಯುವ ಜನರಿಗೆ ಪೊಲೀಸ್ ಸೇವೆಗಳ ಬಗ್ಗೆ ಅರಿವು ಮೂಡಿಸುವ ಸಭೆ ಏರ್ಪಡಿಸ ಲಾಗುವುದು ಎಂದು ತಿಳಿಸಿದರು.ಪ್ರಮುಖ ಪ್ರಯೋಜನಗಳು: ಅಪರಾಧ ತಡೆಗೆ ಸಹಕಾರಿ ಸಾರ್ವಜನಿಕರ ಸಹಕಾರದಿಂದ ಪೊಲೀಸರು ಶಂಕಾಸ್ಪದ ಚಟುವಟಿಕೆಗಳನ್ನು ಬೇಗ ಗುರುತಿಸಿ ತಡೆಗಟ್ಟುವುದು.ಜನರಲ್ಲಿ ನಂಬಿಕೆ ಬೆಳೆಸುವುದು ಸಮುದಾಯ ಪೊಲೀಸ್ ವ್ಯವಸ್ಥೆ ಪೊಲೀಸ್ ಮತ್ತು ಸಾರ್ವಜನಿಕರ ನಡುವೆ ವಿಶ್ವಾಸದ ಸಂಬಂಧವನ್ನು ನಿರ್ಮಿಸುವುದು.
ಶಾಂತಿ ಮತ್ತು ಭದ್ರತೆ ಕಾಪಾಡುವುದು ಸ್ಥಳೀಯರ ಸಹಕಾರದಿಂದ ಸಮುದಾಯದಲ್ಲಿ ಶಾಂತಿ ಹಾಗೂ ಸುವ್ಯವಸ್ಥೆ ಸ್ಥಾಪಿಸಲು ಸಹಕಾರಿಯಾಗಲಿದೆ. ಸ್ಥಳೀಯ ಸಮಸ್ಯೆಗಳ ಪರಿಹಾರ ಸಮುದಾಯ ಪೊಲೀಸ್ ವ್ಯವಸ್ಥೆ ಮೂಲಕ ಸ್ಥಳೀಯ ಮಟ್ಟದ ವಿಶೇಷ ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರಕಿಸಿಕೊಡುವುದು.ಪೋಲೀಸರು ಜನರ ಹತ್ತಿರ ಬರುತ್ತಾರೆ ಪೊಲೀಸರು ''''''''ಭಯದ ಪಾತ್ರ " ದಿಂದ "ಮಿತ್ರನ ಪಾತ್ರ " ದತ್ತ ಸಾಗುತ್ತಾರೆ. ಅಪರಾಧದ ಕುರಿತು ಜಾಗೃತಿ - ಸಾರ್ವಜನಿಕರಲ್ಲಿ ಕಾನೂನು ಹಾಗೂ ಅಪರಾಧ ತಡೆ ಬಗ್ಗೆ ಅರಿವು ಮೂಡುತ್ತದೆ. ಯುವ ಜನತೆಗೆ ಮಾರ್ಗದರ್ಶನ ಸಹಾಯ ಮಾಡುತ್ತದೆ. ಯುವಜನರನ್ನು ಸಕಾರಾತ್ಮಕ ಚಟುವಟಿಕೆಗಳತ್ತ ತೊಡಗಿಸಲು ಇದು ಸಮಾಜದಲ್ಲಿ ಸಹಭಾಗಿತ್ವ ನಾಗರಿಕರು ಮತ್ತು ಪೊಲೀಸರು ಜವಾಬ್ದಾರಿ ಹಂಚಿಕೊಳ್ಳುವ ಮೂಲಕ ಉತ್ತಮ ವ್ಯವಸ್ಥೆ ನಿರ್ಮಾಣವಾಗುತ್ತದೆ.
ಸೈಬರ್ ಅಪರಾಧ, ನಕಲಿ ಮಾಹಿತಿ ತಡೆಯಲು ನೆರವು ಜನರಿಗೆ ಈ ವಿಷಯಗಳಲ್ಲಿ ಶಿಕ್ಷಣ ನೀಡಿ ತಡೆಗಟ್ಟಬಹುದು. ಆಪತ್ತಿನ ಸಂದರ್ಭಗಳಲ್ಲಿ ತ್ವರಿತ ಪ್ರತಿಕ್ರಿಯೆ ವಿಪತ್ತುಗಳು ಅಥವಾ ತುರ್ತು ಸಂದರ್ಭದಲ್ಲಿ ಜನಸಹಕಾರದ ಮೂಲಕ ಪೊಲೀಸರು ಶೀಘ್ರದಲ್ಲಿ ಸಹಾಯ ನೀಡಬಹುದು.ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಜಯಕುಮಾರ್ ಉಪಸ್ಥಿತರಿದ್ದರು.
25 ಕೆಸಿಕೆಎಂ 3ಮನೆ ಮನೆಗೆ ಪೊಲೀಸ್ ವಿನೂತನ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬೀಟ್ ಪೊಲೀಸರ ಭಾವಚಿತ್ರ ಹಾಗೂ ದೂರವಾಣಿ ಸಂಖ್ಯೆ ಮಾಹಿತಿ ಒಳಗೊಂಡ ನಿಮ್ಮ ಮಿತ್ರ ಕಾರ್ಡ್‌ಗಳನ್ನು ಚಿಕ್ಕಮಗಳೂರಿನ ವಿವಿಧ ಬಡಾವಣೆಗಳಿಗೆ ತೆರಳಿ ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ವಿತರಿಸಿದರು.