ಎನ್‌ಕೌಂಟರ್‌ : ಶರಣಾಗದೆ ಸಾವನ್ನೇ ಆಯ್ಕೆ ಮಾಡಿಕೊಂಡ ನಕ್ಸಲ್‌ ನಾಯಕ ವಿಕ್ರಂ ಗೌಡ !

KannadaprabhaNewsNetwork | Updated : Nov 21 2024, 09:20 AM IST

ಸಾರಾಂಶ

ಇಲ್ಲಿನ ಪೀತಬೈಲು ಎಂಬಲ್ಲಿ ಸೋಮವಾರ ಮಧ್ಯರಾತ್ರಿ ನಡೆದ ಎನ್‌ಕೌಂಟರ್‌ನಲ್ಲಿ ಮೃತ ನಕ್ಸಲ್‌ ನಾಯಕ ವಿಕ್ರಮ್ ಗೌಡ ಯಾನೆ ಶ್ರೀಕಾಂತ್‌ಗೆ ಪೊಲೀಸರು ಶರಣಾಗುವ ಆಯ್ಕೆಯನ್ನೂ ನೀಡಿದ್ದರು. ಆದರೆ ಆತ ಶರಣಾಗಲು ಒಪ್ಪದೆ ಪೊಲೀಸರ ಮೇಲೆ ಗುಂಡು ಹಾರಿಸಿದ.

  ಹೆಬ್ರಿ : ಇಲ್ಲಿನ ಪೀತಬೈಲು ಎಂಬಲ್ಲಿ ಸೋಮವಾರ ಮಧ್ಯರಾತ್ರಿ ನಡೆದ ಎನ್‌ಕೌಂಟರ್‌ನಲ್ಲಿ ಮೃತ ನಕ್ಸಲ್‌ ನಾಯಕ ವಿಕ್ರಮ್ ಗೌಡ ಯಾನೆ ಶ್ರೀಕಾಂತ್‌ಗೆ ಪೊಲೀಸರು ಶರಣಾಗುವ ಆಯ್ಕೆಯನ್ನೂ ನೀಡಿದ್ದರು. ಆದರೆ ಆತ ಶರಣಾಗಲು ಒಪ್ಪದೆ ಪೊಲೀಸರ ಮೇಲೆ ಗುಂಡು ಹಾರಿಸಿದ. ಆಗ ಪೊಲೀಸರು ನಡೆಸಿದ ಪ್ರತಿದಾ‍ಳಿಗೆ ಆತ ಬಲಿಯಾಗಿದ್ದಾನೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಕಾನೂನಿನಂತೆ ಈ ಎನ್‌ಕೌಂಟರ್‌ ಬಗ್ಗೆ ಮ್ಯಾಜಿಸ್ಟ್ರೇಟ್ ತನಿಖೆ ಆರಂಭವಾಗಿದ್ದು, ತನಿಖೆಯಲ್ಲಿ ಎನ್‌ಕೌಂಟರ್‌ ಬಗ್ಗೆ ಪೊಲೀಸ್ ಅಧಿಕಾರಿಗಳು ವಿವರವಾದ ಮಾಹಿತಿ ನೀಡಿದ್ದಾರೆ.

ಪೀತಬೈಲಿನ ದಟ್ಟಕಾಡಿನ ತುತ್ತತುದಿಯಲ್ಲಿರುವ ಮಲೆಕುಡಿಯರ ಮೂರು ಮನೆಗಳಲ್ಲಿ ಜಯಂತ್ ಗೌಡ ಎಂಬುವವರ ಮನೆಯಂಗಳದಲ್ಲಿ ಈ ಎನ್‌ಕೌಂಟರ್‌ ನಡೆದಿದೆ. ವಿಕ್ರಮ್‌ ಗೌಡ ಮತ್ತು ತಂಡ ಅಕ್ಕಿ ಬೇಳೆ ಪಡೆಯಲು ಈ ಮನೆಗೆ ಬಂದಿದ್ದರು. ಮುಂಚೂಣಿಯಲ್ಲಿದ್ದ ವಿಕ್ರಮ್‌ ಮನೆಯಂಗಳಕ್ಕೆ ಬಂದಿದ್ದರೆ, ಉಳಿದವರು ಅನತಿ ದೂರದಲ್ಲಿದ್ದರು. ಆಗ ಮನೆಯೊಳಗಿದ್ದ ಪೊಲೀಸರು ಕೂಗಿ ಶಸ್ತ್ರಾಸ್ತ್ರಗಳನ್ನು ಕೆಳಗಿಟ್ಟು ಶರಣಾಗುವಂತೆ ಸೂಚಿಸಿದ್ದು, ತಕ್ಷಣ ಅಲರ್ಟ್ ಆದ ವಿಕ್ರಮ್‌ ಶರಣಾಗುವುದಿಲ್ಲ, ನನ್ನ ಮೇಲೆ ಗುಂಡು ಹಾರಿಸಿದರೆ ನಾನೂ ಗುಂಡು ಹಾರಿಸುತ್ತೇನೆ ಎಂದಿದ್ದಾನೆ ಮತ್ತು ಬಂದೂಕು ಎತ್ತಿಕೊಂಡಿದ್ದಾನೆ. ಕೂಡಲೇ ಪೊಲೀಸರು ಆತ್ಮರಕ್ಷಣೆಗಾಗಿ ಆತನ ಮೇಲೆ ದಾಳಿ ನಡೆಸಿದ್ದಾರೆ. ತಕ್ಷಣ ದೂರದಲ್ಲಿ ನಿಂತಿದ್ದ ಇತರ ಮೂರ್ನಾಲ್ಕು ನಕ್ಸಲೀಯರು ಪೊಲೀಸರತ್ತ ಗುಂಡು ಹಾರಿಸುತ್ತಾ ವಾಪಸ್‌ ಕಾಡಿನೊಳಗೆ ಓಡಿ ಮರೆಯಾಗಿದ್ದಾರೆ.

ಮಾವೋವಾದ ಜಿಂದಾಬಾದ್‌ ಎನ್ನುತ್ತಲೇ ತಲೆ, ಎದೆ, ಹೊಟ್ಟೆ ಮತ್ತು ತೊಡೆಗೆ ಒಟ್ಟು 7 ಗುಂಡೇಟು ತಿಂದ ವಿಕ್ರಮ್‌ ತೀವ್ರ ರಕ್ತಸ್ರಾವದಿಂದ ಮನೆಯಂಗಳದಲ್ಲಿಯೇ ಮೃತಪಟ್ಟಿದ್ದಾನೆ. ಆತನ ಕೈಯಲ್ಲಿ ಸುಧಾರಿತ 9 ಎಂಎಂ ಬಂದೂಕು ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಅಕ್ಕಿ ತಂದಿಡುವಂತೆ ಹೇಳಿದ್ದ: ಎರಡು ತಿಂಗಳಿಂದ ವಿಕ್ರಮ್ ಗೌಡ ಮತ್ತವನ ಕಬಿನಿ ದಳಂ ಈ ಭಾಗದಲ್ಲಿ ಸಂಚರಿಸುತ್ತಿತ್ತು. ಪೀತಬೈಲಿನ ಈ ಮೂರು ಮನೆಗಳಿಗೆ ಹಿಂದೆಯೂ ಬಂದು ಅಕ್ಕಿಬೇಳೆ ತೆಗೆದುಕೊಂಡು ಹೋಗಿದ್ದ. ತಮ್ಮೂರಿನವ ಎಂಬ ಕಾರಣಕ್ಕೆ ಮನೆಯವರು ಅಕ್ಕಿ ಬೇಳೆ ನೀಡಿದ್ದರು. ನ.11ರಂದೂ ಬಂದು ಅಕ್ಕಿ ತೆಗೆದುಕೊಂಡು ಹೋಗಿದ್ದ, ವಾರ ಬಿಟ್ಟು ಬರುತ್ತೇನೆ ಅಕ್ಕಿ ತಂದಿಡಿ ಎಂದು ಹೇಳಿದ್ದ. ಈ ಭಾಗದಲ್ಲಿ ವೇಷ ಮರೆಸಿ ಸುತ್ತಾಡುತ್ತಿದ್ದ ಪೊಲೀಸರಿಗೆ ಈ ಮಾಹಿತಿ ಸಿಕ್ಕಿತ್ತು. ಅದರಂತೆ ಪೂರ್ತಿ ಪ್ಲ್ಯಾನ್‌ ಮಾಡಿ ಸಿದ್ಧರಾಗಿದ್ದರು. ಮನೆಯವರನ್ನು ಬೇರೆಡೆಗೆ ಕಳುಹಿಸಿ, ತಾವು ಮನೆಯಲ್ಲಿ ಶಸ್ತ್ರಸನ್ನದ್ಧರಾಗಿ ಅಡಗಿ ಕೂತಿದ್ದರು.

ಹೇಳಿದಂತೆ ಸೋಮವಾರ ರಾತ್ರಿ ಅಕ್ಕಿಬೇಳೆ ಕೊಂಡೊಯ್ಯಲು ಬಂದ ವಿಕ್ರಮ್‌ ಗೌಡ ಪೊಲೀಸರು ತೋಡಿದ ಖೆಡ್ಡಾಕ್ಕೆ ಬಿದ್ದಿದ್ದಾನೆ, ಶರಣಾಗುವುದಕ್ಕೆ ಒಪ್ಪದೇ ಜೀವತೆತ್ತಿದ್ದಾನೆ.

ಸಾವನ್ನೇ ಆಯ್ಕೆ ಮಾಡಿಕೊಂಡ: ರಾಜ್ಯದಲ್ಲಿ ಸರ್ಕಾರ ನಕ್ಸಲ್‌ ಹಿತಚಿಂತಕರ ಮೂಲಕ ನಕ್ಸಲರ ಶರಣಾಗತಿಗೆ ಪ್ಯಾಕೇಜ್ ಘೋಷಿಸಿತ್ತು. ಅದರಂತೆ 5 ಮಂದಿ ನಕ್ಸಲೀಯರು ವಯಸ್ಸು, ಅನಾರೋಗ್ಯ ಇತ್ಯಾದಿ ಕಾರಣಗಳಿಂದ ಶರಣಾಗಿದ್ದರು. ಇನ್ನೂ ಕೆಲ ಮಂದಿ ಶರಣಾಗುವುದಕ್ಕೆ ಸಿದ್ಧರಾಗಿದ್ದಾರೆ. ಆದರೆ ಇನ್ನೂ 46ರ ವಿಕ್ರಮ್‌ ಮಾತ್ರ ಈ ಪ್ಯಾಕೇಜ್‌ಗೆ ವಿರುದ್ಧವಾಗಿದ್ದ. ಶರಣಾಗುವಂತೆ ಮನವೊಲಿಸಲು ಯತ್ನಿಸಿದ ಹಿತಚಿಂತಕರ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ್ದ. ಸೋಮವಾರ ರಾತ್ರಿ ಸಾಯುವುದಕ್ಕೂ ಮೊದಲು ಶರಣಾಗುವುದಕ್ಕೆ ಆತನಿಗೆ ಕೊನೆಯ ಅವಕಾಶವಿತ್ತು, ಆದರೂ ಅದನ್ನು ತಿರಸ್ಕರಿಸಿದ ಆತ ಸಾವನ್ನೇ ಆಯ್ಕೆ ಮಾಡಿಕೊಂಡ.

ವಿಕ್ರಂ ಗೌಡ ಎನ್‌ಕೌಂಟರ್‌ ಸಮರ್ಥಿಸಿಕೊಂಡ ಸಿಎಂ:ನಕ್ಸಲ್‌ ನಾಯಕ್‌ ವಿಕ್ರಂ ಗೌಡನ ವಿರುದ್ಧ ಹಲವು ಪ್ರಕರಣ ದಾಖಲಾಗಿದ್ದವು. ಆದ್ದರಿಂದ ಎನ್‌ಕೌಂಟರ್‌ ಮಾಡಲಾಗಿದೆ. ಇದನ್ನು ನೀವು ಪ್ರಶಂಸಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು.‘ವಿಕ್ರಂ ಗೌಡ ಎನ್‌ಕೌಂಟರ್‌ಗೆ ಕೆಲ ಪ್ರಗತಿಪರರು ವಿರೋಧ ವ್ಯಕ್ತಪಡಿಸಿದ್ದಾರಲ್ಲಾ’ ಎಂದು ಬೆಂಗಳೂರಿನಲ್ಲಿ ಸುದ್ದಿಗಾರರು ಪ್ರಶ್ನಿಸಿದಾಗ, ಇದಕ್ಕೆ ಉತ್ತರಿಸಿದ ಸಿದ್ದರಾಮಯ್ಯ, ‘ವಿಕ್ರಂ ಗೌಡ ಅವರ ವಿರುದ್ಧ ಸುಮಾರು ಪ್ರಕರಣಗಳಿದ್ದವು. ಹಾಗಾಗಿ ಎನ್‌ಕೌಂಟರ್‌ ಮಾಡಿದ್ದಾರೆ. ಇದನ್ನು ನೀವು ಪ್ರಶಂಸಿಸಬೇಕು. ನಕ್ಸಲಿಸಂ ಇರಬೇಕಾ, ಹೋಗಬೇಕಾ’ ಎಂದು ಮರು ಪ್ರಶ್ನಿಸಿದರು. ಶರಣಾದರೆ ಎಲ್ಲ ಸೌಲಭ್ಯ ನೀಡುತ್ತೇವೆ ಎಂದು ಹೇಳಿದ್ದೆವು. ಅವರು ಶರಣಾಗಲಿಲ್ಲ. ವಿಕ್ರಂ ಗೌಡನನ್ನು ಹಿಡಿದುಕೊಟ್ಟವರಿಗೆ ಕೇರಳ ಸರ್ಕಾರ 25 ಲಕ್ಷ ಮತ್ತು ನಮ್ಮ ಸರ್ಕಾರ 5 ಲಕ್ಷ ಬಹುಮಾನ ಘೋಷಿಸಿತ್ತು ಎಂದು ತಿಳಿಸಿದರು.

‘ವಿಕ್ರಂ ಹತ್ಯೆ ಸರ್ಕಾರದ ಕ್ರೂರ ನಡವಳಿಕೆ’: ಮಾಜಿ ನಕ್ಸಲ್‌ ಶ್ರೀಧರ್‌

ನಕ್ಸಲ್‌ ನಾಯಕ ಎನ್ನಲಾಗಿರುವ ವಿಕ್ರಂಗೌಡನಿಂದ ಪೊಲೀಸರ ಮೇಲೆ ಹಲ್ಲೆ, ಠಾಣೆ ಮೇಲೆ ದಾಳಿ, ಬೆದರಿಕೆ, ಕೊಲೆ, ಬೆಂಕಿ ಹಚ್ಚಿರುವುದು ಸೇರಿದಂತೆ ಯಾವುದೇ ಘಟನೆ ನಡೆದಿಲ್ಲ. ಕರಪತ್ರ ಕೂಡ ಹಂಚಿಲ್ಲ. ಬರೀ ಬಂದೂಕು ಹಿಡಿದುಕೊಂಡು ಓಡಾಡುತ್ತಿದ್ದಾರೆಂಬ ಕಾರಣಕ್ಕೆ ಕೊಂದು ಹಾಕಬಹುದೇ, ಆತನನ್ನು ಕೊಲ್ಲುವ ಅಗತ್ಯವಾದರೂ ಏನಿತ್ತು ಇದು ಸರ್ಕಾರದ ಕ್ರೂರ ನಡವಳಿಕೆ ಎಂದು ಮಾಜಿ ನಕ್ಸಲ್‌ ನೂರ್‌ ಶ್ರೀಧರ್‌ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲೆಕುಡಿಯ ಸಮುದಾಯದ ಯುವಕ ವಿಕ್ರಂಗೌಡನ ಪಾಲಕರಿಗೆ ಇದ್ದ 14 ಗುಂಟೆ ಜಮೀನನ್ನು ಕಳೆದುಕೊಳ್ಳಬೇಕಾಗುತ್ತದೆ ಎನ್ನುವ ಕಾರಣಕ್ಕೆ ಹೋರಾಟಕ್ಕೆ ಇಳಿದ. ಹೋರಾಟ ಮಾಡಿದ ಕಾರಣಕ್ಕೆ ಪೊಲೀಸರು ಆತನಿಗೆ ಮತ್ತು ಕುಟುಂಬದವರಿಗೆ ಅನೇಕ ಬಾರಿ ಕಿರುಕುಳ ನೀಡಿದರು. ಹೀಗಾಗಿ, ವಿಕ್ರಂಗೌಡ ಸೇರಿದಂತೆ ಅನೇಕರು ಕಾಡು ಸೇರಿದರು. ಆತ ನಕ್ಸಲ್ ನಾಯಕ ಅಲ್ಲ. ಚಳವಳಿ ಮಾಡುವ ಆದಿವಾಸಿ ಯುವಕ ಅಷ್ಟೇ ಎಂದು ಹೇಳಿದರು.ಹತ್ಯೆಯಂತಹ ಹೃದಯಹೀನ ನಡೆಗಳಿಂದ ಮಲೆನಾಡಿನ ಆದಿವಾಸಿ ಸಮುದಾಯಗಳ ಯುವಕರು ಮತ್ತೆ ನಕ್ಸಲ್ ಚಟುವಟಿಕೆಗಳತ್ತ ವಾಲಬಹುದು. ಆ ರೀತಿ ಆಗದಂತೆ ತಡೆಯುವ ಜವಾಬ್ದಾರಿ ಸರ್ಕಾರದ ಮೇಲೆ ಇದೆ. ಹತ್ಯೆಯ ಸೂಕ್ತ ತನಿಖೆ ಆಗಬೇಕು ಎಂದು ಶ್ರೀಧರ್ ಒತ್ತಾಯಿಸಿದರು.

ನಕ್ಸಲ್ ಚಟುವಟಿಕೆ ಬಿಟ್ಟು ಮುಖ್ಯವಾಹಿನಿಗೆ ಬಂದರೆ ಸರ್ಕಾರದಿಂದ ಪುನರ್ವಸತಿ ಕಲ್ಪಿಸಲಾಗುತ್ತದೆ ಎಂದು ಹೇಳಲಾಗುತ್ತದೆ. ಆದರೆ, ಅದರ ಮೇಲೆ ವಿಶ್ವಾಸ ಇಡಲು ಹೇಗೆ ಸಾಧ್ಯ, 2014-2018ರ ನಡುವೆ ನಾನು, ಸಿರಿಮನೆ ನಾಗರಾಜ್ ಸೇರಿದಂತೆ ಅನೇಕರು ಮುಖ್ಯವಾಹಿನಿಗೆ ಬಂದೆವು. ನಾವು ಹೇಗೋ ಕಾನೂನು ಹೋರಾಟ ನಡೆಸಿದೆವು. ಆದರೆ, ಕನ್ಯಾಕುಮಾರಿ ಎಂಬ ಯುವತಿಯ ಮೇಲೆ ಆಧಾರರಹಿತ 58 ಕೇಸ್ ಹಾಕಿ ಜೈಲಿಗೆ ಕಳಿಸಿದ್ದಾರೆ. ನಿಲುಗುಳಿ ಪದ್ಮನಾಭ ಎಂಬುವರು ಹೊರಗೆ ಬಂದು 8 ವರ್ಷಗಳಾಗಿವೆ. ಈಗಲೂ ನ್ಯಾಯಾಲಯಕ್ಕೆ ಅಲೆಯುತ್ತಾರೆ. ಅವರಿಗೆ ಸರ್ಕಾರದಿಂದ ನೆರವು, ಮನೆ, ಕೆಲಸ ಯಾವುದು ಸಿಗುತಿಲ್ಲ. ಇದರಂತೆ ಚಳವಳಿ ಬಿಟ್ಟು ಹೊರ ಬಂದ ಅನೇಕರ ಜೀವನ ದುರ್ಬರವಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಸಿರಿಮನೆ ನಾಗರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Share this article