ಜೂ.30 ರಿಂದ ಗ್ರಾಮ ದೇವತೆಯರ ಜಾತ್ರಾ ಮಹೋತ್ಸವ

KannadaprabhaNewsNetwork | Published : Apr 2, 2025 1:00 AM

ಸಾರಾಂಶ

ಗ್ರಾಮ ದೇವತೆಯರ ಜಾತ್ರಾ ಮಹೋತ್ಸವವು ಜೂ.30 ರಿಂದ ಜು.8 ರವರೆಗೆ 9 ದಿನಗಳ ಕಾಲ ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ ಎಂದು ಶಾಸಕ ಹಾಗೂ ಜಾತ್ರಾ ಕಮಿಟಿ ಅಧ್ಯಕ್ಷ ರಮೇಶ ಜಾರಕಿಹೊಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಗೋಕಾಕ

ಗ್ರಾಮ ದೇವತೆಯರ ಜಾತ್ರಾ ಮಹೋತ್ಸವವು ಜೂ.30 ರಿಂದ ಜು.8 ರವರೆಗೆ 9 ದಿನಗಳ ಕಾಲ ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ ಎಂದು ಶಾಸಕ ಹಾಗೂ ಜಾತ್ರಾ ಕಮಿಟಿ ಅಧ್ಯಕ್ಷ ರಮೇಶ ಜಾರಕಿಹೊಳಿ ಹೇಳಿದರು.

ನಗರದ ಗುರುವಾರ ಪೇಠೆಯ ಶ್ರೀಲಕ್ಷ್ಮೀದೇವಿಯ ದೇವಸ್ಥಾನದ ಆವರಣದಲ್ಲಿ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿ ಐದು ವರ್ಷಕ್ಕೊಮ್ಮೆ ಅತ್ಯಂತ ವಿಜೃಂಭಣೆಯಿಂದ ಜರುಗುತ್ತಿದ್ದ ಗ್ರಾಮದೇವತೆಯರ ಜಾತ್ರೆ ಮಹಾಮಾರಿ ಕೋವಿಡ್ ಹಾಗೂ ದೇವಸ್ಥಾನಗಳ ನವೀಕರಣದ ಹಿನ್ನೆಲೆಯಲ್ಲಿ 10 ವರ್ಷಗಳ ಕಾಲ ಮುಂದುಡಲ್ಪಟ್ಟಿತ್ತು. ಈಗ ನವೀಕರಣ ಕಾರ್ಯ ಪೂರ್ಣಗೊಳ್ಳುವ ಹಂತದಲ್ಲಿದ್ದು, ಜಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಜಾತ್ರೆಯನ್ನು ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಎಲ್ಲ ಸಮುದಾಯದವರು ಸಂಘಟಿತರಾಗಿ ಭಕ್ತಿ-ಭಾವದಿಂದ ಶಾಂತಿಯುತವಾಗಿ ಆಚರಿಸೋಣ. ಎಲ್ಲ ಇಲಾಖೆಯ ಅಧಿಕಾರಿಗಳು ಜಾತ್ರೆಯನ್ನು ಸುವ್ಯವಸ್ಥಿತವಾಗಿ ಆಚರಿಸಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕು. ರಾಜ್ಯದಲ್ಲಿಯೇ ಪ್ರಸಿದ್ಧಿ ಪಡೆದ ಈ ಜಾತ್ರೆಯನ್ನು ಭಕ್ತಾದಿಗಳು ಅತ್ಯಂತ ಶ್ರದ್ಧೆಯಿಂದ ಆಚರಿಸುವ ಮೂಲಕ ದೇವಿಯ ಅನುಗ್ರಹಕ್ಕೆ ನಾವೆಲ್ಲರೂ ಪಾತ್ರರಾಗೋಣ ಎಂದು ಕೋರಿದರು.ಮುಖಂಡ ಅಶೋಕ ಪೂಜಾರಿ ಮಾತನಾಡಿ, ಜನತೆಯು ಭಕ್ತಿಭಾವದಿಂದ ಜಾತ್ರೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.ಜಾತ್ರಾ ಕಮಿಟಿಯ ಅಡಿವೆಪ್ಪ ಕಿತ್ತೂರ ಮಾತನಾಡಿ, ಬರುವ ಜಾತ್ರೆಯಲ್ಲಿ ಕೆಮಿಕಲ್ ಮಿಶ್ರಿತ ಭಂಡಾರವನ್ನು ಬಳಸದಿರಿ. ಇಲಾಖೆಯಿಂದ ಅನುಮತಿ ಪಡೆದ ಅಂಗಡಿಗಳಿಂದಲೇ ಭಂಡಾರ ಖರೀದಿಸಿ ಸುಳ್ಳು ವದಂತಿಗಳಿಗೆ ಕಿವಿಗೊಡದೆ ಜಾತ್ರೆಯನ್ನು ವಿಜೃಂಭಣೆಯಿಂದ ಆಚರಿಸಲು ಜಾತ್ರಾ ಕಮಿಟಿಗೆ ಸಹಕಾರ ನೀಡಲು ಮನವಿ ಮಾಡಿ, ಜಾತ್ರಾ ಸಂದರ್ಭದಲ್ಲಿ ನಗರದ ಎನ್‌ಎಸ್‌ಎಫ್ ಆವರಣದಲ್ಲಿ 9 ದಿನಗಳ ಕಾಲ ಮಹಾಪ್ರಸಾದದ ವ್ಯವಸ್ಥೆ ಇರುತ್ತದೆ ಎಂದು ತಿಳಿಸಿದರು.ಜಾತ್ರಾ ಕಮಿಟಿಯ ನಿರಂಜನ ಬನ್ನಿಶೆಟ್ಟಿ ಮಾತನಾಡಿ, ಏ.1 ರಂದು ಮಧ್ಯಾಹ್ನ 2 ಗಂಟೆಗೆ ದೇವಿಯರನ್ನು ಬಣ್ಣಕ್ಕೆ ಕಳುಹಿಸಲಾಗುವುದು. ಜೂ.30 ರಂದು ದೇವಿಯರನ್ನು ಜೀನಗಾರ ಮನೆಯಿಂದ ಅಂಬಿಗೇರ ಓಣಿಯಲ್ಲಿ ಕೂಡ್ರಿಸುವುದು. ಜು.1 ರಂದು ಬೆಳಗ್ಗೆಯಿಂದ ಎಲ್ಲ ದೇವಸ್ಥಾನಗಳಿಗೆ ನೈವೇದ್ಯ ಹಾಗೂ ರಾತ್ರಿ ಹೊನ್ನಾಟ ಜರುಗುವುದು. ಜು.2ರಿಂದ 4ರವರೆಗೆ ದೇವಿಯರ ರಥೋತ್ಸವ ನಡೆಯಲಿದೆ. ಜು.5 ರಿಂದ 8 ರವರೆಗೆ ಎಲ್ಲ ದೇವಸ್ಥಾನಗಳಿಗೆ ನೈವೇದ್ಯ, ಆಟ ಮತ್ತು ಶರ್ತುಗಳು ಜರುಗಲಿವೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಜಾತ್ರಾ ಕಮಿಟಿಯ ಪ್ರಭಾಕರ ಚೌಹಾನ, ಸಾಗೀರ ಕೋತವಾಲ, ದೇವರಾಜ ಪಾಟೀಲ, ಅಶೋಕ ಹೆಗ್ಗಣ್ಣವರ, ಅರ್ಜುನ ಪವಾರ, ದೇಶಪಾಂಡೆ ಹಾಗೂ ನಗರಸಭೆ ಅಧ್ಯಕ್ಷ ಪ್ರಕಾಶ ಮುರಾರಿ, ಅಶೋಕ ಪಾಟೀಲ, ರಾಜು ಮುನವಳ್ಳಿ, ಭೀಮಗೌಡ ಪೋಲಿಸಗೌಡರ, ತಹಸೀಲ್ದಾರ್‌ ಡಾ.ಮೋಹನ ಭಸ್ಮೆ, ಡಿವೈಎಸ್ಪಿ ಡಿ.ಎಚ್.ಮುಲ್ಲಾ, ಮುಖ್ಯವೈದ್ಯಾಧಿಕಾರಿ ಡಾ.ರವೀಂದ್ರ ಅಂಟಿನ, ತಾಲೂಕು ವೈದ್ಯಾಧಿಕಾರಿ ಮುತ್ತಣ್ಣ ಕೊಪ್ಪದ, ಪೌರಾಯುಕ್ತ ರಮೇಶ ಜಾಧವ, ಪರಿಸರ ಅಭಿಯಂತ ಎಂ.ಎಚ್ ಗಜಾಕೋಶ ಇದ್ದರು.ಏ.30 ರಿಂದ ಮೇ.5 ರವರೆಗೆ ವಿವಿಧ ಕಾರ್ಯಕ್ರಮಗಳು

ನವೀಕರಣಗೊಂಡ ದೇವಸ್ಥಾನಗಳ ವಾಸ್ತು, ಮೂರ್ತಿ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಲಶೋತ್ಸವದ ಕಾರ್ಯಕ್ರಮಗಳು ಏ.30 ರಿಂದ ಮೇ.5 ರವರೆಗೆ ಜರುಲಿವೆ. ಏ.30 ರಂದು ಬೆಳಗ್ಗೆ ಕೊಳವಿ ಹನುಮಾನ ದೇವಸ್ಥಾನದಿಂದ ನಗರದ ಪ್ರಮುಖ ರಸ್ತೆಗಳ ಮೂಲಕ ರಥ, ಕಲಶ, ದೇವಿಯರ ಮೂರ್ತಿ ಹಾಗೂ ಉಳಿದ ಉಪದೇವತೆಗಳ ಮೂರ್ತಿಗಳನ್ನು ಮೆರವಣಿಗೆ ಮೂಲಕ ಸ್ವಾಗತಿಸಿ, ಶಿಖರ ಪೂಜೆ ನೆರವೇರಿಸಲಾಗುವುದು. ಮೇ.1 ರಂದು ಬೆಳಗ್ಗೆ ಉಡುಪಿಯ ಉಚ್ಚಲ ಮಹಾಲಕ್ಷ್ಮೀ ದೇವಸ್ಥಾನದ ಮುಖ್ಯ ಆಚಾರ್ಯರು ಹಾಗೂ ಉಳಿದ ಆಚಾರ್ಯರಿಂದ ಗಣಪತಿ ಹೋಮ ಹಾಗೂ ಇತರೆ ಹೋಮ ಹವನಗಳು ನಡೆಯುತ್ತವೆ. ಸಂಜೆ ವಾಸ್ತು, ರಾಕ್ಷೌಗ್ನ ಹೋಮ ಹವನಗಳು ಜರುಗಲಿವೆ. ಮೇ.2ರಂದು ನವಗ್ರಹ ಯಾಗ, ನವಗ್ರಹ ಮೂರ್ತಿಪ್ರತಿಷ್ಠೆ, ಮೃತ್ಯುಂಜಯ ಹೋಮ ಹಾಗೂ ಗುರುವಾರ ಪೇಠೆಯ ಮಹಾಲಕ್ಷ್ಮೀ ದೇವಿಯ ಪ್ರತಿಷ್ಠಾ ಕಲಶ, ಬಿಂಬಶುದ್ಧಿ ನಡೆಯುತ್ತವೆ. ಮೇ.3 ರಂದು ಅಶ್ವತ ಪ್ರತಿಷ್ಠೆ, ಆಂಜನೇಯ ಪ್ರಾಣ ಪ್ರತಿಷ್ಠೆ, ಕಲಶ ಹಾಗೂ ಸಾನಿಧ್ಯಯಾಗ, ಬಿಂಬಶುದ್ಧಿ ಹೋಮ ಹವನಗಳು ಜರುಗಲಿವೆ. ಮೇ.4 ರಂದು ಅಷ್ಟಬಂದ ಲೇಪನ, ಗಣಪತಿ, ಮಹಾದೇವ, ನಾಗದೇವರು ಹಾಗೂ ಮೇರಣಕಟ್ಟೆ ಮಹಾಲಕ್ಷ್ಮೀದೇವಿ ಮೂರ್ತಿ ಪ್ರತಿಷ್ಠೆ ಮತ್ತು ಹೋಮ ಹವನಗಳು ನಡೆಯುತ್ತವೆ. ಮೇ. 5ರಂದು ನಾಗದೇವರಿಗೆ ಕಲಶಾಭಿಷೇಕ, ಅಶ್ಲೇಷಬಲಿ, ಮಹಾದೇವರಿಗೆ ಕಲಶಾಭಿಷೇಕ ಹಾಗೂ ಮೃತ್ಯುಂಜಯ ಹೋಮಹವನಗಳು ಮತ್ತು ಸಂಜೆ ಗಣಪತಿ ದೇವರಿಗೆ ಕಲಶಾಧಿವಾಸ, ಭದ್ರಕಮಂಡಲ ಪೂಜೆ ಹೋಮ ಹವನಗಳು ನಡೆಯುತ್ತವೆ.

Share this article