ಕನ್ನಡಪ್ರಭ ವಾರ್ತೆ ತುಮಕೂರು
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಕೊರಟಗೆರೆ ತಾಲೂಕು ಹಂಚಿಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಮುಂಭಾಗದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ‘ಗಿರಿಜನ ಉತ್ಸವ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗಿರಿಜನ ಉತ್ಸವವು ಸರ್ಕಾರದ ಅತ್ಯುತ್ತಮ ಯೋಜನೆಯಾಗಿದ್ದು, ಜಿಲ್ಲೆಯ ಪ್ರತಿಭಾವಂತ ಪರಿಶಿಷ್ಟ ಪಂಗಡದ ಕಲಾವಿದರಿಗೆ ವೇದಿಕೆ ಒದಗಿಸುವ ಮೂಲಕ ಗ್ರಾಮೀಣ ಕಲೆಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಹಂಚಿಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಎಸ್. ಭೀಮರಾಜು ಅವರು ಮೆರವಣಿಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಇಂತಹ ಕಾರ್ಯಕ್ರಮಗಳನ್ನು ಗಡಿ ತಾಲೂಕು ಮತ್ತು ಗ್ರಾಮದಲ್ಲಿ ನಡೆಸುತ್ತಿರುವುದು ಹೆಚ್ಚು ಅರ್ಥಪೂರ್ಣವಾಗಿದೆ. ಇಂದಿನ ದಿನಗಳಲ್ಲಿ ಟಿವಿ, ಮೊಬೈಲ್‌ಗಳಲ್ಲಿಯೇ ಕಾಲ ಕಳೆಯುವುದು ಗೀಳಾಗಿ ಮಾರ್ಪಟ್ಟಿದೆ. ಇದರ ಬದಲಾಗಿ ಗ್ರಾಮೀಣ ಸೊಗಡನ್ನು ಪಸರಿಸುವಂತಹ ಇಂತಹ ಕಾರ್ಯಕ್ರಮಗಳನ್ನು ವೀಕ್ಷಿಸುವ ಮೂಲಕ ಕಲೆಯನ್ನು ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ. ರವಿಕುಮಾರ್ ಮಾತನಾಡಿ, ಇಲಾಖೆಯು ಪ್ರಸಕ್ತ ಸಾಲಿನ ಕ್ರಿಯಾ ಯೋಜನೆಯಲ್ಲಿ ಗಿರಿಜನ ಉಪಯೋಜನೆಯಡಿ ಈ ಕಾರ್ಯಕ್ರಮವನ್ನು ರೂಪಿಸಿದೆ. ಈ ಕಾರ್ಯಕ್ರಮದಲ್ಲಿ ಗ್ರಾಮೀಣ ಪ್ರದೇಶದ ಅದರಲ್ಲೂ ಕಾರ್ಯಕ್ರಮ ಪ್ರದರ್ಶನಕ್ಕೆ ವೇದಿಕೆ ಸಿಗದ ಹಲವು ಪ್ರತಿಭಾವಂತ ಕಲಾವಿದರಿಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಹಂಚಿಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ರಮೇಶ್, ಕೊರಟಗೆರೆ ತಾಲೂಕಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಅಧ್ಯಕ್ಷ ಕೆ.ಆರ್. ಓಬಳರಾಜು, ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಎಂ.ಎನ್. ರೇಣುಕಾ, ಮಹರ್ಷಿ ವಾಲ್ಮೀಕಿ ಕಲಾಸಂಘದ ಅಧ್ಯಕ್ಷ ಹನುಮಂತರಾಜು, ಹಿರಿಯ ಕಲಾವಿದರಾದ ರಾಮಕೃಷ್ಣಯ್ಯ ಚಿಕ್ಕಪಾಲನಹಳ್ಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೇಲ್ವಿಚಾರಕ ಡಿ.ವಿ. ಸುರೇಶ್ ಕುಮಾರ್ ಹಾಗೂ ಹಂಚಿಹಳ್ಳಿ ಗ್ರಾಮದ ಗ್ರಾಮ ಪಂಚಾಯತ್ ಸದಸ್ಯರು ಭಾಗವಹಿಸಿದ್ದರು. ಕೊರಟಗೆರೆ ಪಟ್ಟಣ ಪಂಚಾಯಿತಿ ಸದಸ್ಯ ಕೆ.ಆರ್. ಓಬಳರಾಜು ಅವರು ಕಾರ್ಯಕ್ರಮ ನಿರೂಪಿಸಿದರು.
ಮನ ಸೆಳೆದ ಮೆರವಣಿಗೆ
ನಶಿಸಿ ಹೋಗುತ್ತಿರುವ ಕಾಲಘಟ್ಟದಲ್ಲಿ ಕಲೆಗಳನ್ನು ಇನ್ನು ಜೀವಂತವಾಗಿ ಉಳಿಸಿರುವುದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸಾಧ್ಯವಾಗುತ್ತಿದೆ. ಇಂತಹ ಕಾರ್ಯಕ್ರಮಗಳಿಂದ ಗಿರಿಜನರ ಪ್ರತಿಭೆ ಹಾಗೂ ಅವರ ವೈವಿಧ್ಯಮಯ ಕಲೆಗಳನ್ನು ಪ್ರದರ್ಶಿಸಲು ಹಾಗೂ ಪ್ರೋತ್ಸಾಹಿಸಲು ಸಾಧ್ಯವಾಗಿದೆ.