ಕನ್ನಡಪ್ರಭ ವಾರ್ತೆ ಭೇರ್ಯಭ್ರೂಣ ಹತ್ಯೆ, ಪೋಸ್ಕೋ ಪ್ರಕರಣ, ಬಾಲ್ಯ ವಿವಾಹ ತಡೆಗಟ್ಟಲು ಸ್ಥಳೀಯ ಗ್ರಾಪಂ ಆಡಳಿತ ಮಂಡಳಿಯ ಸದಸ್ಯರು ಹಾಗೂ ಗ್ರಾಮಸ್ಥರು ಆರೋಗ್ಯ ಇಲಾಖೆ ಜೊತೆಯಲ್ಲಿ ಬೆನ್ನೆಲುಬಾಗಿ ನಿಂತರೆ ಮಾತ್ರ ತಡೆಗಟ್ಟಲು ಸಾಧ್ಯ ಎಂದು ಪ್ರಾಥಮಿಕ ಆರೋಗ್ಯ ಕ್ಷೇಮ ಕೇಂದ್ರದ ವೈದ್ಯಾಧಿಕಾರಿ ಡಾ. ಸೌಜನ್ಯ ಹೇಳಿದರು. ಗ್ರಾಪಂ ಕಚೇರಿಯಲ್ಲಿ ಬುಧವಾರ ಆರೋಗ್ಯ ಇಲಾಖೆ ಮತ್ತು ತಾಲೂಕು ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದ ಗ್ರಾಮ ಆರೋಗ್ಯ ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷರು, ಸದಸ್ಯರು, ಸಿಬ್ಬಂದಿಗಳಿಗೆ, ನೀರುಗಂಟಿಗಳಿಗೆ ಹಾಗೂ ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ ತರಬೇತಿ ಹಾಗೂ ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಗ್ರಾಮ ಮಟ್ಟದಲ್ಲಿ ಜನರ ಆರೋಗ್ಯವನ್ನು ಉತ್ತಮ ಪಡಿಸುವಲ್ಲಿ ಗ್ರಾಮ ಆರೋಗ್ಯ ಕಾರ್ಯಕ್ರಮ ಅತ್ಯಂತ ಉಪಯೋಗಕಾರಿಯಾಗಿದೆ, ಗ್ರಾಮೀಣ ಭಾಗದ ಜನರಿಗೆ ಆರೋಗ್ಯದ ಬಗ್ಗೆ ಕುರಿತು ಜ್ಞಾನ ಮತ್ತು ಅರಿವನ್ನು ಮೂಡಿಸುವುದು ಗ್ರಾಮ ಆರೋಗ್ಯ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದರು.ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ ಈ ಮಹತ್ತರ ಗ್ರಾಮ ಆರೋಗ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮ ಯಶಸ್ವಿಯಾಗಲು ಪ್ರತಿಯೊಬ್ಬ ನಾಗರೀಕರ ಸಹಕಾರ ಮುಖ್ಯ ಎಂದು ಹೇಳಿದರು.ಗ್ರಾಮಾಂತರ ಪ್ರದೇಶಗಳಲ್ಲಿ ಪೋಸ್ಕೋ ಪ್ರಕರಣಗಳು ಹೆಚ್ಚಾಗುತ್ತಿವೆ, ಪೋಷಕರು ತಮ್ಮ ಮಕ್ಕಳ ಮೇಲೆ ಹೆಚ್ಚಿನ ನಿಗಾ ವಹಿಸ ಬೇಕು ಎಂದರಲ್ಲದೆ, 16 ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಆರೋಗ್ಯದ ಅರಿವಿನ ಜೊತೆಗೆ ಚಿಕ್ಕ ವಯಸ್ಸಿನಲ್ಲಿ ಮದುವೆಯಾದರೇ ಆರೋಗ್ಯ ಸಮಸ್ಯೆಗಳಿಂದ ಉಂಟಾಗುವ ರೋಗ ಲಕ್ಷಣಗಳ ಬಗ್ಗೆ ತಿಳಿಸಿದರು.ಬಾಲ್ಯ ವಿವಾಹ ಮತ್ತು ಪೋಸ್ಕೋ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲಾ, ಕಾಲೇಜುಗಳಲ್ಲಿ ಈಗಾಗಲೇ ಹೆಚ್ಚಿನದಾಗಿ ಅರಿವು ಮೂಡಿಸಲಾಗುತ್ತಿದೆ, ನಾನು ಮತ್ತು ಆರೋಗ್ಯ ಸಿಬ್ಬಂದಿಗಳು ಜಂಟಿಯಾಗಿ ಭೇಟಿ ನೀಡಿ ಮಾಹಿತಿ ನೀಡಿದ್ದೇವೆ ಎಂದರು.ತರಬೇತಿ ಕಾರ್ಯಕ್ರಮದಲ್ಲಿ ಅಪೌಷ್ಟಿಕತೆ, ರಕ್ತಹೀನತೆ, ಮುಟ್ಟಿನ ನೈರ್ಮಲ್ಯ, ಕ್ಷಯ, ಅಸಾಂಕ್ರಾಮಿಕ ರೋಗಗಳಾದ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ, ಮಾನಸಿಕ ಆರೋಗ್ಯ ಕುರಿತಂತೆ ಘಟನಾಧಾರಿತವಾಗಿ ಸಂಕ್ಷಿಪ್ತವಾಗಿ ಮಾಹಿತಿ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಗ್ರಾಪಂ ಅಧ್ಯಕ್ಷ ಬಿ.ಕೆ. ಮಂಜಪ್ಪ ಮಾತನಾಡಿ, ಆರೋಗ್ಯ ಇಲಾಖೆಯ ಎಲ್ಲ ಕಾರ್ಯಕ್ರಮಗಳಿಗೆ ಸದಸ್ಯರೊಡಗೂಡಿ ಅಗತ್ಯ ಸಹಕಾರ ನೀಡುತ್ತೇವೆ ಎಂದರಲ್ಲದೆ, ಭೇರ್ಯ ಗ್ರಾಪಂ ವ್ಯಾಪ್ತಿಯ ಜನರ ಆರೋಗ್ಯ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಪಂಚಾಯಿತಿಯಿಂದ ಬೃಹತ್ ಆರೋಗ್ಯ ಶಿಬಿರ ಹಮ್ಮಿಕೊಳ್ಳಲು ಚಿಂತನೆ ಮಾಡಲಾಗಿದ್ದು, ಆರೋಗ್ಯ ಇಲಾಖೆಯ ಎಲ್ಲರ ಸಹಕಾರ ಇರಲಿ, ಈ ಬಗ್ಗೆ ತಾಲೂಕು ಆರೋಗ್ಯಾಧಿಕಾರಿಗಳ ಜೊತೆ ಚರ್ಚೆ ಮಾಡುವುದಾಗಿ ತಿಳಿಸಿದರು.ಗ್ರಾಪಂ ಸದಸ್ಯರಾದ ಬಿ.ಎಲ್. ರಾಜಶೇಖರ, ಜಯಲಕ್ಷ್ಮಿ, ಹಿರಿಯ ಆರೋಗ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ.ರೇಖಾ, ಹಿರಿಯರ ಆರೋಗ್ಯ ನಿರೀಕ್ಷಣಾಧಿಕಾರಿ ಚೇತನ್, ಪಂಚಾಯಿತಿ ಲೆಕ್ಕ ಸಹಾಯಕಿ ಬಿ.ಎಸ್. ಅಶ್ವಿನಿ, ಆಯುಷ್ಮಾನ್ ಆರೋಗ್ಯ ಉಪ ಕೇಂದ್ರಗಳ ಸಮುದಾಯ ಅಧಿಕಾರಿಗಳಾದ ಕವಿತ, ಅನುಷಾ, ಸೌಮ್ಯ, ರೇಬೇಕಾ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.