ಆಯ್ಕೆಯಾದ ಎರಡೇ ದಿನದಲ್ಲಿ ಗ್ರಾಪಂ ಅಧ್ಯಕ್ಷೆ ನಿಧನ

KannadaprabhaNewsNetwork | Published : Oct 14, 2023 1:00 AM

ಸಾರಾಂಶ

ಮೋರಿಗೇರಿ ಗ್ರಾಪಂ ಅಧ್ಯಕ್ಷೆ ದಿದ್ದಿಗಿ ಅಂಜಿನಮ್ಮ(52) ತೀವ್ರ ಅನಾರೋಗ್ಯದಿಂದ ಶುಕ್ರವಾರ ಸಂಜೆ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಹಗರಿಬೊಮ್ಮನಹಳ್ಳಿ

ತಾಲೂಕಿನ ಮೋರಿಗೇರಿ ಗ್ರಾಪಂ ಅಧ್ಯಕ್ಷೆ ದಿದ್ದಿಗಿ ಅಂಜಿನಮ್ಮ(52) ತೀವ್ರ ಅನಾರೋಗ್ಯದಿಂದ ಶುಕ್ರವಾರ ಸಂಜೆ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಮೋರಿಗೇರಿ ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಎಸ್‌ಸಿ ಮಹಿಳೆ ಮೀಸಲಾತಿ ಬಂದಿದ್ದರಿಂದ, ಏಕೈಕ ಮಹಿಳೆಯಾಗಿ ಅಂಜಿನಮ್ಮ ಇದ್ದರು. ಹೀಗಾಗಿ ಇವರು ಅನಾರೋಗ್ಯದಿಂದ ಆಸ್ಪತ್ರೆಯಲ್ಲಿದ್ದರೂ ಸೂಚಕರು ಸಲ್ಲಿಸಿದ ನಾಮಪತ್ರದ ಆಧಾರದ ಮೇಲೆ ಅಂಜಿನಮ್ಮ ಅವರನ್ನು ಅಧ್ಯಕ್ಷೆಯಾಗಿ ಅ. ೧೧ರಂದು ಘೋಷಿಸಲಾಗಿತ್ತು. ಅಂಜಿನಮ್ಮ ಅಧ್ಯಕ್ಷೆಯಾಗಿ ಗ್ರಾಪಂ ಕಚೇರಿಯನ್ನು ನೋಡದೆ ತೀರಿಕೊಂಡಿದ್ದರಿಂದ ಬೆಂಬಲಿಗರು ಬೇಸರ ವ್ಯಕ್ತಪಡಿಸಿದ್ದಾರೆ. ಗ್ರಾಮೀಣಾಭಿವೃಧ್ದಿ ಮತ್ತು ಪಂಚಾಯತ್‌ರಾಜ್ ಕಾಯ್ದೆಯಡಿ ಮುಂದಿನ ಅಧ್ಯಕ್ಷರು ಯಾರು ಆಗಬಹುದು ಎಂಬುದನ್ನು ಕಾದು ನೋಡಬೇಕಿದೆ. ಅಂಜಿನಮ್ಮ ಅವರ ನಾಮಪತ್ರದ ಜತೆಗೆ ಅಧ್ಯಕ್ಷ ಸ್ಥಾನಕ್ಕೆ ಎಸ್‌ಟಿ ಸಮುದಾಯದ ಗ್ರಾಪಂ ಸದಸ್ಯೆಯೊಬ್ಬರು ನಾಮಪತ್ರ ಸಲ್ಲಿಸಿರುವುದು ಕುತೂಹಲ ಕೆರಳಿಸಿದೆ.

Share this article