ಕನ್ನಡಪ್ರಭ ವಾರ್ತೆ ಮೈಸೂರುನಗರದಲ್ಲಿನ ಸಿಪಿಐ ಕಚೇರಿಯಲ್ಲಿ ಮೈಸೂರು ಗ್ರಾಮಾಂತರ ಡಿವೈಎಸ್ಪಿ ರಾಜಣ್ಣ ಅವರ ನೇತೃತ್ವದಲ್ಲಿ ಬುಧವಾರ ತಾಲೂಕಿನ ಜಯಪುರ, ಇಲವಾಲ, ವರುಣ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮಗಳ ಎಸ್ಸಿ, ಎಸ್ಟಿ ಜನಾಂಗದ ಕುಂದುಕೊರತೆ ಸಭೆ ಆಯೋಜಿಸಿತ್ತು.ತಾಲೂಕು ವ್ಯಾಪ್ತಿಯ ಗ್ರಾಮಗಳಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟ ತಡೆಗಟ್ಟಬೇಕು.ದಲಿತರು ವಾಸಿಸುವ ಗ್ರಾಮಗಳಲ್ಲಿರುವ ಅಂಬೇಡ್ಕರ್ ಪುತ್ಥಳಿಗಳು ಮತ್ತು ನಾಮಫಲಕಗಳಿಗೆ ಸಿಸಿ ಟಿವಿ ಕ್ಯಾಮೆರಾ ಅಳವಡಿಸಬೇಕು, ಯುವಕರು ಗಾಂಜಾ ದುಶ್ಚಟಕ್ಕೆ ಬಲಿಯಾಗುತ್ತಿರುವುದನ್ನು ತಪ್ಪಿಸಬೇಕು.ಶಾಲೆ ಕಾಲೇಜು ಬಳಿ ಪುಂಡರು ಪೋಲಿಗಳು ಹುಡುಗಿಯರನ್ನು ಚುಡಾಯಿಸುವುದನ್ನು ತಪ್ಪಿಸಬೇಕು. ದಲಿತ ಕೇರಿಗಳಲ್ಲಿ ದೇವರ ಉತ್ಸವ ಮೂರ್ತಿ ಮೆರವಣಿಗೆ ಮಾಡಿಸಬೇಕು. ಸಾಮಾಜಿಕ ಬಹಿಷ್ಕಾರ ಹಾಕುವವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಹೀಗೆ ಹತ್ತು ಹಲವಾರು ದೂರುಗಳು ಸಭೆಯಲ್ಲಿ ಕೇಳಿಬಂದವು.ದಲಿತ ಮುಖಂಡ ಸುರೇಶ್ ಕುಮಾರ್ ಮಾತನಾಡಿ, ಮೈಸೂರು ಮಾನಂದವಾಡಿ ರಾಜ್ಯ ಹೆದ್ದಾರಿ ರಸ್ತೆಯು ಕಿರಿದಾಗಿದ್ದು, ದಿನನಿತ್ಯ ವಾಹನ ದಟ್ಟಣೆ ಹೆಚ್ಚಿದೆ. ಕೆಂಚಲಗೂಡು ಗೇಟ್, ಡಿ. ಸಾಲುಂಡಿ, ಜಯಪುರ , ಹಾರೋಹಳ್ಳಿ ಗೇಟ್, ಗುಜ್ಜೆಗೌಡನಪುರ ಗ್ರಾಮಗಳ ರಸ್ತೆ ಹಂಚಿನಲ್ಲೇ ಸರ್ಕಾರಿ ಶಾಲೆ ಕಾಲೇಜುಗಳಿದ್ದು ಬೆಳಗಿನ ಶಾಲಾ ಸಮಯ ಮತ್ತು ಸಂಜೆ ಶಾಲೆ ಬಿಡುವ ಸಮಯದಲ್ಲಿ ಪೊಲೀಸರು ಶಾಲೆಗಳ ಬಳಿ ನಿಂತು ವಾಹನ ದಟ್ಟಣೆ ತಗ್ಗಿಸಬೇಕು. ವಿದ್ಯಾರ್ಥಿಗಳು ರಸ್ತೆ ದಾಟಲು ಅನುಕೂಲ ಕಲ್ಪಿಸಬೇಕು ಎಂದು ದೂರಿದರು.ಮುಖಂಡ ಸ್ವಾಮಿ ಮಾತನಾಡಿ, ಜೂ. 19ರಂದು ಮೈಸೂರು ಎಸ್ಪಿ ಕಚೇರಿಯಲ್ಲಿ ನಡೆಯುವ ಎಸ್ಸಿ, ಎಸ್ಟಿ ಜನಾಂಗದ ಕುಂದುಕೊರತೆ ಸಭೆಗೆ ಕಡ್ಡಾಯವಾಗಿ ಎಲ್ಲ ಇಲಾಖೆಯ ಅಧಿಕಾರಿಗಳನ್ನು ಸಭೆಗೆ ಕರೆಸಬೇಕು. ಇದರಿಂದ ಸಾರ್ವಜನಿಕರು ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳಲು ಅನುಕೂಲವಾಗುತ್ತದೆ ಎಂದರು.ಇಲವಾಲ ಹೋಬಳಿ ಹೊಸಕೋಟೆ ದೇವರಾಜು ಮಾತನಾಡಿ, ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರತಿ ತಿಂಗಳು ನಡೆಯುವ ಎಸ್ಸಿ, ಎಸ್ಟಿ ಸಭೆಗೆ ಮಾಹಿತಿ ನೀಡುತ್ತಿಲ್ಲ ಎಂದು ದೂರಿದರು.ವರುಣ ಹೋಬಳಿಯ ಯಡಕೊಳ ಮಂಜು ಮಾತನಾಡಿ, ಸರ್ಕಾರಿ ಶಾಲೆಗಳ ಬಳಿ ಪುಂಡರು ಮದ್ಯ ಕುಡಿದು ಶಾಲೆಯನ್ನು ಗಲೀಜು ಮಾಡುತ್ತಿದ್ದಾರೆ. ಗಾಂಜಾ ಸೇವಿಸಿ ಹುಡುಗಿಯರನ್ನು ಚುಡಾಯಿಸುತ್ತಾರೆ ಎಂದು ದೂರಿದರು.ಸಿ. ರವಿ ಮಾತನಾಡಿ, ಜಾತಿನಿಂದನೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ತಪ್ಪಿತಸ್ಥರು ಶಿಕ್ಷೆಯಿಂದ ಪಾರಾಗದಂತೆ ಮಾಡಬೇಕು.ಮೈಸೂರು ತಾಲ್ಲೂಕು ಸಿಂಧುವಳ್ಳಿಯಲ್ಲಿ ಅಂಬೇಡ್ಕರ್ ನಾಮಫಲಕವನ್ನು ಕಿಡಿಗೇಡಿಗಳು ವಿರೂಪಗೊಳಿಸಿ ಹಲವು ತಿಂಗಳುಗಳೇ ಕಳೆದರು ಆರೋಪಿಯನ್ನು ಪತ್ತೆಹಚ್ಚಿಲ್ಲ ಮುಖಂಡರು ಬೇಸರ ವ್ಯಕ್ತಪಡಿಸಿದರು.ಡಿವೈಎಸ್ಪಿ ರಾಜಣ್ಣ ಮಾತನಾಡಿ, ಸಭೆಯಲ್ಲಿ ದಲಿತ ಮುಖಂಡರು ಹೇಳಿದ ಕುಂದು ಕೊರತೆಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ದೂರಿನನ್ವಯ ಸಮಸ್ಯೆ ಬಗೆಹರಿಸಲಾಗುವುದು ಎಂದರು.ಮೈಸೂರು ತಾಲೂಕು ಸಿಪಿಐ ಜಯಪ್ರಕಾಶ್, ವರುಣ ಪೊಲೀಸ್ ಠಾಣಾ ಎಸ್ಐ ಸದಾಶಿವ ತಿಪಾರೆಡ್ಡಿ, ಜಯಪುರ ಪೊಲೀಸ್ ಠಾಣಾ ಎಸ್ಐ ಪ್ರಕಾಶ್ ಯತ್ತಿನಮನಿ, ಇಲವಾಲ ಠಾಣಾ ಎಸ್ಐ ಮಹೇಶ್ ಕುಮಾರ್, ಪ್ರೊಬೇಷನರಿ ಎಸ್ಐ ಸಂತೋಷ್ ಬೇದ್ರೆ, ಮೈಸೂರು ತಾಲೂಕಿನ ವಿವಿಧ ಗ್ರಾಮಗಳ ದಲಿತ ಮುಖಂಡರು ಭಾಗವಹಿಸಿದ್ದರು.