ಗ್ರಾಪಂವಾರು ಬಗರ್ ಹುಕುಂ ಸಾಗುವಳಿ ಅರ್ಜಿ ವಿಲೇವಾರಿ: ಸಚಿವ ಚಲುವರಾಯಸ್ವಾಮಿ

KannadaprabhaNewsNetwork | Published : Jul 22, 2024 1:18 AM

ಸಾರಾಂಶ

4.38 ಗುಂಟೆಗಿಂತ ಹೆಚ್ಚಿನ ಜಮೀನು ಹೊಂದಿದವರಿಗೆ ಮಂಜೂರು ಮಾಡಿರುವುದು, ಅರಣ್ಯ ಪ್ರದೇಶದ ಮಂಜೂರು, ಅರ್ಜಿ ಸಲ್ಲಿಸಿರುವ ರೈತರ ಬದಲಿಗೆ ಬೇರೊಬ್ಬ ರೈತರಿಗೆ ಮಂಜೂರಾತಿ ಪತ್ರ ನೀಡಿರುವುದು ಕಂಡು ಬಂದಿರುವುದರಿಂದ ತನಿಖೆಗೊಳಪಡಿಸಲಾಗಿದೆ. ಈ ರೀತಿಯ ಪ್ರಕರಣಗಳು ಮಳವಳ್ಳಿ ತಾಲೂಕಿನಲ್ಲಿ ಹೆಚ್ಚಾಗಿ ಕಂಡುಬಂದಿವೆ. ಆದ್ದರಿಂದ ಅಂತಹ ಕಡತಗಳನ್ನು ತನಿಖೆ ವರದಿ ನಂತರ ಪರಿಶೀಲನೆ ಮಾಡಲಾಗುವುದು.

ಕನ್ನಡಪ್ರಭ ವಾರ್ತೆ ನಾಗಮಂಗಲ

ತಾಲೂಕಿನ ಪ್ರತಿ ಹೋಬಳಿಯ ಒಂದೊಂದು ಗ್ರಾಮ ಪಂಚಾಯಿತಿಯನ್ನು ಆಯ್ಕೆ ಮಾಡಿಕೊಂಡು ಗ್ರಾಪಂವಾರು ಬಗರ್ ಹುಕುಂ ಸಾಗುವಳಿ ಅರ್ಜಿಗಳನ್ನು ತ್ವರಿತಗತಿಯಲ್ಲಿ ವಿಲೇವಾರಿ ಮಾಡಲು ಅಗತ್ಯ ಕ್ರಮವಹಿಸಲಾಗುವುದು ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

ಪಟ್ಟಣದ ತಾಲೂಕು ಆಡಳಿತಸೌಧದ ನ್ಯಾಯಾಲಯ ಸಭಾಂಗಣದಲ್ಲಿ ಶನಿವಾರ ನಡೆದ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮೂನೆ 53ರಲ್ಲಿ 2230 ಅರ್ಜಿಗಳಿದ್ದು, ನಮೂನೆ 57ರಲ್ಲಿ 16439 ಅರ್ಜಿಗಳಿವೆ. ಮೊದಲಿಗೆ ನಮೂನೆ 53ರ ಅರ್ಜಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.

ಮೊದಲಿನ ರೀತಿ ಈಗ ಯಾವುದೂ ಬರವಣಿಗೆಯ ರೂಪದಲ್ಲಿರುವುದಿಲ್ಲ. ಎಲ್ಲ ಅರ್ಜಿಗಳನ್ನು ಡಿಜಿಟಲ್‌ನಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಸರ್ವೇ, ಸ್ಕೆಚ್, ಸ್ಥಳ ಮಹಜರು ಎಲ್ಲವೂ ಕೂಡ ಆ್ಯಪ್ ಮೂಲಕ ಪಾರದರ್ಶಕವಾಗಿ ನಡೆಯಲಿವೆ. ಈ ಎಲ್ಲವೂ ಸರಿಯಾಗಿದ್ದರೆ, ಸಮಿತಿ ಅನುಮೋದಿಸಿದರೆ ಆರ್‌ಟಿಸಿ ಹಾಗೂ ಖಾತೆ ಕೂಡ ತಕ್ಷಣದಲ್ಲಿಯೇ ಆಗಲಿದೆ ಎಂದು ಹೇಳಿದರು.

ಈ ಮೊದಲು ಮಂಜೂರು ಪತ್ರ ಪಡೆದಿದ್ದರೂ, ಇದುವರೆಗೂ ಖಾತೆ ಆಗದಿರುವ ಹಲವು ಪ್ರಕರಣಗಳಿವೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರೈತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಎಲ್ಲವನ್ನೂ ಡಿಜಿಟಲೀಕರಣಗೊಳಿಸಿದೆ ಎಂದು ತಿಳಿಸಿದರು.

ಈ ಹಿಂದೆ ಸಭೆಯಲ್ಲಿ ಮಂಜೂರು ಆಗಿರುವ 700 ಕ್ಕೂ ಹೆಚ್ಚು ಕಡತಗಳನ್ನು ಸರ್ಕಾರದ ಸೂಚನೆ ಮೇರೆಗೆ ಮಂಡ್ಯ, ಮದ್ದೂರು, ನಾಗಮಂಗಲ ಹಾಗೂ ಮಳವಳ್ಳಿ ತಾಲೂಕುಗಳಲ್ಲಿ ತನಿಖೆಗೊಳಪಡಿಸಲಾಗಿದೆ. ತನಿಖೆಯ ವರದಿ ಇನ್ನೂ ಸಂಪೂರ್ಣವಾಗಿಲ್ಲ ಎಂದರು.

4.38 ಗುಂಟೆಗಿಂತ ಹೆಚ್ಚಿನ ಜಮೀನು ಹೊಂದಿದವರಿಗೆ ಮಂಜೂರು ಮಾಡಿರುವುದು, ಅರಣ್ಯ ಪ್ರದೇಶದ ಮಂಜೂರು, ಅರ್ಜಿ ಸಲ್ಲಿಸಿರುವ ರೈತರ ಬದಲಿಗೆ ಬೇರೊಬ್ಬ ರೈತರಿಗೆ ಮಂಜೂರಾತಿ ಪತ್ರ ನೀಡಿರುವುದು ಕಂಡು ಬಂದಿರುವುದರಿಂದ ತನಿಖೆಗೊಳಪಡಿಸಲಾಗಿದೆ. ಈ ರೀತಿಯ ಪ್ರಕರಣಗಳು ಮಳವಳ್ಳಿ ತಾಲೂಕಿನಲ್ಲಿ ಹೆಚ್ಚಾಗಿ ಕಂಡುಬಂದಿವೆ. ಆದ್ದರಿಂದ ಅಂತಹ ಕಡತಗಳನ್ನು ತನಿಖೆ ವರದಿ ನಂತರ ಪರಿಶೀಲನೆ ಮಾಡಲಾಗುವುದು ಎಂದು ತಿಳಿಸಿದರು.

ಹಲವು ವರ್ಷಗಳಿಂದ ಅರಣ್ಯ ಪ್ರದೇಶದಲ್ಲಿ ಉಳುಮೆ ಮಾಡಿಕೊಂಡು ಅನುಭವದಲ್ಲಿದ್ದಂತಹ ರೈತರಿಗೆ ಅರಣ್ಯ ಇಲಾಖೆಯವರು ಯಾವುದೇ ರೀತಿಯ ತೊಂದರೆ ನೀಡದಂತೆ ಸೂಚನೆ ನೀಡಲಾಗಿದೆ ಎಂದರು.

ಕಾಲ ಮಿತಿಯೊಳಗೆ ಸಾರ್ವಜನಿಕರ ಸಮಸ್ಯೆ ಬಗೆಹರಿಸಿ

ಕಾಲ ಮಿತಿಯೊಳಗೆ ಸಾರ್ವಜನಿಕರ ಸಮಸ್ಯೆ ಬಗೆಹರಿಸಿಕಾಲ ಮಿತಿಯೊಳಗೆ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸುವ ಮೂಲಕ ನಮ್ಮ ಸರ್ಕಾರದ ಮೇಲೆ ಜನರಿಗಿರುವ ವಿಶ್ವಾಸವನ್ನು ಉಳಿಸಿಕೊಳ್ಳುವಲ್ಲಿ ಎಲ್ಲ ಅಧಿಕಾರಿಗಳು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು. ತಾಲೂಕು ಮಟ್ಟದ ಅಧಿಕಾರಿಗಳು ಸ್ಥಳೀಯ ಸಮಸ್ಯೆಗಳನ್ನು ಅಲ್ಲಿಯೇ ಪರಿಹರಿಸುವ ಪ್ರಯತ್ನ ಮಾಡಬೇಕೆಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಸೂಚಿಸಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಜನರು ಸಮಸ್ಯೆ ಬಗೆಹರಿಸುವಂತೆ ಹಳ್ಳಿಗಳಿಂದ ಬಂದು ನನಗೆ ಅಹವಾಲು ಸಲ್ಲಿಸುವ ಪರಿಸ್ಥಿತಿ ನಿರ್ಮಾಣವಾಗದಂತೆ ಎಚ್ಚರವಹಿಸಿ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ಸಭೆಯಲ್ಲಿ ತಹಸೀಲ್ದಾರ್ ನಯೀಂಉನ್ನಿಸಾ, ಸಮಿತಿ ಸದಸ್ಯರಾದ ಆರ್.ಕೃಷ್ಣೇಗೌಡ, ಮಾಚನಾಯ್ಕನಹಳ್ಳಿ ಎಂ.ನಾಗರಾಜಯ್ಯ, ಮಧುಶ್ರೀ, ಎಸಿಎಫ್ ಶಿವರಾಮು, ಎಡಿಎಲ್‌ಆರ್ ಪ್ರಮೋದ್, ಪಟ್ಟಣ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಅಶೋಕ್‌ಕುಮಾರ್, ಕಂದಾಯ ಇಲಾಖೆಯ ಅಧಿಕಾರಿಗಳಾದ ಮಲ್ಲಿಕಾರ್ಜುನಸ್ವಾಮಿ, ಮಧುಸೂಧನ್ ಸೇರಿದಂತೆ ಹಲವರು ಇದ್ದರು.

Share this article