ಕನ್ನಡಪ್ರಭ ವಾರ್ತೆ ಗೌರಿಬಿದನೂರು
ಎಐಡಿಎಸ್‌ಒ ಹಾಗೂ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ನೇತೃತ್ವದಲ್ಲಿ ಮುದುಗೆರೆ, ಹಳೇಉಪ್ಪಾರಹಳ್ಳಿ, ಬಂದರಹಳ್ಳಿ, ರಂಗಪ್ಪನ ಪಾಳ್ಯ, ಗುರುಪನಹಳ್ಳಿ ಹಾಗೂ ಭಕ್ತರಹಳ್ಳಿ ಶಾಲೆಗಳನ್ನು ಉಳಿಸಿಕೊಳ್ಳಲು ಪೋಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಪ್ರತಿಭಟನೆ ಹಮ್ಮಿಕೊಂಡಿದ್ದರು.
ಎಐಡಿಎಸ್‌ಒ ರಾಜ್ಯ ಕಾರ್ಯದರ್ಶಿ ಮಂಡಳಿಯ ಸದಸ್ಯರಾದ ವಿನಯ್ ಚಂದ್ರ ಮಾತನಾಡಿ, ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯು ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳನ್ನು ಮುಚ್ಚುವ ಪಿತೂರಿಯಾಗಿದೆ. ಈ ಯೋಜನೆ ವಿರೋಧಿಸಿ ತಮ್ಮ ಹಳ್ಳಿಗಳ ಶಾಲೆಗಳನ್ನು ಉಳಿಸಿಕೊಳ್ಳಲು ಬಡ ಪೋಷಕರು ಮತ್ತು ಗ್ರಾಮಸ್ಥರು ಒಗ್ಗೂಡಿ ಬೃಹತ್ ಹೋರಾಟ ಮಾಡಿದ್ದಾರೆ. ಬಡ ಮಕ್ಕಳ, ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಹಳ್ಳಿಯ ಹಿರಿಯರು ಕಟ್ಟಿದ ಶಾಲೆಗಳನ್ನು ಮುಚ್ಚುವ ಮೂಲಕ ಅವರ ಕನಸುಗಳನ್ನು ಕಸದ ಬುಟ್ಟಿಗೆ ಹಾಕಲಾಗುತ್ತಿದೆ ಎಂದು ಆರೋಪಿಸಿದರು.ಎಐಡಿಎಸ್‌ಒ ರಾಜ್ಯ ಕಾರ್ಯದರ್ಶಿ ಮಂಡಳಿ ಮತ್ತೊಬ್ಬ ಸದಸ್ಯ ತುಳಸಿ ಮಾತನಾಡಿ, ಈ ಕೂಡಲೇ ಹೊಸೂರು ಕೆಪಿಎಸ್ ಮ್ಯಾಗ್ನೆಟ್ ಶಾಲೆಯ ಯೋಜನೆ ಕೈಬಿಡಬೇಕು, ಯಾವುದೇ ಕಾರಣಕ್ಕೂ ಒಂದೇ ಒಂದು ಸರ್ಕಾರಿ ಶಾಲೆಯನ್ನೂ ವಿಲೀನದ ಹೆಸರಿನಲ್ಲಿ ಮುಚ್ಚಬಾರದು, ಬಲವಂತವಾಗಿ ಶಿಕ್ಷಕರನ್ನು ವರ್ಗಾಯಿಸಬಾರದು, ಪ್ರತಿಯೊಂದು ಸರ್ಕಾರಿ ಶಾಲೆಗೂ ಅಗತ್ಯ ಕಾಯಂ ಶಿಕ್ಷಕರ ನೇಮಕ ಮಾಡಿ, ಸೌಕರ್ಯ ಒದಗಿಸಬೇಕು ಎಂದು ಆಗ್ರಹಿಸಿದರು.
ಈ ನಿಯೋಗದಲ್ಲಿ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ಜಿಲ್ಲೆಯ ಉಪಾಧ್ಯಕ್ಷ ಕೃಷ್ಣ, ಸದಸ್ಯರಾದ ಐಶ್ವರ್ಯ, ನವಾಜ್, ಕಿರಣ್, ಮುದುಗೆರೆಯ ತಿಮಯ್ಯ, ಜಗದೀಶ್, ಬಸವರಾಜ್, ರಾಜಶೇಖರ್, ಹಳೇಉಪ್ಪಾರಹಳ್ಳಿಯ ಸಿದ್ದರೆಡ್ಡಿ, ಅಜ್ಜಪ್ಪ, ಮಹಾಲಕ್ಷ್ಮೀ, ಭಾರತಿ, ಬಂದರಹಳ್ಳಿಯ ಗಂಗಾಧರ್, ಮಂಜುನಾಥ, ಗಂಗಾಧರ್, ರಂಗಪ್ಪನಪಾಳ್ಯದ ರಂಗಸ್ವಾಮಿ, ನರಸಿಂಹ, ಗುರಪ್ಪನಹಳ್ಳಿಯ ಹನುಮಂತ, ಲೊಕೇಶ್, ಭಕ್ತರಹಳ್ಳಿಯ ರಂಗಪ್ಪ, ಚೌಡಯ್ಯ, ಶೋಭಾ, ಶಿಲ್ಪ, ಶೈಲಾ, ಮೋಹನ್, ರಾಘವೇಂದ್ರ, ಕಾರ್ಮಿಕ ಮುಖಂಡ ಹನುಮೇಶ್, ಶ್ರೀಕಾಂತ ಉಪಸ್ಥಿತರಿದ್ದರು.
ಕೋಟ್.... ಸರ್ಕಾರದ ಈ ನೀತಿ ತಂದೆ ಊಟ ಕೊಟ್ಟು, ತಾಯಿ ತಟ್ಟೆ ಕಿತ್ಕೊಂಡ ಹಾಗೆ ಇದೆ. ಒಂದು ಕೈಯಲ್ಲಿ ಉಚಿತ ಬಸ್, ಹೈಟೆಕ್ ಶಾಲೆ ಅಂತ ಆಸೆ ತೋರಿಸಿ, ಇನ್ನೊಂದು ಕೈಯಲ್ಲಿ ನಮ್ಮ ಕಣ್ಣೆದುರಿನ ಹಳ್ಳಿಯ ಶಾಲೆಯನ್ನೇ ಕಿತ್ತುಕೊಳ್ಳಲಾಗುತ್ತಿದೆ.
----
- ನರಸಿಂಹಯ್ಯ