ಶಿರಸಿ: ಶಿರಸಿಯಿಂದ ಅಂಕೋಲಾ, ಕಾರವಾರಕ್ಕೆ ತೆರಳಲು ದೇವನಳ್ಳಿ, ವಡ್ಡಿ ಘಟ್ಟದ ಮೂಲಕ ಸಾರಿಗೆ ಬಸ್ಸಿನ ವ್ಯವಸ್ಥೆ ಕಲ್ಪಿಸುವಂತೆ ಶಾಸಕ ಭೀಮಣ್ಣ ನಾಯ್ಕ ಅವರಲ್ಲಿ ಮತ್ತಿಘಟ್ಟ ಭಾಗದ ನಾಗರಿಕರು ಶನಿವಾರ ಮನವಿ ಸಲ್ಲಿಸಿ, ಆಗ್ರಹಿಸಿದರು.ಶಿರಸಿ ಕುಮಟಾ ರಾಷ್ಟ್ರೀಯ ಹೆದ್ದಾರಿ ೭೬೬ ಇ ಯಲ್ಲಿ ಡಿ. ೨ರಿಂದ ವಾಹನ ಸಂಚಾರವನ್ನು ರದ್ದುಗೊಳಿಸಿ ಆದೇಶ ಮಾಡಲಾಗಿದೆ. ಹಾಗೆಯೇ ಬದಲಿ ಮಾರ್ಗವಾಗಿ ಶಿರಸಿ ಸಿದ್ದಾಪುರ ಕುಮಟಾ ಶಿರಸಿ ಯಲ್ಲಾಪುರ ಕಾರವಾರವನ್ನೂ ಸೂಚಿಸಲಾಗಿದೆ. ಆದರೆ ಶಿರಸಿ, ಯಲ್ಲಾಪುರ, ಕಾರವಾರ ರಸ್ತೆಯು ಸುಮಾರು ೧೬೦ ಕಿಮೀನಷ್ಟು ದೀರ್ಘವಾಗಿದೆ. ಇದಕ್ಕೆ ಬದಲಾಗಿ ಶಿರಸಿ ದೇವನಳ್ಳಿ ವಡ್ಡಿ, ಹೊಸಕಂಬಿ ಅಗಸೂರ ಮಾರ್ಗವಾಗಿ ಅಂಕೋಲಾ, ಯಾಣ ಕಾರವಾರಕ್ಕೆ ಪ್ರಯಾಣ ಮಾಡಿದರೆ ಸುಮಾರು ೫೦ ಕಿಮೀ ದೂರ ಕಡಿಮೆಯಾಗುತ್ತದೆ ಎಂದು ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ.
೩ರಿಂದ ಕಿರವತ್ತಿಯಲ್ಲಿ ಹತ್ತಿ ಮಾರಾಟದ ಟೆಂಡರ್
ಯಲ್ಲಾಪುರ: ತಾಲೂಕಿನ ಕಿರವತ್ತಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಉಪ- ಮಾರುಕಟ್ಟೆಯಲ್ಲಿ ಡಿ. ೩ರಿಂದ ವಾರದ ಪ್ರತಿ ಮಂಗಳವಾರ ದಿನ ಹತ್ತಿ ಟೆಂಡರ್ ಮಾರಾಟ ವ್ಯವಹಾರ ಮಾಡಲು ಉದ್ದೇಶಿಸಲಾಗಿದೆ.ಟೆಂಡರ್ ಪದ್ಧತಿಯಲ್ಲಿ ಹತ್ತಿ ಮಾರಾಟವಾಗುತ್ತಿದ್ದು, ದಲಾಲರು ವಿದ್ಯುನ್ಮಾನ ತೂಕದ ಯಂತ್ರವನ್ನು ಉಪಯೋಗಿಸುತ್ತಿದ್ದಾರೆ. ರೈತರು ಹತ್ತಿಯನ್ನು ಟೆಂಡರಿಗೆ ಇಡಲು ಮತ್ತು ವ್ಯಾಪಾರದ ಪೂರ್ವದಲ್ಲಿ ತೂಕಕ್ಕೆ ಅನುಕೂಲವಾಗುವಂತೆ ಮಾಡಲು ಪ್ರತಿ ಮಂಗಳವಾರ ನಡೆಯುವ ಟೆಂಡರಿಗೆ ಮುಂಚಿತವಾಗಿ ಪ್ರತಿ ಸೋಮವಾರ ಸಂಜೆಯೊಳಗೆ ತಮ್ಮ ಹುಟ್ಟುವಳಿಯನ್ನು ತಂದು ದಲಾಲರ ಅಂಗಡಿಯಲ್ಲಿ ಸಂಗ್ರಹಿಸಿಟ್ಟುಕೊಳ್ಳಬೇಕು ಎಂದು ಸಮಿತಿ ಆಡಳಿತಾಧಿಕಾರಿಗಳು ಹಾಗೂ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.