ಕನ್ನಡಪ್ರಭ ವಾರ್ತೆ, ಶೃಂಗೇರಿ
ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಶೃಂಗೇರಿ ತಾಲೂಕಿನ ಕಿಗ್ಗಾ ಸಮೀಪದ ಸಿರಿಮನೆ ಜಲಪಾತ ತಾಣದಲ್ಲಿ ಮೊಬೈಲ್ ಟವರ್ ಇಲ್ಲದ ಕಾರಣ ಸುತ್ತಮುತ್ತಲ ಗ್ರಾಮಸ್ಥರಿಗೆ, ಇಲ್ಲಿಗೆ ಬರುವ ಪ್ರವಾಸಿಗರಿಗೆ ಸಾಕಷ್ಟು ತೊಂದರೆ ಯಾಗುತ್ತಿದೆ.ಶೃಂಗೇರಿಯಿಂದ ಸುಮಾರು 11 ಕಿಲೋಮೀಟರ್ ದೂರದಲ್ಲಿರುವ ಈ ಸಿರಿಮನೆ ಪ್ರವಾಸಿ ತಾಣಕ್ಕೆ ವಿವಿಧೆಡೆಗಳಿಂದ ಪ್ರವಾಸಿಗರು ನಿತ್ಯ ಭೇಟಿ ನೀಡುತ್ತಾರೆ. ಆದರೆ ಇಲ್ಲಿ ತುರ್ತು ಅಗತ್ಯವಾಗಿರುವ ದೂರವಾಣಿ, ಮೊಬೈಲ್ ಸಂಪರ್ಕ ಸೌಲಭ್ಯವೇ ಇಲ್ಲವಾಗಿದೆ. ಏನಾದರು ಸಮಸ್ಯೆಗಳು, ಘಟನೆಗಳು, ಆಕಸ್ಮಿಕವಾಗಿ ಅವಗಡ ಸಂಭವಿಸಿದರೂ ಕನಿಷ್ಟ ಪಕ್ಷ ಮಾಹಿತಿ ಸಂಪರ್ಕಕ್ಕೂ ಪರದಾಡಬೇಕಾದ ಪರಿಸ್ಥಿತಿ ಇದೆ.
ಸಿರಿಮನೆ ಸುತ್ತಮುತ್ತಲು ಮಾಲ್‌ಸಂಪಿಗೆ, ಸಿಂದೋಡಿ, ಕೊಚ್ಚಾರು, ದೇವರಹಕ್ಲು, ಮಘೇಬೈಲು, ಹುಲುಗಾರುಬೈಲು ಸೇರಿದಂತೆ ಹತ್ತಾರು ಗ್ರಾಮಗಳು, ಹಳ್ಳಿಗಳಿವೆ. ಈ ಎಲ್ಲಾ ಗ್ರಾಮಸ್ಥರು ಮೊಬೈಲ್ ವ್ಯವಸ್ಥೆಯಿಂದ ವಂಚಿತರಾಗಿದ್ದಾರೆ. ಯಾವುದೇ ಮೊಬೈಲ್ ಕಂಪೆನಿಗಳು ಇಂತಹ ಪ್ರವಾಸಿ ತಾಣದ ಸಮೀಪ ಮೊಬೈಲ್ ಟವರ್ ನಿರ್ಮಾಣಕ್ಕೆ ಮುಂದಾಗದಿರುವುದು, ಸರ್ಕಾರ, ಜನಪ್ರತಿನಿದಿಗಳು ನಿರ್ಲಕ್ಷ ವಹಿಸಿರುವುದು ನಿಜಕ್ಕೂ ದುರಾದೃಷ್ಟಕರವಾಗಿದೆ.ಈ ಪ್ರದೇಶಗಳಲ್ಲಿ ಯಾವುದಾದರೂ ಸಮಸ್ಯೆಗಳು ಉಂಟಾದಲ್ಲಿ ಸಂಬಂಧಪಟ್ಟವರ ಗಮನಕ್ಕೆ ತರಲು ಸುಮಾರು ನಾಲ್ಕೈದು ಕಿ.ಮಿ ದೂರದಲ್ಲಿರುವ ಕಿಗ್ಗಾಕ್ಕೆ ಬರಬೇಕು. ಮೊದಲೇ ಇಲ್ಲಿಗೆ ಬಸ್ ಸೌಕರ್ಯವಿಲ್ಲ. ಖಾಸಗಿ ವಾಹನಗಳು ಹೊರತುಪಡಿಸಿದರೆ ಪಾದಯಾತ್ರೆ ಅಥವಾ ಕಾಲ್ನಡಿಗೆಯೇ ಗತಿ.
ಕೆಲವರ್ಷಗಳ ಹಿಂದೆ ಇಲ್ಲಿಗೆ ಜಿಲ್ಲಾ ಉಸ್ತುವಾರಿ ಸಚಿವರು, ಪ್ರವಾಸೋದ್ಯಮ ಸಚಿವರು ಬಂದು ಹೋಗಿದ್ದರು. ಜನಪ್ರತಿನಿದಿಗಳು, ವಿವಿಧ ಇಲಾಖೆ ಅಧಿಕಾರಿಗಳುಭೇಟಿ ನೀಡಿ ಹೋಗಿದ್ದರೂ ಇಲ್ಲಿನ ಗ್ಕಾಮಸ್ಥರಿಗೆ ಮೊಬೈಲ್ ಟವರ್ ನಿರ್ಮಾಣದ ಕನಸು ಮಾತ್ರ ಕನಸಾಗಿಯೇ ಉಳಿದಿದೆ. ಈ ಬಗ್ಗೆ ಗ್ರಾಮಸ್ತರಾದ ದೇವರಹಕ್ಲು ಸುಬ್ರಮಣ್ಯ ಅಭಿಪ್ರಾಯ ವ್ಯಕ್ತಪಡಿಸುತ್ತಾ ನಾವು ಕಳೆದ ಹಲವು ವರ್ಷಗಳಿಂದ ಇಲ್ಲಿ ಮೊಬೈಲ್ ಟವರ್ ನಿರ್ಮಿಸುವಂತೆ ಸಂಬಂಧಪಟ್ಟ ಇಲಾಖೆ, ಸರ್ಕಾರಕ್ಕೆ ಮನವಿ ನೀಡುತ್ತಲೇ ಬಂದಿದ್ದೇವೆ.ಆದರೆ ಇದುವರೆಗೂ ನಮ್ಮ ಬೇಡಿಕೆಗಳಿಗೆ ಯಾರು ಸ್ಪಂದಿಸಿಲ್ಲ. ಇದು ಪ್ರಸಿದ್ಧ ಪ್ರವಾಸಿ ತಾಣವಾಗಿರುವುದರಿಂದ ರಾಜ್ಯದ ವಿವಿಧೆಡೆಗಳಿಂದ ಪ್ರತಿನಿತ್ಯ ಪ್ರವಾಸಿಗರು ಬರುತ್ತಾರೆ. ಅಲ್ಲದೇ ಸುತ್ತಮುತ್ತಲ ಗ್ರಾಮಸ್ಥರಿಗೆ ಮೊಬೈಲ್ ಟವರ್ ಇಲ್ಲದೆ ತೊಂದರೆಯಾಗುತ್ತಿದೆ. ಇನ್ನಾದರೂ ಸರ್ಕಾರ, ಸಂಬಂಧಪಟ್ಟ ಇಲಾಖೆ ಕೂಡಲೇ ಇತ್ತ ಗಮನ ಹರಿಸಿ ಈ ಭಾಗದಲ್ಲಿ ಮೊಬೈಲ್ ಟವರ್ ನಿರ್ಮಾಣಕ್ಕೆ ಮುಂದಾಗಬೇಕು ಎನ್ನುತ್ತಾರೆ.