ಕನ್ನಡಪ್ರಭ ವಾರ್ತೆ ಚಿತ್ತಾಪುರ
ಯರಗಲ್ ಗ್ರಾಮದಲ್ಲಿ ಎರಡು ಅಂಗನವಾಡಿ ಕೇಂದ್ರಗಳು ಇದ್ದು ಒಂದು ಕೇಂದ್ರಕ್ಕೆ ಸ್ವಂತ ಕಟ್ಟಡ ಇಲ್ಲದೇ ಇರುವುದರಿಂದ ಎರಡು ಕೇಂದ್ರಗಳು ಇದೇ ಶಿಥಿಲಾವಸ್ಥೆ ಕಟ್ಟಡದಲ್ಲಿ ನಡೆಯುವ ಅನಿವಾರ್ಯತೆ ಇದೆ. ಇಲ್ಲಿ ಸುಮಾರು ೫೫ ರಿಂದ ೬೦ ಮಕ್ಕಳ ಕೇಂದ್ರಕ್ಕೆ ಬರುತ್ತಿದ್ದು, ಕಟ್ಟಡ ಶಿಥಿಲಾವಸ್ಥೆಗೆ ತಲುಪಿರುವ ಹಿನ್ನೆಲೆ ಪಾಲಕರು ತಮ್ಮ ಮಕ್ಕಳಿಗೆ ಕೇಂದ್ರಕ್ಕೆ ಕಳಿಸಲು ಹಿಂದೇಟು ಹಾಕುತ್ತಿದ್ದಾರೆ. ಕಟ್ಟಡದ ಸುತ್ತಲಿನ ಪರಿಸರವೂ ಸಂಪೂರ್ಣ ಹದಗೆಟ್ಟಿದ್ದು ಇಂತಹ ವಾತಾವರಣದಲ್ಲಿ ಮಕ್ಕಳು ಅನಾರೊಗ್ಯಕ್ಕೆ ತುತ್ತಾಗುವ ಸಂಭವವೇ ಹೆಚ್ಚಾಗಿದೆ.
ಈ ಕುರಿತಾಗಿ ಇಲ್ಲಿ ಕಾರ್ಯನಿರ್ವಹಿಸುವ ಅಂಗನವಾಡಿ ಕಾರ್ಯಕರ್ತೆಯರು ಸಂಬಂಧಪಟ್ಟ ಅಧಿಕಾರಿಗಳಿಗೆ ಅಲ್ಲಿನ ಪರಿಸ್ಥಿತಿ ಕುರಿತು ಹಲವಾರು ಬಾರಿ ಮೌಖಿಕವಾಗಿ ಮತ್ತು ಲಿಖಿತವಾಗಿ ದೂರು ಸಲ್ಲಿಸಿದ್ದರೂ ಕೂಡಾ ಯಾರು ಸ್ಪಂದಿಸುತ್ತಿಲ್ಲ. ಅನಿವಾರ್ಯವಾಗಿ ಅದೇ ಶಿಥಿಲ ಕಟ್ಟಡದಲ್ಲಿ ಶಾಲೆ ನಡೆಸುತ್ತಿದ್ದು ಏನಾದರೂ ಅನಾಹುತ ಸಂಬವಿಸುವುದೋ ಎನ್ನುವ ಭಯದಲ್ಲಿ ಇದ್ದೇವೆ ಎನ್ನುತ್ತಾರೆ ಕಾರ್ಯಕರ್ತೆಯರು.ಗ್ರಾಮದಲ್ಲಿ ಇರುವ ಹಳೆಯ ಕಟ್ಟಡದಲ್ಲಿ ಅಂಗನವಾಡಿ ಕೇಂದ್ರ ನಡೆಯುತ್ತಿದ್ದು ಅಲ್ಲದೇ ಅದರ ಸುತ್ತ ಮುತ್ತ ಗಿಡ ಗಂಟೆಗಳು ಮತ್ತು ಜನರು ಕಣಕಿ ಹಾಕಿದ್ದರಿಂದ ಅಲ್ಲೆಲ್ಲ ವಿಷ ಜಂತುಗಳು ಸುತ್ತಾಡುತ್ತಿವೆ. ಇಂತಹ ವಾತಾವರಣದಲ್ಲಿ ನಮ್ಮ ಮಕ್ಕಳನ್ನು ಅಂಗನವಾಡಿ ಕೇಂದ್ರಕ್ಕೆ ನಮ್ಮ ಮಕ್ಕಳನ್ನು ಕಳಿಸಲು ತುಂಬಾ ಭಯವಾಗುತ್ತಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಇಲ್ಲಿ ನಡೆಯುತ್ತಿರುವ ಕೇಂದ್ರಕ್ಕೆ ನೂತನ ಕಟ್ಟದ ನಿರ್ಮಿಸಬೇಕು ಎಂದು ಗ್ರಾಮದ ನಾಗಮ್ಮ ಒತ್ತಾಯಿಸಿದರು.
ಪೋಟೋ: ೨೯-೩ ಸಿಟಿಪಿಅರ್ ೨ಚಿತ್ತಾಪುರ ತಾಲೂಕಿನ ಯರಗಲ್ ಗ್ರಾಮದಲ್ಲಿ ಇರುವ ಅಂಗನವಾಡಿ ಕೇಂದ್ರವು ಶಿಥಿಲಾವಸ್ಥೆಯಲ್ಲಿದ್ದು ಛತ್ತಿನ ಮೇಲ್ಚಾವಣಿಯಲ್ಲಿ ಬಿರುಕು ಬಿಟ್ಟಿರುವುದು.