-30 ಗ್ರಾಮಗಳಿಗೆ ಅನುಕೂಲ -ಹಳೆಯ ಪ್ಲಾನ್ ರೀತಿಯಲ್ಲೇ ಕೆಲಸ ಮಾಡಲು ಗ್ರಾಮಸ್ಥರ ಒತ್ತಾಯ
ಕನ್ನಡಪ್ರಭ ವಾರ್ತೆ ಹೊಸಕೋಟೆ
ತಾಲೂಕಿನ ಕೊಳತೂರು ಗೇಟ್ ಬಳಿ ಹಾದು ಹೋಗಿರುವ ಚೆನ್ನೈ ಎಕ್ಸ್ಪ್ರೆಸ್ ಹೈವೇ ಜಂಕ್ಷನ್ ಬಳಿ ಕೊಳತೂರು ಗ್ರಾಮಕ್ಕೆ ತೆರಳಲು ಮೇಲ್ಸೇತುವೆ ನಿರ್ಮಿಸಿ ಅಂಡರ್ ಪಾಸ್ ಮೂಲಕ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.೨೦೧೬ರಲ್ಲಿ ರಸ್ತೆ ನಿರ್ಮಾಣದ ವೇಳೆ ಭೂಮಿ ಪಡೆದುಕೊಂಡು ಹಣ ಕೊಟ್ಟು ರಸ್ತೆ ನಿರ್ಮಾಣದ ಯೋಜನೆ ಸಿದ್ದಪಡಿಸಿದ್ದರು. ಆ ಯೋಜನೆ ಪ್ರಕಾರ ಕೊಳತೂರು ಗ್ರಾಮಕ್ಕೆ ತೆರಳಲು ಯಾವುದೇ ಸಮಸ್ಯೆ ಆಗುತ್ತಿರಲಿಲ್ಲ. ಆದರೆ ಈಗ ಆ ಯೋಜನೆಯನ್ನು ಆಧಿಕಾರಿಗಳು ತಿರುಚಿದ್ದು ಕೊಳತೂರು ಗೇಟ್ ಬಳಿ ತಿರುವು ಪಡೆಯುವ ರಸ್ತೆ ಮುಚ್ಚುವ ಹಾಗೆ ಹಾಗೂ ಕೊಳತೂರು ಗ್ರಾಮಕ್ಕೆ ಬರುವ ವಾಹನಗಳು ರಾಷ್ಟ್ರೀಯ ಹೆದ್ದಾರಿ ೭೫ರ ಹಲಸಹಳ್ಳಿ ಗೇಟ್ ಬಳಿಗೆ ಯು ತಿರುವು ಪಡೆದು ವಾಪಸ್ ಬಂದು ಕೊಳತೂರು ಗ್ರಾಮಕ್ಕೆ ಪ್ರವೇಶ ಮಾಡುವಂತೆ ಪ್ಲಾನ್ ಮಾಡಿದ್ದಾರೆ. ಆದ್ದರಿಂದ ಈ ಯೋಜನೆ ಕೈ ಬಿಟ್ಟು 2016ರಲ್ಲಿ ಮಾಡಿದ ಯೋಜನೆಯಂತೆ ರಸ್ತೆ ನಿರ್ಮಾಣ ಮಾಡಿ ಹತ್ತಾರು ಗ್ರಾಮದ ನಾಗರಿಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮುಖಂಡ ಬಸವರಾಜ್ ಒತ್ತಾಯಿಸಿದರು.
ಗ್ರಾಮ ಮುಖಂಡರಾದ ಲಕ್ಷ್ಮಣಮೂರ್ತಿ, ರಮೇಶ್, ಬಸವರಾಜು.ಎಂ, ಮುನಿರಾಜು, ಕೆ.ಎಚ್.ಸುರೇಶ್, ರವಿ, ಓರೋಹಳ್ಳಿ ಜಯಣ್ಣ, ಸೋಲೂರು ಮುನಿಯಪ್ಪ, ಮುನೇಗೌಡ, ಅಶ್ವಥ್, ಬೈರೇಗೌಡ, ಭಾಸ್ಕರ್, ಪಟೇಲ್ ಶ್ರೀನಿವಾಸ್, ಶ್ರೀನಿವಾಸ್, ಶುಬ್ರಾಯಪ್ಪ, ಪ್ರವೀಣ್, ಸುನಿಲ್ ಹಾಜರಿದ್ದರು.
ತಾಯಿ ಮಕ್ಕಳ ಆಸ್ಪತ್ರೆಗೂ ತೊಂದರೆ
ಕೊಳತೂರು ಗ್ರಾಮದ ನಾಗರಿಕರ ಸಮಸ್ಯೆ ಆಲಿಸುವ ವಿಚಾರವಾಗಿ ಸಂಸದ ಡಾ. ಕೆ.ಸುಧಾಕರ್ ಸಂಜೆ 4 ಗಂಟೆಗೆ ಬರುವುದಾಗಿ ತಿಳಿಸಿದ್ದರು. ಆದರೆ ಅಂತಿಮವಾಗಿ ಸಂಸದರ ಪ್ರವಾಸ ರದ್ದಾದರಿಂದ ಸೆ. 17ಕ್ಕೆ ಅಧಿಕಾರಿಗಳೊಂದಿಗೆ ಆಗಮಿಸಿ ಸ್ಥಳ ಪರಿಶೀಲಿಸಿ ರಸ್ತೆ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ನಂತರ ಸ್ಥಳದಲ್ಲಿ ಜಮಾಯಿಸಿದ್ದ ನಾಗರಿಕರು ವಾಪಸ್ ತೆರಳಿದರು.