ಸರ್‌ಎಂವಿ ಕಾಲೇಜು ಸ್ಥಳಾಂತರಕ್ಕೆ ಗ್ರಾಮಸ್ಥರ ಒತ್ತಾಯ

KannadaprabhaNewsNetwork | Published : Jul 5, 2024 12:53 AM

ಸಾರಾಂಶ

ದಾವಣಗೆರೆಯಲ್ಲಿ ಸರ್ ಎಂ.ವಿ.ಕಾಲೇಜು ಸ್ಥಳಾಂತರಗೊಳಿಸಿ, ನಾಗರಿಕರಿಗೆ ನೆಮ್ಮದಿ ನೀಡುವಂತೆ ಶಿವಕುಮಾರ ಸ್ವಾಮಿ ಬಡಾವಣೆ ನಾಗರಿಕ ಹಿತರಕ್ಷಣಾ ಸಮಿತಿಯಿಂದ ಅಪರ ಜಿಲ್ಲಾಧಿಕಾರಿ, ಪೊಲೀಸ್ ಅಧೀಕ್ಷಕರಿಗೆ ಮನವಿ ಸಲ್ಲಿಸಲಾಯಿತು

ಕನ್ನಡಪ್ರಭ ವಾರ್ತೆ ದಾವಣಗೆರೆ

ಸರ್ ಎಂ.ವಿ.ಕಾಲೇಜನ್ನು ಬೇರೆಡೆ ಸ್ಥಳಾಂತರಿಸಬೇಕು ಎಂದು ಶ್ರೀ ಶಿವಕುಮಾರ ಸ್ವಾಮಿ ಬಡಾವಣೆ ನಾಗರಿಕ ಹಿತರಕ್ಷಣಾ ಸಮಿತಿ ಒತ್ತಾಯಿಸಿದೆ.

ಈ ಬಗ್ಗೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ಮತ್ತು ಮಹಾನಗರ ಪಾಲಿಕೆ ಆಯುಕ್ತರಿಗೆ ಬುಧವಾರ ಸಮಿತಿ ನೇತೃತ್ವದಲ್ಲಿ ಮನವಿ ಸಲ್ಲಿಸಿ, ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

30 ವರ್ಷಗಳಿಂದ ಬಡಾವಣೆಯಲ್ಲಿ ವಾಸವಾಗಿರುವ ನಾವುಗಳು ಯಾವುದೇ ಗಲಾಟೆ, ಕಿರಿಕಿರಿ ಇಲ್ಲದ ಜೀವನ ಸಾಗಿಸುತ್ತಿದ್ದೇವೆ. ಆದರೆ, ಸರ್ ಎಂ.ವಿ. ಕಾಲೇಜು ಪ್ರಾರಂಭದಲ್ಲಿ ಆಡಳಿತ ಕಚೇರಿ ಮಾತ್ರ ಪ್ರಾರಂಭಿಸುತ್ತೇವೆ ಎಂದು ಬಾಡಿಗೆ ಪಡೆದು, ತದನಂತರ ಸುತ್ತಮುತ್ತಲಿನ ಮನೆಗಳು, ಕಟ್ಟಡಗಳನ್ನು ಬಾಡಿಗೆಗೆ ಪಡೆದಿದ್ದಾರೆ. ಸುಮಾರು 500 ವಿದ್ಯಾರ್ಥಿಗಳನ್ನು ಅಲ್ಲೇ ಅಕ್ಕಪಕ್ಕದ 500 ಮೀಟರ್ ವ್ಯಾಪ್ತಿ ಮನೆಗಳನ್ನು ಬಾಡಿಗೆ ಪಡೆದು ಅನಧಿಕೃತ ಪಿಜಿ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ವಿದ್ಯಾರ್ಥಿಗಳ ಹಾಸ್ಟೆಲ್, ಕಾಲೇಜು ಮತ್ತು ಊಟದ ವ್ಯವಸ್ಥೆಯನ್ನು ಎಲ್ಲವನ್ನು ಸ್ಥಳೀಯ ವಾಸಿಗಳು ಓಡಾಡುವ 30 ಅಡಿ ರಸ್ತೆಯ ಅಕ್ಕಪಕ್ಕದಲ್ಲಿ ಕೈಗೊಳ್ಳುತ್ತಿದ್ದಾರೆ. ಸದರಿ ರಸ್ತೆ ಅಕ್ಕಪಕ್ಕದಲ್ಲಿ ಕಾಲೇಜಿನ ವಾಹನಗಳು ಮತ್ತು ವಿದ್ಯಾರ್ಥಿಗಳ ವಾಹನಗಳನ್ನು ನಿಲ್ಲಿಸುತ್ತ, ತೊಂದರೆ ಮಾಡುತ್ತಿದ್ದಾರೆ. ಇದರಿಂದ ಚಿಕ್ಕಮಕ್ಕಳು, ವೃದ್ಧರು ಸುರಕ್ಷಿತವಾಗಿ ಓಡಾಡಲು ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಡಾವಣೆಗೆ ಅಂಟಿಕೊಂಡ ಮುಖ್ಯ ರಸ್ತೆಯಲ್ಲಿ ಎಸ್.ಬಿ.ಐ, ಆಕ್ಸಿಸ್ ಕೇಂದ್ರ ಬ್ಯಾಂಕ್, ಮೋರ್ ಶಾಪ್, ವಿಶಾಲ್ ಶಾಪ್ ಮತ್ತು ನಂಜಪ್ಪ ಆಸ್ಪತ್ರೆ ಎಲ್ಲವೂ ಇವೆ. ಸದರಿ ಕಾಲೇಜಿನ ವಿದ್ಯಾರ್ಥಿಗಳು, ಪೋಷಕರು ಕಾಲೇಜಿನ ಅಕ್ಕಪಕ್ಕದಲ್ಲಿರುವ ಮನೆಯ ಮುಂದೆ, ಖಾಲಿ ಸೈಟುಗಳ ಮುಂದೆ ಓಡಾಡುವ ರಸ್ತೆ ಮುಂದೆ ಅಡ್ಡ ಅಡ್ಡವಾಗಿ ಕಾರುಗಳನ್ನು ನಿಲ್ಲಿಸುತ್ತಾರೆ. ಬೀಡಾ, ಜರ್ದಾ ಉಗಿದು, ಸಿಗರೇಟ್, ತಿನ್ನುವ ಪದಾರ್ಥಗಳ ಪಾಕೇಟುಗಳನ್ನು ಎಸೆಯುತ್ತಾರೆ. ಅದನ್ನು ಪ್ರಶ್ನಿಸಿದವರ ಮೇಲೆಯೇ ಜಗಳಕ್ಕೆ ನಿಲ್ಲುತ್ತಾರೆ. ಈ ಎಲ್ಲ ಅವ್ಯವಸ್ಥೆ ವಿರುದ್ಧ ಅಗತ್ಯ ಕಾನೂನು ಕ್ರಮ ಕೈಗೊಳ್ಳಬೇಕು. ನಾಗರಿಕರಿಗೆ ನೆಮ್ಮದಿ ವಾತಾವರಣ ಕಲ್ಪಿಸಬೇಕು ಎಂದರು.

ಮನವಿ ಸಲ್ಲಿಸುವ ವೇಳೆ ಸಮಿತಿಯ ಕೆ.ಎಚ್. ಲೋಕೇಶ್, ಡಿ.ರವೀಂದ್ರ, ದಿನೇಶ್, ಪಿ.ಆರ್. ರಾಮಚಂದ್ರ ಶ್ರೇಷ್ಠಿ, ನೀಲಕಂಠಪ್ಪ. ಕೆ.ಎಲ್. ರಾಹುಲ್, ರಾಜಣ್ಣ, ಅಂಕಿತ, ವಕೀಲ, ಹರೀಶ್, ನವೀನ್, ಚಂದನ್, ಡಿ.ಸುರೇಂದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.

Share this article