ಮಾಗಡಿ: ಕೆಂಪಾಪುರದಲ್ಲಿರುವ ಹಿರಿಯ ಕೆಂಪೇಗೌಡರ ಐಕ್ಯ ಸ್ಥಳದ ಅಭಿವೃದ್ಧಿ ಹೆಸರಿನಲ್ಲಿ ರೈತರ ಹೆಚ್ಚುವರಿ ಭೂಸ್ವಾಧೀನ ಪ್ರಕ್ರಿಯೆ ಕೈಬಿಡುವಂತೆ ಒತ್ತಾಯಿಸಿ ನೂರಾರು ರೈತರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಭೂ ಸ್ವಾಧೀನ ಆಗಿರುವ ರೈತರಿಗೆ ಗ್ರಾಮದ ಸಮೀಪವಿರುವ ಜಾನಿಗೆರೆ ಗ್ರಾಮದ ಸರ್ವೆ ನಂಬರಿನಲ್ಲಿ ಗೋಮಾಳ ಜಾಗ ಗುರುತಿಸಿದ್ದು, ಆ ಜಾಗದಲ್ಲಿ ನಿವೇಶನಗಳನ್ನು ಹಂಚಲಾಗಿದೆ. ಮನೆ ನಿರ್ಮಿಸಿಕೊಳ್ಳಲು ಹಾಗೂ ಮೂಲ ಸೌಕರ್ಯ, ಹಕ್ಕು ಪತ್ರ ನೀಡದೆ ಮತ್ತೆ ಹೆಚ್ಚುವರಿ ಇನ್ನು 10 ಎಕರೆ ಭೂ ಸ್ವಾಧೀನಪಡಿಸಿಕೊಳ್ಳುವುದಾಗಿ ಭೂದಾಖಲೆಗಳ ಸಹಾಯಕ ನಿರ್ದೇಶಕ ಹಾಗೂ ಅಧಿಕಾರಿಗಳು ಗ್ರಾಮಕ್ಕೆ ಆಗಮಿಸಿ ಭೂಸ್ವಾಧೀನಕ್ಕೆ ನೋಟಿಸ್ ಜಾರಿಗೆ ಸಹಿ ಹಾಕುವಂತೆ ಒತ್ತಾಯಿಸುತ್ತಿದ್ದಾರೆ. ನಾವ್ಯಾರು ಸಹಿ ಹಾಕುವುದಿಲ್ಲ ಎಂದು ನೋಟಿಸ್ ತಿರಸ್ಕರಿಸಿದ್ದೇವೆ. ಏಕೆಂದರೆ ನಮಗೆ ಈಗಿರುವುದು ಕೇವಲ ತುಂಡು ಜಮೀನು, ಇದನ್ನು ಕೆಳೆದುಕೊಂಡು ನಮ್ಮ ಜೀವನಕ್ಕೆ ಆಧಾರವಾಗಿರುವ ದನಕರು, ಮಕ್ಕಳನ್ನು ಸಾಕುವುದು ಹಾಗೂ ಕುಟುಂಬದ ನಿರ್ವಹಣೆ ಹೇಗೆ ಎಂಬ ಆತಂಕದಲ್ಲಿದ್ದೇವೆ. ಹೀಗಾಗಿ ಸರ್ಕಾರ ನಮ್ಮ ತುಂಡು ಭೂಮಿಯನ್ನು ವಶಪಡಿಸಿಕೊಳ್ಳುವುದು ಬೇಡ, ಇರುವ ಸರ್ಕಾರಿ ಗೋಮಾಳದಲ್ಲಿಯೇ ಸ್ಮಾರಕವನ್ನು ಅಭಿವೃದ್ಧಿಪಡಿಸಿ ಹೆಚ್ಚುವರಿ ಭೂಸ್ವಾಧೀನ ಪ್ರಕ್ರಿಯೆ ಕೈಬಿಡಬೇಕೆಂದು ರೈತರು ಆಗ್ರಹಿಸಿ ಸರ್ಕಾರಕ್ಕೆ ಪತ್ರ ಬರದು ಮನವಿ ಮಾಡಿದ್ದಾಗಿ ತಿಳಿಸಿದರು.
ಈ ವೇಳೆ ರೈತ ಮುಖಂಡರಾದ ಹನುಮಂತಯ್ಯ, ಗೋವಿಂದಯ್ಯ, ದಿನೇಶ್, ಮಲ್ಲಪ್ಪ, ರಂಗಸ್ವಾಮಯ್ಯ, ಕೆ.ನರಸಿಂಹ, ಗಂಗನರಸಯ್ಯ, ಪಾಪಯ್ಯ, ಕೆ.ಎಚ್.ಹನುಮಯ್ಯ, ಸಾವಿತ್ರಮ್ಮ, ಶಾರದಮ್ಮ, ಗೌರಮ್ಮ, ಬೋರಮ್ಮ, ಜಯಮ್ಮ, ಗಂಗಮ್ಮ ಇತರರಿದ್ದರು.(ಫೋಟೋ ಕ್ಯಾಫ್ಷನ್)
ಮಾಗಡಿ ತಾಲೂಕಿನ ಕೆಂಪಾಪುರದ ರೈತರು ಕೆಂಪೇಗೌಡರ ಸ್ಮಾರಕ ಅಭಿವೃದ್ಧಿ ಹೆಸರಿನಲ್ಲಿ ಹೆಚ್ಚುವರಿ ಭೂಸ್ವಾಧೀನ ಮಾಡಿಕೊಂಡು ಒಕ್ಕಲೆಬ್ಬಿಸುವುದು ಬೇಡ ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.