ಕೊಪ್ಪಳ: ತಮ್ಮೂರು ಸುತ್ತಲು ಕಾರ್ಖಾನೆ, ಕೋಳಿ, ಕೂದಲು ತ್ಯಾಜ್ಯ ಸೇರಿದಂತೆ ತ್ಯಾಜ್ಯ ತಂದು ಹಾಕುವುದನ್ನು ವಿರೋಧಿಸಿ ಹಳೆಕನಕಾಪುರ ಗ್ರಾಮಸ್ಥರು ಭಾನುವಾರ ಪ್ರತಿಭಟನೆ ನಡೆಸಿದರು.
ಗ್ರಾಮದ ಸುತ್ತಲೂ ಕಾರ್ಖಾನೆಗಳ ಹೊಗೆ, ಸಿಮೆಂಟ್ ಧೂಳು, ಗೊಬ್ಬರ ಕಂಪನಿ ದುರ್ವಾಸನೆ, ಕಲುಷಿತ ನೀರು, ಕಲುಷಿತ ಗಾಳಿಯಿಂದ ಜನರ ಆರೋಗ್ಯ ದಿನ ನಿತ್ಯ ಹದೆಗೆಡುತ್ತಿದೆ. ಗ್ರಾಮದ ಹತ್ತಿರದಲ್ಲೇ ಕೋಳಿ, ಕೂದಲು, ಆಸ್ಪತ್ರೆ ತ್ಯಾಜ್ಯ ಹಾಕುವುದರಿಂದ ಜನರ ಆರೋಗ್ಯ ಹಾಳಾಗುತ್ತಿದೆ. ಗ್ರಾಮಸ್ಥರಿಗೆ ಒಂದಿಲ್ಲೊಂದು ಕಾಯಿಲೆಗೆ ತುತ್ತಾಗಿ ಆಸ್ಪತ್ರೆ ಸೇರುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮಸ್ಥರು ಟಿಬಿ, ಅಸ್ತಮಾ, ಕ್ಯಾನ್ಸರ್ ಚರ್ಮ ರೋಗ ಸೇರಿದಂತೆ ಮಾರಣಾಂತಿಕ ರೋಗಗಳಿಂದ ಆತಂಕಕ್ಕೆ ಒಳಗಾಗಿದ್ದಾರೆ. ಮಕ್ಕಳು, ವೃದ್ಧರಿಗೆ ನೆಗಡಿ, ಕೆಮ್ಮು, ಜ್ವರ ಸರ್ವೇ ಸಾಮಾನ್ಯವಾಗಿದೆ.ಅಸಹಜ ಸಾವುಗಳು ಊರನ್ನೇ ಬೆಚ್ಚಿಬೀಳಿಸಿದೆ. ಈ ಕಾರ್ಖಾನೆಗಳು ಬಿಡುವ ವಿಷಗಾಳಿ, ಕಲಿಷಿತ ನೀರು, ಜನರ ಆರೋಗ್ಯಕ್ಕೆ ಮಾರಕವಾಗಿರುವ ಇಂತಹ ವಾತಾವರಣಕ್ಕೆ ಜನ ರೋಸಿ ಹೋಗಿದ್ದಾರೆ.
ಈ ಎಲ್ಲ ಸಮಸ್ಯೆಗಳ ಕುರಿತು ಸಂಬಂಧಪಟ್ಟ ಅಧಿಕಾರಿ, ಗ್ರಾಪಂಗೆ ಹಲವಾರು ಬಾರಿ ಮನವಿ ಸಲ್ಲಿಸಿ ಸಮಸ್ಯೆ ಪರಿಹಾರಕ್ಕೆ ಕೇಳಿಕೊಂಡರೂ ಯಾವುದೇ ಪರಿಹಾರ ಆಗಿಲ್ಲ. ಹಳೆ ಕನಕಪುರ ಜನರ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡುತ್ತಿರುವ ಅಧಿಕಾರಿಗಳನ್ನು ಅಮಾನತ್ತು ಮಾಡಬೇಕು ಇಲ್ಲವಾದರೆ ರಾಷ್ಟ್ರೀಯ ಹೆದ್ದಾರಿ ಬಂದ್ ಹೋರಾಟ ಮಾಡಲಾಗುವುದು ಎಂದು ಗ್ರಾಮದ ಮುಖಂಡರು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.ಈ ಸಂದರ್ಭದಲ್ಲಿ ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಮುಖಂಡ ಶರಣು ಗಡ್ಡಿ, ಕೆ.ಬಿ.ಗೋನಾಳ್, ಶರಣು ಶೆಟ್ಟರ್, ಶರಣು ಪಾಟೀಲ್, ಮಂಗಳೇಶ ರಾತೋಡ್, ಗ್ರಾಮದ ಹಿರಿಯ ಮುಖಂಡರಾದ ಕಲ್ಲಯ್ಯ ಇಂದರಗಿ ಮಠ, ವಜ್ರಪ್ಪ ಕಮಲಾಪುರ, ಶರಣಯ್ಯ ಕಲಾಲಬಂಡಿ, ಸುರೆಪ್ಪ ಗದಗ, ಶರಣಯ್ಯ ಗೌಡ್ರು, ಗುಡದಪ್ಪ ಕೆರೆ, ಕಲ್ಲಯ್ಯ ಹಿರೇಮಠ, ಹನುಮೇಶ್ ಕೂಕನೂರ, ವಿಜಯಪ್ಪ ಅಮೀನಗಡ, ಹನುಮಂತು ಕೂಕನೂರ, ವಸಂತ, ದ್ಯಾಮಣ್ಣ ಇಟಗಿ, ರಾಚಪ್ಪ ವಾರದ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.