ಜೆಡಿಎಸ್ ನೇತೃತ್ವದಲ್ಲಿ ಸಂಘದ ನಿರ್ದೇಶಕರು, ಗ್ರಾಮಸ್ಥರಿಂದ ಧರಣಿ । ನಿಬಂಧಕರ ವಿರುದ್ಧ ಆಕ್ರೋಶಗೊಂಡ ಶಾಸಕ ಎ.ಮಂಜು
ಕನ್ನಡಪ್ರಭ ವಾರ್ತೆ ರಾಮನಗರಹಣ ದುರುಪಯೋಗ ಹಾಗೂ ಆಡಳಿತ ಮಂಡಳಿಯ ವಿರುದ್ಧ ದುರ್ವರ್ತನೆ ತೋರಿದ ಆರೋಪದ ಮೇರೆಗೆ ಬಾನಂದೂರು ಹಾಲು ಉತ್ಪಾದಕರ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ.ಬಿ.ಕುಮಾರ್ ಅವರನ್ನು ಅಮಾನತುಗೊಳಿಸಿ ಆಡಳಿತ ಮಂಡಳಿ ನಿರ್ಣಯ ಕೈಗೊಂಡಿದ್ದರೂ, ಸಹಕಾರ ಸಂಘಗಳ ಸಹಾಯಕ ನಿಬಂಧಕರು ಮಾನ್ಯ ಮಾಡದೆ ಭ್ರಷ್ಟರ ಬೆನ್ನಿಗೆ ನಿಂತಿದ್ದಾರೆ ಎಂದು ಆರೋಪಿಸಿ ಜೆಡಿಎಸ್ ನೇತೃತ್ವದಲ್ಲಿ ಸಂಘದ ನಿರ್ದೇಶಕರು ಮತ್ತು ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿದರು.
ನಗರದ ಐಜೂರಿನಲ್ಲಿರುವ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಾರ್ಯಾಲಯ ರಾಮನಗರ ಉಪವಿಭಾಗ ಕಚೇರಿ ಎದುರು ಮಾಗಡಿ ಕ್ಷೇತ್ರದ ಮಾಜಿ ಶಾಸಕ ಎ.ಮಂಜುನಾಥ್ ನೇತೃತ್ವದಲ್ಲಿ ಸಂಘದ ನಿರ್ದೇಶಕರು ಮತ್ತು ಗ್ರಾಮಸ್ಥರು ಪ್ರತಿಭಟನೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.ಬಾನಂದೂರು ಡೇರಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಸಂಘದ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಈ ವಿಚಾರದಲ್ಲಿ ಸಂಘದ ಪದಾಧಿಕಾರಿಗಳಿಗೆ ದೊರೆತ ದಾಖಲೆಗಳಲ್ಲಿ ಸುಮಾರು 1 ಕೋಟಿ ರು.ಗೂ ಹೆಚ್ಚು ಹಣ ದುರುಪಯೋಗ ಆಗಿರುವ ಅನುಮಾನವಿದೆ. ಹೀಗಾಗಿ ಸದರಿ ಕಾರ್ಯದರ್ಶಿಯನ್ನು ಅಮಾನತ್ತಿನಲ್ಲಿರಿಸಿ ತನಿಖೆ ನಡೆಸುವಂತೆ ನಿರ್ದೇಶಕರು ನಿರ್ಣಯ ಕೈಗೊಂಡಿದ್ದರು. ಆದರೆ, ಸದರಿ ನಿರ್ಣಯಕ್ಕೆ ಸಹಾಯಕ ನಿಬಂಧಕರು ಸ್ಪಂದಿಸದೆ, ಭ್ರಷ್ಟ ಕಾರ್ಯದರ್ಶಿಯ ವಿರುದ್ಧ ಏನೊಂದು ಕ್ರಮವನ್ನೂ ಕೈಗೊಂಡಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಸಹಾಯಕ ನಿಬಂಧಕ ಹರೀಶ್ ಪ್ರತಿಭಟನಾಕಾರರ ಬಳಿ ಮಾತನಾಡಲು ಆಗಮಿಸಿದಾಗ, ಪ್ರತಿಭಟನಾಕಾರರ ಪ್ರಶ್ನೆಗಳಿಗೆ ಸಮಂಜಸ ಉತ್ತರ ನೀಡಲಿಲ್ಲ. ಇದಕ್ಕೆ ಮತ್ತಷ್ಟು ಉಗ್ರಗೊಂಡ ಪ್ರತಿಭಟನಾಕಾರರು ಸಹಾಯಕ ನಿಬಂಧಕರ ವಿರುದ್ಧ ಹರಿಹಾಯ್ದರು. ಇದ್ಯಾವುದಕ್ಕೂ ಕ್ಯಾರೆ ಅನ್ನದ ಸಹಾಯಕ ನಿಬಂಧಕ ಹರೀಶ್ ತಮ್ಮ ನಿಲುವಿಗೆಅಂಟಿ ಕೊಂಡಿದ್ದರು.ಇದರಿಂದ ಆಕ್ರೋಶಗೊಂಡ ಮಾಜಿ ಶಾಸಕ ಎ.ಮಂಜುನಾಥ್, ಯಾರದ್ದೋ ಒತ್ತಡಕ್ಕೆ ಸಿಲುಕಬೇಡಿ. ಸಂಘದ ಹಣ ದುರುಪಯೋಗವಾಗಿರುವ ಬಗ್ಗೆ ಮೇಲ್ನೋಟಕ್ಕೆ ಗೊತ್ತಾಗಿದೆ. ಭ್ರಷ್ಟ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯನ್ನು ಅಮಾನತುಗೊಳಿಸಿ, ತನಿಖೆ ನಡೆಸಿ ಎಂದು ತಿಳಿ ಹೇಳಿದರು. ಆಗಲೂ ಸದರಿ ಅಧಿಕಾರಿ ಕಿವಿಗೊಡಲಿಲ್ಲ. ಈ ವೇಳೆ ಅಧಿಕಾರಿಗಳು ಮತ್ತು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು.
ಮಾಜಿ ಶಾಸಕರು ಸಹ ತಮ್ಮ ಅಸಮಾಧಾನ ವ್ಯಕ್ತಪಡಿಸಿ, ಈ ಅಧಿಕಾರಿಗೆ ಮಾನ, ಮರ್ಯಾದೆ ಇಲ್ಲ, ಇವನಿಗೆ ಚಪ್ಪಲಿಯಲ್ಲಿ ಹೊಡೆಸುತ್ತೇನೆ. ನೀನಾಗಿಯೇ ಜಾಗ ಖಾಲಿ ಮಾಡು, ಇಲ್ಲದಿದ್ದರೆ ಜನರ ಶಾಪಕ್ಕೆ ಗುರಿಯಾಗುತ್ತಿಯಾ ಎಂದು ಸಹಾಯಕ ನಿಬಂಧಕ ಹರೀಶ್ ರವರಿಗೆ ಅವಾಜ್ ಹಾಕಿದರು.ಎಲ್ಲಾ ಊರುಗಳಲ್ಲೂ ತಲೆ ಹೊಡೆಯೋ ಕೆಲಸ ಮಾಡಿದ್ದಾರೆ. ರೈತರ ಶಾಪ ನಿನ್ನನ್ನು ಬಿಡುವುದಿಲ್ಲ. ಕೂಡಲೇ ಭ್ರಷ್ಟಾಚಾರ ಮಾಡಿರುವ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳನ್ನು ಅಮಾನತು ಮಾಡದಿದ್ದರೆ ನಾಳೆ ನಿಮ್ಮ ಕಚೇರಿಗೆ ಬಂದು ಬೀಗ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಸಹಾಯಕ ನಿಬಂಧಕರ ಕಚೇರಿ ಬಳಿಯಿಂದ ತೆರಳಿದ ಪ್ರತಿಭಟನಾಕಾರರು ಐಜೂರು ವೃತ್ತದಲ್ಲಿಯೂ ಕೆಲ ಕಾಲ ಪ್ರತಿಭಟನೆ ನಡೆಸಿ ಕೆ.ಎಂ.ಎಫ್ ಮಾಜಿ ಅಧ್ಯಕ್ಷ ಪಿ.ನಾಗರಾಜ್ ರವರು ಭ್ರಷ್ಟ ಸಿಇಒಗಳ ಪರವಾಗಿ ನಿಂತಿದ್ದಾರೆ ಎಂದು ಆರೋಪಿಸಿ ಹರಿಹಾಯ್ದರು.ಪ್ರತಿಭಟನೆಯಲ್ಲಿ ಬಾನಂದೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ನಾಗರಾಜ್, ಉಪಾಧ್ಯಕ್ಷ ಕೃಷ್ಣಪ್ಪ, ನಿರ್ದೇಶಕರಾದ ಬಸವರಾಜು, ಶಂಭಮ್ಮ, ಶ್ರೀಧರ್, ಕುಮಾರ್.ಜಿ.ಕೆ, ಗಿರಿಜಮ್ಮ, ರಮೇಶ್, ಬಿಡದಿ ಪುರಸಭೆ ಮಾಜಿ ಸದಸ್ಯ ಶಿವಕುಮಾರ್, ರಮೇಶ್ ಕುಮಾರ್ , ಗ್ರಾಮದ ಮುಖಂಡರಾದ ಶಿವಲಿಂಗಯ್ಯ, ಜಗದೀಶ್, ಪಾಪಣ್ಣ, ರಾಜು ಮುಂತಾದವರು ಹಾಜರಿದ್ದರು.
-----8ಕೆಆರ್ ಎಂಎನ್ 3.ಜೆಪಿಜಿ
ರಾಮನಗರ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಾರ್ಯಾಲಯ ರಾಮನಗರ ಉಪವಿಭಾಗ ಕಚೇರಿ ಎದುರು ಮಾಜಿ ಶಾಸಕ ಮಂಜುನಾಥ್ ನೇತೃತ್ವದಲ್ಲಿ ನಿರ್ದೇಶಕರು ಮತ್ತು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.------