-ಕೆರೆಗಳನ್ನು ಕೆರೆಗಳಾಗಿಯೇ ಉಳಿಸುವಂತೆ ಜಿಲ್ಲಾಡಳಿತಕ್ಕೆ ಗ್ರಾಮಸ್ಥರ ಒತ್ತಾಯ
ತಾಲೂಕಿನ ಮಾದೇಗೌಡನಕೊಪ್ಪಲು ಹಾಗೂ ಮಾರನಚಾಕನಹಳ್ಳಿ ಗ್ರಾಮದ ಕೆರೆಗಳನ್ನು ಅರಣ್ಯಕ್ಕಾಗಿ ಮೀಸಲಿರಿಸಿರುವುದನ್ನು ವಿರೋಧಿಸಿ ಮಾರನಚಾಕನಹಳ್ಳಿ ಗ್ರಾ.ಪಂ. ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ದುದ್ದ ಹೋಬಳಿ ಮಾರನಚಾಕನಹಳ್ಳಿ ದಾಖಲೆ ಸರ್ವೆ ನಂ. ೫೪ ರ ಮಾದೇಗೌಡನಕೊಪ್ಪಲು ಗ್ರಾಮಕ್ಕೆ ಸೇರಿದ ೩೫ ಎಕರೆ ೨೦ ಗುಂಟೆ ಮತ್ತು ಮಾರನಚಾಕನಹಳ್ಳಿ ಗ್ರಾಮಕ್ಕೆ ಸೇರಿದ ಸರ್ವೆ ನಂ.೧೭೨ ರಲ್ಲಿ ಇರುವ ೧೯ ಎಕರೆ ೩೭ ಗುಂಟೆ ಸರ್ಕಾರಿ ಕೆರೆಯನ್ನು (ಸಿಡಿ) ಅರಣ್ಯಕ್ಕಾಗಿ ವರ್ಗಾಯಿಸಿರುದುವುದನ್ನು ರದ್ದುಗೊಳಿಸಬೇಕೆಂದು ಗ್ರಾಮಸ್ಥರು ಒತಾಯಿಸಿದರು.ಸಾರ್ವಜನಿಕರಿಗೆ ಹಾಗೂ ಜಾನುವಾರುಗಳಿಗೆ ಈ ಕೆರೆಗಳಿಂದ ತುಂಬಾ ಅನುಕೂಲವಾಗುತ್ತಿದ್ದು, ಕೆರೆಗಳನ್ನು ಗ್ರಾಮಸ್ಥರಿಗೆ ಯಾವುದೇ ಮಾಹಿತಿ ನೀಡದೆ ಅರಣ್ಯಕ್ಕಾಗಿ ಮೀಸಲಿರಿಸಿರುತ್ತಾರೆ. ಅರಣ್ಯಕ್ಕೆ ಮೀಸಲಿಟ್ಟಿರುವ ಕೆರೆಗಳನ್ನು ಸಾರ್ವಜನಿಕ ಉಪಯೋಗಕ್ಕಾಗಿ ಗ್ರಾಮಗಳ ಸುಪರ್ದಿಗೆ ಬಿಡಿಸಿಕೊಡಬೇಕೆಂದು ಜಿಲ್ಲಾಧಿಕಾರಿ ಕಚೇರಿ ಸಹಾಯಕಿ ರೋಹಿಣಿ ಅವರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.