ಸಮರ್ಪಕ ವಿದ್ಯುತ್ ಪೂರೈಕೆ ಮಾಡುವಲ್ಲಿ ಸೆಸ್ಕ್ ಅಧಿಕಾರಿಗಳು ವಿಫಲ: ಗ್ರಾಮಸ್ಥರ ಪ್ರತಿಭಟನೆ

KannadaprabhaNewsNetwork | Published : Mar 11, 2025 12:47 AM

ಸಾರಾಂಶ

ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಹಗಲು 7 ಗಂಟೆಗಳ ತ್ರಿಫೆಸ್ ವಿದ್ಯುತ್ ನೀಡಬೇಕು ಎಂಬ ಸರ್ಕಾರದ ಆದೇಶವಿದ್ದರೂ ಇದು ಪಾಲನೆಯಾಗುತ್ತಿಲ್ಲ. ಸೆಸ್ಕ್ ಲೈನ್‌ಮ್ಯಾನ್‌ಗಳು ವಿದ್ಯುತ್ ಅಡಚಣೆಯಾದರೆ ತಕ್ಷಣ ದುರಸ್ತಿ ಕೆಲಸ ಮಾಡುವುದಿಲ್ಲ. ರೈತರು ಕರೆ ಮಾಡಿದರೆ ಸ್ವೀಕರಿಸುವುದಿಲ್ಲ. ಸೆಸ್ಕ್ ಸಿಬ್ಬಂದಿ ಮತ್ತು ಅಧಿಕಾರಿಗಳ ವರ್ತನೆಯಿಂದ ರೈತರು ಬೆಳೆ ಅನುಭವಿಸಬೇಕಾಗಿದೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ರೈತರ ಕೃಷಿ ಪಂಪ್ ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಮಾಡುವಲ್ಲಿ ಸೆಸ್ಕ್ ಅಧಿಕಾರಿಗಳು ವಿಫಲರಾಗಿದ್ದಾರೆ. ಬೆಳೆದ ಬೆಳೆ ಒಣಗುವ ಹಂತ ತಲುಪಿದೆ ಎಂದು ಆರೋಪಿಸಿ ತಾಲೂಕಿನ ಬೇವಿನಕುಪ್ಪೆ ಸುತ್ತಮುತ್ತಲ ಗ್ರಾಮಸ್ಥರು ಸೆಸ್ಕ್ ಕಚೇರಿ ಮುತ್ತಿಗೆ ಹಾಕಿ ಸೋಮವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ಸೆಸ್ಕ್ ಕಚೇರಿ ಎದುರು ರೈತರು ಕರ್ತವ್ಯ ನಿರತ ಸಿಬ್ಬಂದಿಯನ್ನು ಕಚೇರಿಯಿಂದ ಹೊರ ಕಳುಹಿಸಿ ವಿದ್ಯುತ್ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವವೆರಗೂ ಪ್ರತಿಭಟನೆ ವಾಪಸ್ ಪಡೆಯುವುದಿಲ್ಲ ಎಂದು ಪಟ್ಟು ಹಿಡಿದು ಸ್ಥಳಕ್ಕೆ ಇಲಾಖೆ ಉನ್ನತ ಅಧಿಕಾರಿಗಳು ಬಂದು ಭರವಸೆ ನೀಡಬೇಕು ಎಂದು ಆಗ್ರಹಿಸಿದರು.

ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಹಗಲು 7 ಗಂಟೆಗಳ ತ್ರಿಫೆಸ್ ವಿದ್ಯುತ್ ನೀಡಬೇಕು ಎಂಬ ಸರ್ಕಾರದ ಆದೇಶವಿದ್ದರೂ ಇದು ಪಾಲನೆಯಾಗುತ್ತಿಲ್ಲ. ಸೆಸ್ಕ್ ಲೈನ್‌ಮ್ಯಾನ್‌ಗಳು ವಿದ್ಯುತ್ ಅಡಚಣೆಯಾದರೆ ತಕ್ಷಣ ದುರಸ್ತಿ ಕೆಲಸ ಮಾಡುವುದಿಲ್ಲ. ರೈತರು ಕರೆ ಮಾಡಿದರೆ ಸ್ವೀಕರಿಸುವುದಿಲ್ಲ. ಸೆಸ್ಕ್ ಸಿಬ್ಬಂದಿಗಳು ಮತ್ತು ಅಧಿಕಾರಿಗಳ ವರ್ತನೆಯಿಂದ ರೈತರು ಬೆಳೆ ಅನುಭವಿಸಬೇಕಾಗಿದೆ ಎಂದು ಆರೋಪಿಸಿದರು.

ಕಳೆದ ಒಂದೂವರೆ ತಿಂಗಳಿನಿಂದ ರೈತರಿಗೆ ವಿದ್ಯುತ್ ಸಮಸ್ಯೆ ಎದುರಾಗಿದೆ. ಈ ಭಾಗಕ್ಕೆ ಮಹಿಳಾ ಜೆಇಯನ್ನು ನೇಮಕ ಮಾಡಲಾಗಿದೆ. ರಾತ್ರಿ ವೇಳೆಯಲ್ಲಿ ವಿದ್ಯುತ್ ಅಡಚಣೆಯಾದರೆ ಕರೆ ಮಾಡಲು ಸಾಧ್ಯವಾಗುತ್ತಿಲ್ಲ. ಕೆಲ ರೈತರು ಬೆಳೆ ಒಣಗುವ ಭಯದಿಂದ ರಾತ್ರಿ ವೇಳೆಯಲ್ಲೂ ಕರೆ ಮಾಡಿ ಬೈಯಬೇಕಾಗಿದೆ. ನಮಗೆ ಮಹಿಳಾ ಜೆಇ ಅವರನ್ನು ಬದಲಾಯಿಸಿಕೊಡಬೇಕು ಎಂದು ಆಗ್ರಹಿಸಿದರು.

ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಳೆದ ಸಾಲಿನ ಬೆಳೆ ಕಳೆದುಕೊಂಡಿದ್ದೇವೆ. ಈ ಬಾರಿಯು ಬೆಳೆ ಬೆಳೆಯಲು ವಿದ್ಯುತ್ ಕಣ್ಣಾ ಮುಚ್ಚಾಲೆಯಿಂದ ಸಮಸ್ಯೆ ಎದುರಾಗಿದೆ. ಬಡ್ಡಿ ಸಾಲ ತಂದು ವ್ಯವಸಾಯ ಮಾಡುತ್ತಿದ್ದೇವೆ. ಏನಾದರೂ ಹೆಚ್ಚ ಕಡಿಮೆಯದರೂ ಯಾರು ಹೊಣೆಗಾರರು ಎಂದು ಸೆಸ್ಕ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಸೆಸ್ಕ್ ಎಇಇ ಅವರ ಭರವಸೆ ಮೇರೆಗೆ ಪ್ರತಿಭಟನೆ ಕೈಬಿಡಲಾಯಿತು. ಪ್ರತಿಭಟನೆಯಲ್ಲಿ ಬೇವಿನಕುಪ್ಪೆ ಅನಿಲ್‌ಕುಮಾರ್, ಜಯರಾಮು, ಜವರಪ್ಪ, ಶೇಖರ್, ದಿಲೀಪ್, ಆನಂದ, ಸುರೇಶ್, ಮನು, ತಮ್ಮಣ್ಣ ಇತರರು ಇದ್ದರು.

Share this article