ಮದ್ದೂರು ನಗರಸಭೆ ನಾಮಫಲಕ ಅಳವಡಿಸಲು ಗ್ರಾಮಸ್ಥರ ಪ್ರತಿರೋಧ

KannadaprabhaNewsNetwork |  
Published : Feb 18, 2026, 01:30 AM IST
17ಕೆಎಂಎನ್‌ಡಿ-13ಮದ್ದೂರು ತಾಲೂಕು ಚಾಮನಹಳ್ಳಿ ಗ್ರಾಪಂ ಕಚೇರಿಗೆ ಮದ್ದೂರು ನಗರಸಭೆ ಕಾರ್ಯಾಲಯ ಎಂದು ನಾಮಫಲಕ ಅಳವಡಿಸುವುದನ್ನು ವಿರೋಧಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಮದ್ದೂರು ತಾಲೂಕಿನ ಚಾಮನಹಳ್ಳಿ ಗ್ರಾಪಂ ಕಚೇರಿಯನ್ನು ಮದ್ದೂರು ನಗರಸಭೆ ಕಾರ್ಯಾಲಯ ಎಂದು ನಾಮಫಲಕ ಅಳವಡಿಸಲು ಗ್ರಾಮಸ್ಥರು ಪ್ರತಿರೋಧ ಒಡ್ಡಿ ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ಸಂಜೆ ಗ್ರಾಮದಲ್ಲಿ ನಡೆದಿದೆ.

ಕನ್ನಡಪ್ರಭ ವಾರ್ತೆ ಮದ್ದೂರು

ತಾಲೂಕಿನ ಚಾಮನಹಳ್ಳಿ ಗ್ರಾಪಂ ಕಚೇರಿಯನ್ನು ಮದ್ದೂರು ನಗರಸಭೆ ಕಾರ್ಯಾಲಯ ಎಂದು ನಾಮಫಲಕ ಅಳವಡಿಸಲು ಗ್ರಾಮಸ್ಥರು ಪ್ರತಿರೋಧ ಒಡ್ಡಿ ಪ್ರತಿಭಟನೆ ನಡೆಸಿದ ಘಟನೆ ಸೋಮವಾರ ಸಂಜೆ ಗ್ರಾಮದಲ್ಲಿ ನಡೆದಿದೆ.

ಯಾವುದೇ ಸೂಚನೆ ನೀಡದೆ ನಾಮಫಲಕ ಅಳವಡಿಸಲು ಬಂದಿದ್ದ ವ್ಯಕ್ತಿಗಳನ್ನು ತಡೆದ ಗ್ರಾಮ ಪಂಚಾಯ್ತಿ ಮಾಜಿ ಜನಪ್ರತಿನಿಧಿಗಳು, ರೈತರು, ವ್ಯಕ್ತಿಗಳೊಂದಿಗೆ ಮಾತಿನ ಚಕಮಕಿ ನಡೆಸಿದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಕೆಲ ಕಾಲ ಬಿಗುವಿನಪರಿಸ್ಥಿತಿ ನಿರ್ಮಾಣವಾಗಿತ್ತು. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಮದ್ದೂರು ನಗರಸಭೆ ಅಧಿಕಾರಿಗಳು ಮತ್ತು ಪೊಲೀಸರು ಧರಣಿ ನಿರತರನ್ನು ಸಮಾಧಾನ ಪಡಿಸಿದ್ದರು.

ಮದ್ದೂರು ನಗರಸಭೆ ಕಾರ್ಯಾಲಯ ಎಂದು ಬರೆದಿದ್ದನ್ನು ಅಳಿಸಿ ಹಾಕಿ ಮತ್ತೆ ಚಾಮನಹಳ್ಳಿ ಗ್ರಾಪಂ ಕಾರ್ಯಾಲಯ ಎಂದು ಅಳವಡಿಸಿ ನಂತರ ವ್ಯಕ್ತಿಗಳನ್ನು ಸ್ಥಳದಿಂದ ತೆರಳಲು ಗ್ರಾಮಸ್ಥರು ಅವಕಾಶ ಮಾಡಿಕೊಟ್ಟಿದ್ದಾರೆ. ಮದ್ದೂರು ತಾಲೂಕಿನ ಗೆಜ್ಜಲಗೆರೆ, ಗೊರವನಹಳ್ಳಿ, ಚಾಮನಹಳ್ಳಿ ಹಾಗೂ ಸೋಮನಹಳ್ಳಿ ಗ್ರಾಮಗಳನ್ನು ಮದ್ದೂರು ನಗರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡಿರುವುದನ್ನು ವಿರೋಧಿಸಿ 4 ಗ್ರಾಮ ಪಂಚಾಯ್ತಿಗಳ ಗ್ರಾಮಸ್ಥರು ಕಳೆದ ಎರಡು ತಿಂಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ವಿಚಾರವನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಚರ್ಚೆ ನಡೆಸುವುದಾಗಿ ಭರವಸೆ ನೀಡಿ ಹೋರಾಟ ಕೈಬಿಡುವಂತೆ ಮನವಿ ಮಾಡಿದ್ದರು. ಸಚಿವರಿಗೆ ಮನವಿಗೆ ಸ್ಪಂದಿಸಿದ ಹೋರಾಟಗಾರರು ಸರ್ಕಾರದ ತೀರ್ಮಾನ ಬರುವವರೆಗೆ ಶಾಂತಿಯುತ ಹೋರಾಟ ನಡೆಸುವುದಾಗಿ ಭರವಸೆ ನೀಡಿದರು.

ಈ ಮಧ್ಯೆ ಸೋಮನಹಳ್ಳಿ ಗ್ರಾಮ ಪಂಚಾಯ್ತಿಯನ್ನು ಅಧಿಕಾರಿಗಳು ಮುಚ್ಚಿ ಮದ್ದೂರು ನಗರಸಭೆ ಕಾರ್ಯಾಲಯ ಎಂದು ನಾಮಫಲಕ ಅಳವಡಿಸಿದ ನಂತರ ಚಾಮನಹಳ್ಳಿ ಗ್ರಾಮ ಪಂಚಾಯ್ತಿಯನ್ನು ಮದ್ದೂರು ನಗರಸಭೆ ಎಂದು ಅಳವಡಿಸಲು ಮುಂದಾದಾಗ ಗ್ರಾಮಸ್ಥರ ಪ್ರತಿರೋಧ ವ್ಯಕ್ತವಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ರೀಡೆ, ಶಿಕ್ಷಣದಲ್ಲಿ ಮಳವಳ್ಳಿ ವಿಶಿಷ್ಟ ಛಾಪು: ದೊಡ್ಡಯ್ಯ
ಕಾಡಾನೆ ತುಳಿದು ಬಾಳೆ, ತೆಂಗು, ಅಡಿಕೆ ನಾಶ