ರಾಜ್ಯ ಮಟ್ಟದ ಹಳ್ಳಿಕಾರರ ಸಮಾವೇಶದ ಪೂರ್ವಭಾವಿ ಸಭೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಹಳ್ಳಿಕಾರ ಸಮುದಾಯ ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಮುನ್ನಡೆ ಸಾಧಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಜನಾಂಗವನ್ನು ಒಗ್ಗೂಡಿಸಲು ಪ್ರಯತ್ನಿಸಲಾಗುತ್ತಿದೆ ಎಂದು ರಾಜ್ಯ ಹಳ್ಳಿಕಾರರ ಸಂಘದ ಉಪಾಧ್ಯಕ್ಷ ಕೆ.ಎಂ.ನಾಗರಾಜ್ ಹೇಳಿದರು.ನಗರದ ಕೋಟೆ ಸಮೀಪ ನ್ಯೂ ಬ್ರೈಟ್ ಪ್ಯೂಚರ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ನಡೆದ ರಾಜ್ಯ ಮಟ್ಟದ ಹಳ್ಳಿಕಾರರ ಸಮಾವೇಶದ ಪೂರ್ವಭಾವಿ ಸಭೆ ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ಸಮುದಾಯವನ್ನು ಪ್ರವರ್ಗ 3ಕ್ಕೆ ಸೇರ್ಪಡೆಗೊಳಿಸಿದ ಕಾರಣ ಯಾವುದೇ ಸವಲತ್ತು ದೊರೆಯದೇ ಸಂಕಷ್ಟದ ಸ್ಥಿತಿಯಿದೆ. ಹೀಗಾಗಿ ಜನಾಂಗವನ್ನು ಪ್ರವರ್ಗ 1ಕ್ಕೆ ಸೇರ್ಪಡೆಗೊಳಿಸಿ ಹಿಂದುಳಿದ ವರ್ಗಕ್ಕೆ ದೊರೆಯುವ ಸಕಲ ಸೌಲಭ್ಯ ಹಳ್ಳಿಕಾರರಿಗೆ ಒದಗಿಸಿ ಆರ್ಥಿಕವಾಗಿ ಶಕ್ತಿ ತುಂಬಾಬೇಕು ಎಂದು ಆಗ್ರಹಿಸಿದರು.
ರಾಜ್ಯದ ಹಲವು ಜಿಲ್ಲೆಗಳಲ್ಲಿ ನೆಲೆಸಿರುವ ಹಳ್ಳಿಕಾರ ಸಮುದಾಯವನ್ನು ಒಂದೆಡೆಗೆ ಸೇರಿಸುವ ದೃಷ್ಟಿಯಿಂದ ಅ.27 ರಂದು ಬೆಂಗಳೂರಿನ ಪೂರ್ಣಿಮಾ ಪ್ಯಾಲೇಸ್‌ನಲ್ಲಿ ಹಳ್ಳಿಕಾರ ಸಮಾವೇಶ ಹಮ್ಮಿಕೊಂಡಿದ್ದು ಜಿಲ್ಲೆಯಿಂದ ಸಮಾಜದ ಮುಖಂಡರು ಒಟ್ಟಾಗಿ ಭಾಗವಹಿಸಿ ರಾಜ್ಯ ಸರ್ಕಾರದ ಮುಂದೆ ಶಕ್ತಿ ತೋರ್ಪಡಿಸಬೇಕು ಎಂದರು.ಸಮುದಾಯದಿಂದ ಸಂವರ್ಧನೆಗೊಂಡಿರುವ ಹಳ್ಳಿಕಾರ್ ತಳಿಯ ರಾಸುಗಳ ಪ್ರಾಮುಖ್ಯತೆ, ಉಪಯೋಗಗಳು ಮತ್ತು ತಳಿ ಸಂರಕ್ಷಣೆಗೆ ಸಮುದಾಯ ನೀಡಿರುವ ಕೊಡುಗೆಗಳನ್ನು ಪ್ರಸ್ತುತಪಡಿಸುವುದು ಎಂದ ಅವರು, ಸಮುದಾಯದ ಸ್ಥಿತಿಗಗಳ ಬಗ್ಗೆ ಆತ್ಮಾವಲೋಕನ ಮತ್ತು ಭವಿಷ್ಯದ ಅವಕಾಶ ಉಪಯೋಗಿಸಿಕೊಳ್ಳುವ ಕುರಿತು ಬೆಳಕು ಚೆಲ್ಲಲಾಗುವುದು ಎಂದು ಹೇಳಿದರು.ಈ ಕಾಲಘಟ್ಟದಲ್ಲಿ ಜನಾಂಗದ ಅಭಿವೃದ್ಧಿ ಹೋರಾಟ ರೂಪಿಸಿದರೆ ಮಾತ್ರ ಭವಿಷ್ಯದಲ್ಲಿ ಮಕ್ಕಳಿಗೆ ನಾಂದಿಯಾಗಲು ಸಾಧ್ಯ. ಇದರಿಂದ ಕುಟುಂಬದ ನಿರ್ವಹಣೆ, ವಿದ್ಯಾಭ್ಯಾಸ ಹಾಗೂ ಸಾತ್ವಿಕ ಜೀವನ ನಡೆಸಲು ಕಾರಣಿಭೂತವಾಗಲಿದೆ. ಹೀಗಾಗಿ ಸಮಾವೇಶಕ್ಕೆ ಸರ್ವರು ಕುಟುಂಬ ಸಮೇತ ಆಗಮಿಸಿ ಹಳ್ಳಿಕಾರರ ಶಕ್ತಿ ಪ್ರದರ್ಶಿಸಲು ಮುಂದಾಗಿ ಎಂದು ತಿಳಿಸಿದರು.ಜಿಲ್ಲಾ ಹಳ್ಳಿಕಾರ ಯುವಕರ ಸಂಘದ ಅಧ್ಯಕ್ಷ ಕೋಟೆ ಸೋಮಣ್ಣ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟಾರೆ 2500 ಕ್ಕೂ ಹೆಚ್ಚು ಜನಾಂಗ ವಾಸಿಸು ತ್ತಿರುವ ಕಾರಣ ಸಂಘಕ್ಕೆ ಸಮುದಾಯ ಭವನದ ಅವಶ್ಯಕತೆ ಬಹಳಷ್ಟಿದೆ. ಹೀಗಾಗಿ ಬೀಕನಹಳ್ಳಿ ಸಮೀಪದ ₹1.70 ಲಕ್ಷ ವನ್ನು ಸರ್ಕಾರ ವ್ಯಯಿಸಿದ್ದು ಜಾಗವೊಂದು ಗುರುತಿಸಿ ಭವನ ನಿರ್ಮಿಸಲು ಸಹಕಾರ ನೀಡಬೇಕು ಎಂದರು.ರಾಜ್ಯದ ಸುಮಾರು 11 ಜಿಲ್ಲೆಗಳಲ್ಲಿ ಹಳ್ಳಿಕಾರರ ಜನಾಂಗವಿದೆ. ಆ ನಿಟ್ಟಿನಲ್ಲಿ ರಾಜ್ಯ ಸಂಘವು ಪ್ರತಿ ಜಿಲ್ಲೆಗೆ ತೆರಳಿ ಸಮಾವೇಶದ ಸಂಬಂಧ ಪೂರ್ಭಭಾವಿ ಸಭೆ ನಡೆಸಿ ಆಹ್ವಾನಿಸುತ್ತಿದೆ. ಅದರಂತೆ ಇದೀಗ ಚಿಕ್ಕಮಗಳೂರು ಆಗಮಿಸಿ ಜನಾಂಗವನ್ನು ಒಗ್ಗೂಡಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.ಸಭೆಯಲ್ಲಿ ರಾಜ್ಯ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಶ್ರೀನಿವಾಸಮೂರ್ತಿ, ನಿರ್ದೇಶಕರಾದ ಜಿ.ನಾಗರಾಜ್, ಎಚ್.ಎನ್.ಮಹಾಲಿಂಗಯ್ಯ, ಎಲ್.ವಸಂತ್‌ಕುಮಾರ್, ಸಿ.ಎಚ್.ಶ್ರೀನಿವಾಸ್, ಜಿಲ್ಲಾ ಸಂಘದ ಉಪಾಧ್ಯಕ್ಷ ಶುಭಾಸ್, ಪ್ರಧಾನ ಕಾರ್ಯದರ್ಶಿ ಶಿವಪ್ರಕಾಶ್, ಸಂಘಟನಾ ಕಾರ್ಯದರ್ಶಿ ಬಿ. ಎಸ್.ಬಸವರಾಜ್, ಖಜಾಂಚಿ ಜಿ.ವೆಂಕಟೇಶ್, ನಿರ್ದೇಶಕರಾದ ಸಿ.ಬಿ.ರಘು, ಸಿ.ಎನ್.ಸೋಮಶೇಖರ್, ಎಚ್.ಕೆ.ಸೋಮಶೇಖರ್, ಬ್ಯಾಟೇಗೌಡ, ಕೆ.ಪಿ.ನಾಗೇಶ್, ದ್ವಾರಕೇಶ್ ಉಪಸ್ಥಿತರಿದ್ದರು. 6 ಕೆಸಿಕೆಎಂ 2ರಾಜ್ಯ ಮಟ್ಟದ ಹಳ್ಳಿಕಾರರ ಸಮಾವೇಶದ ಹಿನ್ನಲೆಯಲ್ಲಿ ಚಿಕ್ಕಮಗಳೂರಿನ ಕೋಟೆ ಸಮೀಪ ನ್ಯೂ ಬ್ರೈಟ್ ಪ್ಯೂಚರ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ನಡೆದ ಪೂರ್ವಭಾವಿ ಸಭೆಯನ್ನು ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಎಂ. ನಾಗರಾಜ್ ಉದ್ಘಾಟಿಸಿ ಮಾತನಾಡಿದರು.