ಸಿದ್ದಾಪುರ: ತಾಲೂಕಿನ ಬೇಡ್ಕಣಿ ಗ್ರಾಮದಲ್ಲಿರುವ ರಾಜೀವ ಮೈದಾನವನ್ನು ನಿವೇಶನ ಹಂಚಿಕೆಗೆ ಬಳಸದೆ, ಕ್ರೀಡಾ ಚಟುವಟಿಕೆಗಳಿಗಾಗಿಯೇ ಉಳಿಸಿಕೊಡಬೇಕೆಂದು ಒತ್ತಾಯಿಸಿ ಗ್ರಾಮಸ್ಥರು ಹಾಗೂ ಸ್ಥಳೀಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್‌ಡಿಎಂಸಿ ವತಿಯಿಂದ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಗ್ರಾಮದ ನೂರಾರು ಶಾಲಾ ಮಕ್ಕಳಿಗೆ ಹಾಗೂ ಯುವಜನತೆಗೆ ಕ್ರೀಡೆ ಮತ್ತು ದೈಹಿಕ ಬೆಳವಣಿಗೆಗೆ ಇರುವ ಏಕೈಕ ಆಸರೆ ಇದಾಗಿದ್ದು, ಇದನ್ನು ನಿವೇಶನಗಳನ್ನಾಗಿ ಪರಿವರ್ತಿಸಿದರೆ ಮಕ್ಕಳ ಭವಿಷ್ಯಕ್ಕೆ ಕ್ರೀಡಾಂಗಣವೇ ಇಲ್ಲದಂತಾಗುತ್ತದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ. ವಸತಿ ರಹಿತರಿಗೆ ನಿವೇಶನ ನೀಡುವುದಕ್ಕೆ ತಮ್ಮ ಯಾವುದೇ ವಿರೋಧವಿಲ್ಲ. ಬದಲಾಗಿ ಈ ಯೋಜನೆಯನ್ನು ಸ್ವಾಗತಿಸುತ್ತೇವೆ, ಆದರೆ, ಅದಕ್ಕಾಗಿ ಪರ್ಯಾಯವಾಗಿ ಲಭ್ಯವಿರುವ ಸರ್ಕಾರಿ ಜಾಗ ಗುರುತಿಸಿ ನಿವೇಶನ ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿರುವ ಗ್ರಾಮಸ್ಥರು, ಪ್ರಸ್ತುತ ನಡೆಯುತ್ತಿರುವ ಜಿಪಿಎಸ್ ಪ್ರಕ್ರಿಯೆಯನ್ನು ತಕ್ಷಣವೇ ಸ್ಥಗಿತಗೊಳಿಸಿ ಮೈದಾನವನ್ನು ಉಳಿಸಿಕೊಡಬೇಕೆಂದು ತಹಸೀಲ್ದಾರ್ ಅವರನ್ನು ಕೋರಿದ್ದಾರೆ.
ಇದೇ ವಿಷಯವಾಗಿ ಶಿರಸಿ ಉಪವಿಭಾಗಾಧಿಕಾರಿಗಳಿಗೂ ಖುದ್ದಾಗಿ ಭೇಟಿಯಾಗಿ ಮನವಿ ಸಲ್ಲಿಸಿ ವಸ್ತುಸ್ಥಿತಿಯನ್ನು ಗ್ರಾಮಸ್ಥರು ವಿವರಿಸಿದ್ದಾರೆ. ಉಪವಿಭಾಗಾಧಿಕಾರಿಗಳು ಆಧುನಿಕ ಕಾಲಘಟ್ಟದಲ್ಲಿ ಮಕ್ಕಳಿಗೆ ಆಟದ ಮೈದಾನಗಳ ತೀವ್ರ ಕೊರತೆ ಎದುರಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಯಾವುದೇ ಕಾರಣಕ್ಕೂ ಈ ಜಾಗವನ್ನು ಕ್ರೀಡಾ ಚಟುವಟಿಕೆಗಳನ್ನು ಹೊರತುಪಡಿಸಿ ಅನ್ಯ ಉದ್ದೇಶಗಳಿಗೆ ಅಥವಾ ಯೋಜನೆಗಳಿಗೆ ಬಳಸಿಕೊಳ್ಳಬಾರದು ಎಂದು ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ಅಲ್ಲದೆ, ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಪೂರಕವಾಗಿ ಈ ಮೈದಾನವನ್ನು ಕೇವಲ ಕ್ರೀಡಾ ಹಾಗೂ ಶಾಲಾ ಚಟುವಟಿಕೆಗಳಿಗಷ್ಟೇ ಮೀಸಲಿಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ರವಾನಿಸಿದ್ದಾರೆ.