ಬಸ್ ನಿಲ್ಲದಿದ್ದರೆ ಹೆದ್ದಾರಿ ಬಂದ್: ಗ್ರಾಮಸ್ಥರ ಎಚ್ಚರಿಕೆ

KannadaprabhaNewsNetwork |  
Published : Sep 06, 2026, 02:45 AM IST
ವಿದ್ಯಾರ್ಥಿಗಳು ಶಾಸಕ ಸತೀಶ ಸೈಲ ಅವರಿಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಅಂಕೋಲಾದಿಂದ ಯಲ್ಲಾಪುರ ಮಾರ್ಗದಲ್ಲಿ ಸಂಚರಿಸುವ ಸಾರಿಗೆ ಬಸ್‌ಗಳಿಗೆ 18 ಕಡೆ ಅಧಿಕೃತ ನಿಲುಗಡೆಗೆ ಆದೇಶವಿದ್ದರೂ, ಚಾಲಕ- ನಿರ್ವಾಹಕರು ಬಸ್ ನಿಲ್ಲಿಸಲು ಅಸಡ್ಡೆ ತೋರುತ್ತಿದ್ದಾರೆ. ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಶಾಸಕ ಸತೀಶ ಸೈಲ ಅವರಿಗೆ ಮನವಿ ಸಲ್ಲಿಸಿದರು.

ಅಂಕೋಲಾ: ಅಂಕೋಲಾದಿಂದ ಯಲ್ಲಾಪುರ ಮಾರ್ಗದಲ್ಲಿ ಸಂಚರಿಸುವ ಸಾರಿಗೆ ಬಸ್‌ಗಳಿಗೆ 18 ಕಡೆ ಅಧಿಕೃತ ನಿಲುಗಡೆಗೆ ಆದೇಶವಿದ್ದರೂ, ಚಾಲಕ- ನಿರ್ವಾಹಕರು ಮಾತ್ರ ಬಸ್ ನಿಲ್ಲಿಸಲು ಅಸಡ್ಡೆ ತೋರುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳು ಹಾಗೂ ಗ್ರಾಮೀಣ ಭಾಗದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದು, ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಶಾಸಕ ಸತೀಶ ಸೈಲ ಅವರಿಗೆ ಮನವಿ ಸಲ್ಲಿಸಿದರು.

ಅಂಕೋಲಾ- ಯಲ್ಲಾಪುರ ಮಾರ್ಗದ ಮಧ್ಯೆ ಇರುವ ಗ್ರಾಮಗಳಿಂದ ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು, ಉದ್ಯೋಗಿಗಳು ಹಾಗೂ ಸಾರ್ವಜನಿಕರು ಸಾರಿಗೆ ಬಸ್‌ಗಳನ್ನೇ ಅವಲಂಬಿಸಿ ಸಂಚರಿಸುತ್ತಾರೆ. ಆದರೆ ನಿಗದಿತ ಸ್ಥಳಗಳಲ್ಲಿ ಬಸ್ಗಳು ನಿಲ್ಲಿಸದ ಕಾರಣ ಪ್ರಯಾಣಿಕರು ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ವಿದ್ಯಾರ್ಥಿಗಳಂತೂ ಶಾಲಾ- ಕಾಲೇಜುಗಳಿಗೆ ತೆರಳಲು ಪರದಾಡುವಂತಾಗಿದೆ.

ಈ ಕುರಿತು ಪತ್ರಿಕೆಯ ಮೂಲಕ ಶಿರಸಿ ವಿಭಾಗೀಯ ನಿಯಂತ್ರಣಾಧಿಕಾರಿಗಳ ಗಮನ ಸೆಳೆದ ಹಿನ್ನೆಲೆ, ಜು. 15ರಂದು ಅಂಕೋಲಾ- ಯಲ್ಲಾಪುರ ಮಾರ್ಗದ ಬಸ್‌ಗಳಿಗೆ ಬಾಳೆಗುಳಿ ಕ್ರಾಸ್, ಕಂಚಿನಮನೆ, ಅಡ್ಲೂರು, ಹೊನ್ನಳ್ಳಿ, ಹೆಬ್ಬುಳ, ಮೂಲೆಮನೆ, ಸಬಗುಳಿ, ಆಲದಕೋಣ, ಸುಂಕಸಾಳ, ಹೆಗ್ಗಾರ, ವಜ್ರಳ್ಳಿ ಕ್ರಾಸ್, ರಾಮನಗುಳಿ, ಕೊಡ್ಲಗದ್ದೆ ಕ್ರಾಸ್ ಸೇರಿದಂತೆ ವಿವಿಧೆಡೆ ಕಡ್ಡಾಯ ನಿಲುಗಡೆ ನೀಡುವಂತೆ ಆದೇಶ ಹೊರಡಿಸಲಾಗಿತ್ತು.

ಆದರೆ ಆದೇಶ ಹೊರಡಿಸಿದರೂ ಪರಿಸ್ಥಿತಿಯಲ್ಲಿ ಬದಲಾವಣೆಯಾಗಿಲ್ಲ ಎಂಬುದು ಗ್ರಾಮಸ್ಥರ ಆರೋಪ. ‘ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ’ ಎಂಬಂತಾಗಿದ್ದು, ಅಧಿಕೃತವಾಗಿ ನಿಲುಗಡೆಗೆ ಆದೇಶವಿದ್ದರೂ ಕೆಲವು ಬಸ್‌ಗಳ ಚಾಲಕ- ನಿರ್ವಾಹಕರು ಬಸ್ ನಿಲ್ಲಿಸದೆ ತೆರಳುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ಪರದಾಡುವಂತಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ನಿಗದಿತ ಸ್ಥಳಗಳಲ್ಲಿ ಬಸ್ ನಿಲುಗಡೆ ಮಾಡದೆ ಇದೇ ರೀತಿ ಮುಂದುವರಿದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಹೋರಾಟ ನಡೆಸಲಾಗುವುದು. ಅಗತ್ಯಬಿದ್ದರೆ ಹೆದ್ದಾರಿ ತಡೆದು ಪ್ರತಿಭಟನೆ ನಡೆಸುವುದಾಗಿಯೂ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಅಗಸೂರು ಗ್ರಾಪಂ ಮಾಜಿ ಉಪಾಧ್ಯಕ್ಷ ಯಶ್ವಂತ ಗೌಡ, ಮಾಜಿ ಸದಸ್ಯ ಆನಂದು ಗೌಡ, ಸಂದೀಪ ನಾಯ್ಕ, ಸುಂಕಸಾಳ, ಈಶ್ವರ ಗೌಡ, ಸಚೀನ ಗೌಡ, ಮನೋಜ್ ಗೌಡ, ದಿನೇಶ ಗೌಡ, ರಾಜೇಶ ಗೌಡ, ರಾಮಚಂದ್ರ ಗೌಡ, ಜಗು ಗೌಡ, ವಾಮನ ಗೌಡ, ಗೌರೀಶ ಗೌಡ, ನಾಗರಾಜ ಗೌಡ, ಸಂತೋಷ ಗೌಡ, ಗುರು ಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅ. 22ರ ವರೆಗೆ ಮತದಾರ ಚೀಟಿ ತಿದ್ದುಪಡಿಗೆ ಅವಕಾಶ
ಸಮಾಜಕ್ಕೆ ಮೌಲ್ಯಾಧಾರಿತ ಕಲೆಯ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಿದೆ: ಸ್ವರ್ಣವಲ್ಲೀ ಗಳು