ಹಿಂದೆ ಋಷಿ-ಮುನಿಗಳ ಜೀವನ ಚರಿತ್ರೆಗಳನ್ನು ಆಧರಿಸಿದ ಯಕ್ಷಗಾನ ಆಖ್ಯಾನಗಳು ಹೆಚ್ಚಿನ ಪ್ರಮಾಣದಲ್ಲಿ ಪ್ರದರ್ಶನಗೊಳ್ಳುತ್ತಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಇಂತಹ ಆಖ್ಯಾನಗಳ ಸಂಖ್ಯೆ ಕಡಿಮೆಯಾಗುತ್ತಿದೆ

ಶಿರಸಿ:

ತಪಸ್ಸು, ಯೋಗ ಹಾಗೂ ಋಷಿ-ಮುನಿಗಳ ಚರಿತ್ರೆಗಳು ಯಕ್ಷಗಾನದ ಆಖ್ಯಾನಗಳಲ್ಲಿ ಪ್ರಭಾವಿಯಾಗಿ ಮೂಡಿಬರಬೇಕು. ಇಂದಿನ ಸಮಾಜಕ್ಕೆ ಇಂತಹ ಮೌಲ್ಯಾಧಾರಿತ ಕಲೆಯ ಅಗತ್ಯ ಹಿಂದೆಂದಿಗಿಂತಲೂ ಹೆಚ್ಚಿದೆ ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.ಅವರು ತಾಲೂಕಿನ ಸೋಂದಾ ಸ್ವರ್ಣವಲ್ಲೀಯ ಸುಧರ್ಮಾ ಸಭಾಭವನದಲ್ಲಿ ಶನಿವಾರ ಯಕ್ಷ ಶಾಲ್ಮಲಾ ಸ್ವರ್ಣವಲ್ಲೀ ಹಾಗೂ ಸರ್ವಜ್ಞೇಂದ್ರ ಪ್ರತಿಷ್ಠಾನದ ಆಶ್ರಯದಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರವಾರ, ಕರ್ಣಾಟಕ ಬ್ಯಾಂಕ್ ಹಾಗೂ ಸಪ್ತಕ ಬೆಂಗಳೂರು ಸಹಕಾರದಲ್ಲಿ ಆಯೋಜಿಸಿದ್ದ 22ನೇ ವರ್ಷದ ಯಕ್ಷೋತ್ಸವದ ಸಭಾ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಹಿಂದೆ ಋಷಿ-ಮುನಿಗಳ ಜೀವನ ಚರಿತ್ರೆಗಳನ್ನು ಆಧರಿಸಿದ ಯಕ್ಷಗಾನ ಆಖ್ಯಾನಗಳು ಹೆಚ್ಚಿನ ಪ್ರಮಾಣದಲ್ಲಿ ಪ್ರದರ್ಶನಗೊಳ್ಳುತ್ತಿದ್ದವು. ಆದರೆ ಇತ್ತೀಚಿನ ದಿನಗಳಲ್ಲಿ ಇಂತಹ ಆಖ್ಯಾನಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಪುನಃ ಇಂತಹ ಮೌಲ್ಯಯುತ ಕಥಾನಕಗಳು ಹೆಚ್ಚು ಪ್ರದರ್ಶನಗೊಳ್ಳುವ ಅಗತ್ಯವಿದೆ ಎಂದರು.ಯಕ್ಷಗಾನ ಉಳಿದರೆ ಸಮಾಜವನ್ನು ಉತ್ತಮ ದಾರಿಗೆ ಕೊಂಡೊಯ್ಯಲು ಸಾಧ್ಯ. ಉತ್ತಮ ಪ್ರೇಕ್ಷಕ, ಸ್ಪರ್ಧಾರ್ಥಿ, ವಿದ್ಯಾರ್ಥಿ ಹಾಗೂ ಕಲಾವಿದರನ್ನು ಯಕ್ಷಗಾನದ ಮೂಲಕ ರೂಪಿಸಬೇಕಾಗಿದೆ. ಇಂದು ಸಹೃದಯ ಪ್ರೇಕ್ಷಕರಾಗಿ ಕಾರ್ಯಕ್ರಮ ವೀಕ್ಷಿಸುವವರು ಮುಂದಿನ ದಿನಗಳಲ್ಲಿ ಸ್ಪರ್ಧಾರ್ಥಿಗಳಾಗಿ, ಪಾತ್ರಧಾರಿಗಳಾಗಿ ಬೆಳೆಯುತ್ತಾರೆ. ಉತ್ತಮ ಕಲಾವಿದರನ್ನು ರೂಪಿಸುವ ಮೂಲಕ ಯಕ್ಷಗಾನಕ್ಕೆ ಬಲ ತುಂಬುವ ಕಾರ್ಯವನ್ನು ಯಕ್ಷ ಶಾಲ್ಮಲಾ ಯಕ್ಷೋತ್ಸವದ ಮೂಲಕ ನಡೆಸಲಾಗುತ್ತಿದೆ ಎಂದರು.ಯಕ್ಷಗಾನ ಕ್ಷೇತ್ರಕ್ಕೆ ಬಲ ತುಂಬುವ ಪ್ರಯತ್ನವನ್ನು ಹೊಸ್ತೋಟ ಮಂಜುನಾಥ ಭಾಗವತ ಹಾಗೂ ಎಂ.ಎ. ಹೆಗಡೆ ಅವರು ನಿರಂತರವಾಗಿ ನಡೆಸಿಕೊಂಡು ಬಂದಿದ್ದರು. ಅವರ ಸೇವೆಯನ್ನು ಸ್ಮರಿಸುವ ಸಲುವಾಗಿ ಅವರ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದರು.ಯುವಾ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಸಾಮಾಜಿಕ ಜಾಲತಾಣಗಳ ಅಬ್ಬರದ ನಡುವೆ ಚಿಕ್ಕ ಹಳ್ಳಿಯ ಮಕ್ಕಳು ಯಕ್ಷಗಾನ ಹಾಗೂ ತಾಳಮದ್ದಲೆಯಂತಹ ಸಾಂಸ್ಕೃತಿಕ ಕಲಾ ಪ್ರಕಾರಗಳನ್ನು ಪ್ರದರ್ಶಿಸುತ್ತಿರುವುದು ಸಂತೋಷದ ಸಂಗತಿ. ತಾಳಮದ್ದಲೆ, ಯಕ್ಷಗಾನ ಹಾಗೂ ಭಗವದ್ಗೀತೆ ಮೂಲಕ ಭಾರತೀಯ ಸಂಸ್ಕೃತಿ, ಆಚಾರ-ವಿಚಾರ ಹಾಗೂ ಸಂಸ್ಕಾರಗಳನ್ನು ಉಳಿಸಬೇಕಾಗಿದೆ. ಭಾರತೀಯ ಸಂಸ್ಕೃತಿಯ ಮೂಲ ಬೇರು ಧರ್ಮದಲ್ಲಿದ್ದು, ಅದು ವಿಶಾಲವಾದ ಅಡಿಪಾಯವನ್ನು ನಿರ್ಮಿಸಿದೆ. ಭಾರತೀಯರು ಸಹಜವಾಗಿಯೇ ಸಹಿಷ್ಣು ಸ್ವಭಾವದವರು ಎಂದರು.ಹಿರಿಯ ಯಕ್ಷಗಾನ ಕಲಾವಿದ ತಿಮ್ಮಪ್ಪ ಹೆಗಡೆ ಶಿರಳಗಿ ಅವರಿಗೆ ಈ ಸಂದರ್ಭದಲ್ಲಿ ದಿ. ಮಂಜುನಾಥ ಭಾಗವತ ಹೊಸ್ತೋಟ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ತಿಮ್ಮಪ್ಪ ಹೆಗಡೆ ಮಾತನಾಡಿ, ಪ್ರಶಸ್ತಿ ಮತ್ತು ಸನ್ಮಾನ ದೊರೆತಾಗ ಅದಕ್ಕೆ ತಾನು ಎಷ್ಟು ಅರ್ಹ ಎಂಬ ಆಲೋಚನೆ ಮೂಡುತ್ತದೆ. ಹೊಸ್ತೋಟ ಮಂಜುನಾಥ ಭಾಗವತರು ತಮ್ಮ ಬದುಕನ್ನೇ ಯಕ್ಷಗಾನಕ್ಕೆ ಮೀಸಲಿಟ್ಟಿದ್ದರು. ಅಂತಹ ಮಹನೀಯರ ಹೆಸರಿನಲ್ಲಿ ಸನ್ಮಾನ ಸ್ವೀಕರಿಸಿರುವುದು ಜೀವನದಲ್ಲಿ ಧನ್ಯತೆ ತಂದಿದೆ ಎಂದರು.ಯಲ್ಲಾಪುರ ಟಿ.ಎಂ.ಎಸ್. ಅಧ್ಯಕ್ಷ ಎನ್.ಕೆ. ಭಟ್ಟ ಅಗ್ಗಾಶಿಕುಂಬ್ರಿ ಮಾತನಾಡಿ, ಪಾಶ್ಚಾತ್ಯ ಸಂಸ್ಕೃತಿಯ ಪ್ರವಾಹವು ಭಾರತೀಯ ಸಂಸ್ಕೃತಿ ಮತ್ತು ಸಂಸ್ಕಾರದ ಮೇಲೆ ಪರಿಣಾಮ ಬೀರುತ್ತಿದೆ. ನಮ್ಮ ಸಂಸ್ಕೃತಿ ಹಾಗೂ ಸಂಸ್ಕಾರವನ್ನು ರಕ್ಷಿಸುವ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದರು.

ಯಕ್ಷ ಶಾಲ್ಮಲಾ ಕಾರ್ಯಾಧ್ಯಕ್ಷ ಆರ್.ಎಸ್. ಹೆಗಡೆ ಭೈರುಂಬೆ ಸ್ವಾಗತಿಸಿದರು. ಕಾರ್ಯದರ್ಶಿ ನಾಗರಾಜ ಜೋಶಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರವೀಣ ಹೆಗಡೆ ಮಣ್ಮನೆ ನಿರೂಪಿಸಿದರು. ರಾಜರಾಜೇಶ್ವರಿ ಸಂಸ್ಕೃತ ಪಾಠಶಾಲೆಯ ವಿದ್ಯಾರ್ಥಿಗಳು ವೇದಘೋಷ ಹಾಡಿದರು. ಶ್ರೀನಿವಾಸ ಮತ್ತಿಘಟ್ಟ ಶ್ರೀಗಳಿಗೆ ಫಲ ಸಮರ್ಪಿಸಿದರು. ಮಾಬ್ಲೇಶ್ವರ ಭಟ್ಟ ಕಿರಕುಂಬತ್ತಿ ಸನ್ಮಾನ ಪತ್ರ ವಾಚಿಸಿದರು.

ಸಮಾಜ ಭೋಗೈಕ್ಯದ ಹಿಂದೆ ಓಡುತ್ತಿದೆ. ಇದಕ್ಕೆ ಯುವ ಸಮಾಜ ಹೆಚ್ಚು ಒಳಗಾಗುತ್ತಿದೆ. ಇಂತಹ ಸ್ಥಿತಿಯಲ್ಲಿ ಪ್ರಭಾವಶಾಲಿ ಕಲೆ ಅವಶ್ಯವಿದೆ. ಅದಕ್ಕೆ ಯಕ್ಷಗಾನ ಸೂಕ್ತ.

-ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ