ಅಶ್ವಥ್ ಎಚ್.ಕೆ.ಹಳುವಾಡಿ
ಕನ್ನಡಪ್ರಭ ವಾರ್ತೆ ಮಂಡ್ಯಮೇಲುಕೋಟೆ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ತಾಲೂಕಿನ ಗಾಣದಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎರಡು ವರ್ಷ ಇದ್ದ ಮಕ್ಕಳ ಸಂಖ್ಯೆ ೮೦. ಈಗ ದಾಖಲಾಗಿರುವ ಮಕ್ಕಳ ಸಂಖ್ಯೆ ೨೫. ಶಾಲೆಯ ಕೊಠಡಿಗಳ ಸ್ಥಿತಿ ನೋಡಿ ಬೆಚ್ಚಿದ ಊರಿನ ಜನರು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಟೀಸಿ ಪಡೆದುಕೊಂಡು ಬೇರೆ ಶಾಲೆಗಳಿಗೆ ದಾಖಲಿಸಿದ್ದಾರೆ.
ಶಾಲೆಯ ಕೊಠಡಿಗಳನ್ನು ದುರಸ್ತಿ ಮಾಡಿಸಿಕೊಡುವಂತೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರನ್ನು ಕೋರಲಾಯಿತು. ಜಿಲ್ಲಾ ಪಂಚಾಯ್ತಿ, ಶಾಲಾ ಶಿಕ್ಷಣ ಅಧಿಕಾರಿಗಳನ್ನೂ ಕೋರಲಾಯಿತು. ಯಾರೂ ಸಹ ಕೊಠಡಿಗಳನ್ನು ದುರಸ್ತಿಪಡಿಸುವ ಕನಿಷ್ಠ ಭರವಸೆಯನ್ನೂ ನೀಡಲಿಲ್ಲ. ಹೀಗಾಗಿ ನಾಲ್ಕು ಕೊಠಡಿಗಳಿಗೆ ಬೀಗ ಹಾಕಲಾಗಿದೆ. ಉಳಿದಿರುವ ಎರಡು ಕೊಠಡಿಗಳಲ್ಲಿ ಮಕ್ಕಳಿಗೆ ಪಠ್ಯ ಬೋಧನೆ ಮಾಡಲಾಗುತ್ತಿದೆ. ಒಂದು ಮುಖ್ಯ ಶಿಕ್ಷಕರ ಕೊಠಡಿಯಾಗಿದೆ.ಈಗಲೂ ಶಾಲೆಯನ್ನು ದುರಸ್ತಿಪಡಿಸದಿದ್ದರೆ ಮುಂದಿನ ವರ್ಷ ಈ ಶಾಲೆಗೆ ದಾಖಲಾಗುವ ಮಕ್ಕಳ ಸಂಖ್ಯೆ ಮತ್ತಷ್ಟು ಕುಸಿದರೂ ಅಚ್ಚರಿಪಡಬೇಕಿಲ್ಲ. ಕೊನೆಗೆ ಶಾಲೆಯನ್ನೇ ಮುಚ್ಚುವ ಪರಿಸ್ಥಿತಿ ಎದುರಾಗುವುದು ಹೆಚ್ಚು ದೂರವೇನಿಲ್ಲ.
ಗಾಣದಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೧ ರಿಂದ ೭ನೇ ತರಗತಿಯವರೆಗೆ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಶಾಲೆಯಲ್ಲಿ ಮೂವರು ಶಿಕ್ಷಕರಿದ್ದಾರೆ. ಒಬ್ಬರನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಲಾಗಿದೆ.ಈ ಶಾಲೆಯ ಕೊಠಡಿಗಳ ಮೇಲ್ಛಾವಣಿ ಕುಸಿದುಬೀಳುತ್ತಿದೆ. ಹೆಂಚುಗಳು ಒಡೆದುಹೋಗಿವೆ. ಮತ್ತಷ್ಟು ಬೀಳುವ ಸ್ಥಿತಿಯಲ್ಲಿವೆ. ಮಳೆ ಬಂದರೆ ಕೊಠಡಿಗಳೆಲ್ಲಾ ಸೋರುತ್ತಿವೆ. ಮಳೆಯ ನೀರಿಳಿದು ಶಾಲೆಯ ಗೋಡೆಗಳು ಶಿಥಿಲಗೊಂಡಿವೆ.
ದಾನಿಗಳು ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ಕಂಪ್ಯೂಟರ್‌ಗಳನ್ನು ದೊರಕಿಸಿಕೊಟ್ಟಿದ್ದರು. ಆ ಕೊಠಡಿಗೆ ಹೊಸದಾಗಿ ಸ್ವಿಚ್‌ಬೋರ್ಡ್‌ಗಳನ್ನೂ ಅಳವಡಿಸಲಾಗಿತ್ತು. ಈಗ ಆ ಕೊಠಡಿ ಅನುಪಯುಕ್ತ ವಸ್ತುಗಳಿಂದ ತುಂಬಿಕೊಂಡಿದೆ. ಕಂಪ್ಯೂಟರ್‌ಗಳು ಬಳಕೆಯಾಗದೆ ಹಾಳಾಗಿವೆ. ಈ ಶಾಲೆಯ ಸ್ಥಿತಿಯನ್ನು ಕೇಳೋರೇ ದಿಕ್ಕಿಲ್ಲದಂತಾಗಿದೆ.ಶಾಲೆಯ ಕೊಠಡಿಗಳನ್ನು ಸುಸ್ಥಿತಿಗೆ ತರುವಂತೆ ಊರಿನ ರೈತಸಂಘದ ಕಾರ್ಯಕರ್ತರಾಗಿರುವ ಜಯರಾಂ ಅವರು ಶಾಸಕ ದರ್ಶನ್ ಪುಟ್ಟಣ್ಣಯ್ಯನವರ ಗಮನಕ್ಕೆ ತಂದಿದ್ದಾರೆ. ಎರಡು-ಮೂರು ವರ್ಷಗಳಿಂದ ಮನವಿ ಸಲ್ಲಿಸುತ್ತಾ ಬಂದಿದ್ದರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಶಾಲಾ ಕೊಠಡಿಗಳನ್ನು ಸುಸ್ಥಿತಿಗೆ ತರುವುದರಿಂದ ನಮ್ಮೂರಿನ ಶಾಲೆಗೆ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುವರು ಎಂದು ಜಯರಾಂ ಕನ್ನಡಪ್ರಭ ಪತ್ರಿಕೆಗೆ ತಿಳಿಸಿದರು.
ದುಸ್ಥಿತಿಯಲ್ಲಿರುವ ಸರ್ಕಾರಿ ಶಾಲಾ ಕೊಠಡಿಗಳನ್ನು ಸಿಎಸ್‌ಆರ್ ಫಂಡ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿರುವ ಖನಿಜ ನಿಧಿಯಿಂದ ಸುಸ್ಥಿತಿಗೆ ತರುವುದಕ್ಕೆ ಅವಕಾಶಗಳಿವೆ. ಆದರೂ, ಜನಪ್ರತಿನಿಧಿಗಳು ಹಾಗೂ ಇಲಾಖಾ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಪೋಷಕರು ಮತ್ತು ಮಕ್ಕಳು ಸಂಕಷ್ಟ ಎದುರಿಸುವಂತಾಗಿದೆ.ಮಕ್ಕಳನ್ನು ಶಾಲೆಗೆ ದಾಖಲು ಮಾಡಲು ಬರುವವರು ಶಾಲೆಯ ಕೊಠಡಿಗಳ ಸ್ಥಿತಿಯನ್ನು ಕಂಡು ಬೆಚ್ಚಿಬೀಳುತ್ತಿದ್ದಾರೆ. ಕಾಂಕ್ರೀಟ್ ಮೇಲ್ಛಾವಣಿ, ಹೆಂಚುಗಳು ಬಿದ್ದರೆ ಮಕ್ಕಳ ಗತಿ ಏನು ಎಂದು ಆಲೋಚಿಸಿ ಮಕ್ಕಳನ್ನು ದಾಖಲಿಸುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಈಗಾಗಲೇ ಶಾಲೆಯಲ್ಲಿ ಕಲಿಯುತ್ತಿದ್ದ ಮಕ್ಕಳನ್ನು ತಂದೆ-ತಾಯಿಗಳು ಟೀಸಿ ತೆಗೆದುಕೊಂಡು ಬೇರೆ ಶಾಲೆಗಳಿಗೆ ದಾಖಲಿಸಿದ್ದಾರೆ. ಶಿಕ್ಷಕರು ಪೋಷಕರ ಮನವೊಲಿಸುವ ಪ್ರಯತ್ನಿಸಿದರೂ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಕಳೆದ ನಾಲ್ಕು ವರ್ಷಗಳಿಂದಲೂ ಕೊಠಡಿಗಳನ್ನು ದುರಸ್ತಿಪಡಿಸಲಾಗುತ್ತಿಲ್ಲವಾದ್ದರಿಂದ ಪೋಷಕರೂ ಬೇಸತ್ತು ಮಕ್ಕಳನ್ನು ಬೇರೆ ಶಾಲೆಗಳ ಕಡೆ ಮುಖ ಮಾಡುವಂತೆ ಮಾಡಿದ್ದಾರೆ.
ಅಡುಗೆ ಮನೆಗೆಂದು ಕಟ್ಟಿದ ಕೊಠಡಿ ಈಗ ಮುಖ್ಯ ಶಿಕ್ಷಕರ ಕೊಠಡಿಯಾಗಿದೆ. ಶಾಲೆಯ ಹಿಂಭಾಗದಲ್ಲಿ ಪ್ರತ್ಯೇಕವಾಗಿ ಅಡುಗೆ ಕೋಣೆಯನ್ನು ನಿರ್ಮಿಸಲಾಗಿದೆ. ದಾನಿಗಳು ಶಾಲೆಗೆ ಕಟ್ಟಿಸಿಕೊಟ್ಟಿದ್ದ ಕೊಠಡಿಯಲ್ಲಿ ಕಾನ್ವೆಂಟ್ ನಡೆಸಲಾಗುತ್ತಿದೆ. ಅದನ್ನು ಶಾಲಾ ಮಕ್ಕಳಿಗೆ ಬಿಟ್ಟುಕೊಡಲು ಅವರು ಒಪ್ಪುತ್ತಿಲ್ಲ. ಹೀಗಾಗಿ ಗಾಣದಾಳು ಸರ್ಕಾರಿ ಶಾಲೆಯ ಕೊಠಡಿಗಳನ್ನು ಈಗಲಾದರೂ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹಾಗೂ ಸಂಬಂಧಿಸಿದ ಅಧಿಕಾರಿಗಳು ದುರಸ್ತಿಪಡಿಸುವುದಕ್ಕೆ ಆಸಕ್ತಿ ತೋರಬೇಕಿದೆ.ನನ್ನ ಕ್ಷೇತ್ರದ ಸರ್ಕಾರಿ ಶಾಲೆಗಳ ಸ್ಥಿತಿಯನ್ನು ಉತ್ತಮಪಡಿಸುವ ಕೆಲಸ ಮಾಡುತ್ತಿದ್ದೇನೆ. ಅದೇ ಮಾದರಿಯಲ್ಲಿ ಗಾಣದಾಳು ಸರ್ಕಾರಿ ಶಾಲೆಯ ಕೊಠಡಿಗಳನ್ನು ದುರಸ್ತಿಪಡಿಸುವುದನ್ನೂ ಆದ್ಯತೆಯಾಗಿ ತೆಗೆದುಕೊಳ್ಳುವೆ. ಈ ವಿಷಯ ನನ್ನ ಗಮನಕ್ಕೆ ಅಷ್ಟಾಗಿ ಬಂದಿರಲಿಲ್ಲ. ಸಿಎಸ್‌ಆರ್ ಅನುದಾನ ಅಥವಾ ಖನಿಜ ನಿಧಿಯಿಂದ ಶಾಲಾ ಕೊಠಡಿಗಳನ್ನು ದುರಸ್ತಿಪಡಿಸುವ ಕೆಲಸ ಮಾಡುತ್ತೇನೆ.- ದರ್ಶನ್ ಪುಟ್ಟಣ್ಣಯ್ಯ, ಶಾಸಕರು, ಮೇಲುಕೋಟೆ ಕ್ಷೇತ್ರನಾಲ್ಕು ವರ್ಷಗಳಿಂದ ಕೊಠಡಿಗಳನ್ನು ದುರಸ್ತಿಪಡಿಸಿಕೊಡುವಂತೆ ಎಲ್ಲರಿಗೂ ಮನವಿ ಮಾಡುತ್ತಲೇ ಬಂದಿದ್ದೇನೆ. ಯಾರೊಬ್ಬರೂ ಇದಕ್ಕೆ ಸ್ಪಂದಿಸುತ್ತಿಲ್ಲ. ಶಾಸಕರಿಗೂ ಈ ಕುರಿತು ಹಲವು ಬಾರಿ ಮನವಿ ಕೊಟ್ಟಿದ್ದರೂ ಪ್ರಯೋಜನವಾಗಿಲ್ಲ. ಕೊಠಡಿಗಳು ಬೀಳುವ ಸ್ಥಿತಿಯಲ್ಲಿರುವುದರಿಂದ ಪೋಷಕರು ಮಕ್ಕಳನ್ನು ಶಾಲೆಗೆ ದಾಖಲಿಸುವುದಕ್ಕೆ ಹೆದರುತ್ತಿದ್ದಾರೆ. ಕಂಪ್ಯೂಟರ್ ಕೊಠಡಿ ಸಂಪೂರ್ಣ ಹಾಳಾಗಿದೆ. ಈಗಲಾದರೂ ಶಾಲಾ ಕೊಠಡಿಗಳ ದುರಸ್ತಿ ಮಾಡಿಕೊಡಲು ಮುಂದಾಗಲಿ.
- ಜಯರಾಂ, ರೈತಸಂಘದ ಕಾರ್ಯಕರ್ತ, ಗಾಣದಾಳು