ಹಳ್ಳಿಗಳು ನಮ್ಮ ಸಂಸ್ಕೃತಿ ಜೀವನಾಡಿಗಳು

KannadaprabhaNewsNetwork |  
Published : Apr 23, 2026, 01:30 AM IST
್ಿ | Kannada Prabha

ಸಾರಾಂಶ

ನಮ್ಮ ಹಳ್ಳಿಗಳು ಕೇವಲ ವಾಸಸ್ಥಾನಗಳಲ್ಲ, ಅವು ನಮ್ಮ ಸಂಸ್ಕೃತಿಯ ಜೀವನಾಡಿಗಳು ಎಂದು ತುಮಕೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವರಾದ ಪ್ರೊ. ಮೋಹನ್ ಎಚ್. ಎಸ್. ಹೇಳಿದರು.

ಕನ್ನಡಪ್ರಭ ವಾರ್ತೆ ತುಮಕೂರುನಮ್ಮ ಹಳ್ಳಿಗಳು ಕೇವಲ ವಾಸಸ್ಥಾನಗಳಲ್ಲ, ಅವು ನಮ್ಮ ಸಂಸ್ಕೃತಿಯ ಜೀವನಾಡಿಗಳು ಎಂದು ತುಮಕೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವರಾದ ಪ್ರೊ. ಮೋಹನ್ ಎಚ್. ಎಸ್. ಹೇಳಿದರು. ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಹಾಗೂ ಬೆಂಗಳೂರಿನ ಸ್ವಗ್ರಾಮ್ ಫೌಂಡೇಶನ್ ಸಹಯೋಗದೊಂದಿಗೆ ಬುಧವಾರದಂದು ಆಯೋಜಿಸಲಾಗಿದ್ದ ಮಾಧ್ಯಮದ ನಡಿಗೆ ಹಳ್ಳಿ ಕಡೆಗೆ, ಸ್ಥಳೀಯ ಇತಿಹಾಸದ ಡಿಜಿಟಲ್ ದಾಖಲೀಕರಣ ಎಂಬ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಆಧುನಿಕತೆಯ ಅಬ್ಬರದಲ್ಲಿ ಮರೆಯಾಗುತ್ತಿರುವ ಗ್ರಾಮೀಣ ಕಲೆ, ಹಬ್ಬ-ಹರಿದಿನ ಮತ್ತು ಆಚಾರಗಳನ್ನು ಮರುಸ್ಥಾಪಿಸುವುದು ಅಗತ್ಯ. ಹಳ್ಳಿಗಳ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಿ ಅಭಿವೃದ್ಧಿಪಡಿಸುವುದು ಮುಖ್ಯ. ಯುವ ಪೀಳಿಗೆಯು ತಮ್ಮ ಬೇರುಗಳನ್ನು ಮರೆಯದೆ, ಹಳ್ಳಿಗಳ ಏಳಿಗೆಗಾಗಿ ಶ್ರಮಿಸಬೇಕು ಎಂದರು. ನೈಜ ಭಾರತವು ಹಳ್ಳಿಗಳಲ್ಲಿ ವಾಸಿಸುತ್ತದೆ. ನಮ್ಮ ಪೂರ್ವಜರು ಹಾಕಿಕೊಟ್ಟ ಸಂಸ್ಕಾರದ ತಳಹದಿಯ ಮೇಲೆ ಸುಸ್ಥಿರ ಗ್ರಾಮಗಳನ್ನು ನಿರ್ಮಿಸುವುದು ಇಂದಿನ ಅಗತ್ಯ. ನಮ್ಮ ಹಳ್ಳಿಗಳು ಆಧುನಿಕ ಸೌಲಭ್ಯಗಳನ್ನು ಹೊಂದಿರಲಿ, ಆದರೆ ಅಲ್ಲಿನ ಜನರ ಮನಸ್ಸು ಮತ್ತು ಸಂಸ್ಕಾರ ಆಚಾರ ವಿಚಾರಗಳು ಮಾತ್ರ ಎಂದಿಗೂ ನಮ್ಮ ಸಂಪ್ರದಾಯದ ಬೇರುಗಳಲ್ಲೇ ಇರಲಿ ಎಂದರು. ಕಲಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ ದಾಕ್ಷಾಯಣಿ ಅವರು ಮಾತನಾಡಿ ಪತ್ರಿಕೋದ್ಯಮ ಎಂಬುದು ಸಮಾಜಕ್ಕೆ ಅತ್ಯಂತ ಹತ್ತಿರವಿರುವ ಕ್ಷೇತ್ರ. ಇದು ಜನಸಾಮಾನ್ಯರ ಧ್ವನಿಯಾಗಿ ಕೆಲಸ ಮಾಡುತ್ತದೆ. ಪತ್ರಕರ್ತರು ಕೇವಲ ಮೇಲ್ನೋಟದ ಸುದ್ದಿಗಳಿಗಷ್ಟೇ ಸೀಮಿತವಾಗಬಾರದು. ಕಠಿಣ ಅಧ್ಯಯನ ಮತ್ತು ಆಳವಾದ ಸಂಶೋಧನೆಯ ಮೂಲಕ ಮರೆಯಾಗಿರುವ ಸತ್ಯಗಳನ್ನು ಸಮಾಜದ ಮುಂದೆ ತರಬೇಕು. ಸತ್ಯಾಸತ್ಯತೆಯನ್ನು ಪರಿಶೀಲಿಸಿ, ಜನರಿಗೆ ನಿಖರವಾದ ಮಾಹಿತಿ ನೀಡುವುದು ಪತ್ರಿಕೋದ್ಯಮದ ಮೂಲ ಉದ್ದೇಶವಾಗಬೇಕು ಎಂದರು.

ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ. ಸಿಬಂತಿ ಪದ್ಮನಾಭ ಮಾತನಾಡಿ, ದೇಶದ ನೈಜ ಸ್ವಂತಿಕೆ ಅಡಗಿರುವುದು ನಮ್ಮ ಹಳ್ಳಿಗಳಲ್ಲಿ. ಇಂದಿನ ಆಧುನಿಕ ಯುಗದಲ್ಲಿ ನಮ್ಮ ಆಚರಣೆಗಳು ಮತ್ತು ಹಬ್ಬ ಹರಿದಿನಗಳು ಕಣ್ಮರೆಯಾಗುತ್ತಿರುವ ಈ ಸಂದರ್ಭದಲ್ಲಿ, ಅವುಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು. ಇಂತಹ ಕಾರ್ಯಾಗಾರಗಳು ವಿಶೇಷವಾಗಿ ಪತ್ರಿಕೋದ್ಯಮ ವಿದ್ಯಾರ್ಥಿಗಳಲ್ಲಿ ವೃತ್ತಿಪರ ಕೌಶಲ್ಯಗಳನ್ನು ವೃದ್ಧಿಸಲು ಸಹಕಾರಿಯಾಗುತ್ತವೆ. ಹಳ್ಳಿಗಳ ಬದುಕು ಮತ್ತು ಸಂಸ್ಕೃತಿಯನ್ನು ವರದಿ ಮಾಡುವ ಮೂಲಕ ವಿದ್ಯಾರ್ಥಿಗಳು ಹಳ್ಳಿಗಳ ಕುರಿತು ಕಾಳಜಿ ಬೆಳೆಸಿಕೊಳ್ಳಲು ಇಂದಿನ ಕಾರ್ಯಕ್ರಮ ಸಹಕಾರಿಯಾಗಲಿದೆ ಎಂದರು.ಸ್ವಗ್ರಾಮ್ ಫೌಂಡೇಶನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಎಚ್. ಚಿತ್ರಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿ ಪ್ರತಿಷ್ಠಾನವು ಭಾರತದ ಗ್ರಾಮೀಣ ಪ್ರದೇಶಗಳಲ್ಲಿನ ವೈಶಿಷ್ಟ್ಯಗಳನ್ನು ಡಿಜಿಟಲೀಕರಣದ ಮೂಲಕ ದಾಖಲಿಸಬಹುದು ಎಂದರು.ಮುಖ್ಯ ಕಥನಕಾರರಾದ ಪೂರ್ಣಿಮಾ ಹೆಗಡೆ, ಮುಖ್ಯ ವಿಸ್ತರಣಾಧಿಕಾರಿಗಳಾದ ಸೋಮಶೇಖರ್ ತೆಂಕಿಲ ನುಡಿಚಿತ್ರ ಬರವಣಿಗೆ ಹಾಗೂ ಸಾಕ್ಷ್ಯಚಿತ್ರ ನಿರ್ಮಾಣ ಕಾರ್ಯಾಗಾರವನ್ನು ನಡೆಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳಿಗೆ ಆಟೋಟದ ಜೊತೆ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ: ಕೆ.ಎಸ್.ಆನಂದ್‌
ಹಳೆಯ ನೆನಪು ಮರು ಕಳಿಸಿದ ಸ್ನೇಹ ಸಮ್ಮಿಲನ: ಕೆ.ಎಸ್.ಮನೋಹರ್