ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಗಾಂಧೀಜಿ ಕಂಡ ಕನಸು ನನಸಾಗಬೇಕಾದರೆ ಗ್ರಾಮಗಳು ಉದ್ಧಾರವಾಗಬೇಕು ಎಂದು ಸುತ್ತೂರು ಮಠಾಧೀಶ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು. ತಾಲೂಕಿನ ಬೆರಟಹಳ್ಳಿ ಗ್ರಾಮದಲ್ಲಿ ಮಾರಮ್ಮನ ದೇವಾಲಯ ಪ್ರಾರಂಭೋತ್ಸವ ಹಾಗೂ ಪ್ರತಿಷ್ಠಾಪನೆ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ಧಾರ್ಮಿಕ ಸಭೆ ಸಾನ್ನಿಧ್ಯ ವಹಿಸಿ ಮಾತನಾಡಿದರು. ಗ್ರಾಮಗಳಲ್ಲಿ ಕೃಷಿ ಸೇರಿದಂತೆ ಇನ್ನಿತರ ಕಾಯಕ ಚಟುವಟಿಕೆಗಳು ಸಮರ್ಪಕವಾಗಿ ನಡೆದರೆ ಅಭಿವೃದ್ಧಿ ಆಗುತ್ತದೆ ಅಲ್ಲದೆ ದೇಶವೂ ಅಭಿವೃದ್ಧಿ ಕಾಣುತ್ತದೆ. ಹಳ್ಳಿಯ ಜನರು ಪಟ್ಟಣ ಪ್ರದೇಶಗಳಿಗೆ ವಲಸೆ ಹೋಗುವುದನ್ನು ಬಿಟ್ಟು, ಅಲ್ಲಿನ ಜನರೇ ಬದುಕಲು ಬೇಕಾದ ವಾತಾವರಣ ಹಳ್ಳಿಗಳಲ್ಲಿ ಇದೆ ಎಂದು ಇತ್ತ ಬರುವಂತೆ ಮಾಡಬೇಕು ಎಂದರು.
ವಿಜ್ಞಾನ ತಂತ್ರಜ್ಞಾನವನ್ನು ಬಳಸಿಕೊಂಡು ಅನೇಕ ವಸ್ತುಗಳನ್ನು ತಯಾರಿಸಿರಬಹುದು. ಆದರೆ ಅವುಗಳನ್ನು ಆಹಾರವಾಗಿ ಸೇವಿಸಲು ಸಾಧ್ಯವಿಲ್ಲ. ರೈತ ಭೂಮಿಯಲ್ಲಿ ಉತ್ತು ಬಿತ್ತು ಬೆಳೆದ ಪದಾರ್ಥಗಳನ್ನೇ ಆಹಾರವಾಗಿ ಬಳಸಬೇಕು. ಎಲ್ಲರೂ ರೈತರ ಪರವಾಗಿ ಇರಬೇಕು ಎಂದರು. ಹಳ್ಳಿಗಳಲ್ಲಿ ಧರ್ಮ ಜಾಗೃತಿ ಮೂಡಬೇಕು. ಲೌಕಿಕ, ಪಾರಮಾರ್ಥಿಕ ವಿಷಯಗಳು ಅರಿತುಕೊಳ್ಳಬೇಕು. ಸರ್ಕಾರಗಳು ನೀಡುವ ಸೌಲಭ್ಯಗಳನ್ನು ಬಳಸಿಕೊಂಡು ಬೆಳವಣಿಗೆ ಹೊಂದಬೇಕು ಎಂದು ಸ್ಫೂರ್ತಿ ತುಂಬಿದರು.ಶಾಸಕ ಎಚ್.ಎಂ.ಗಣೇಶ ಪ್ರಸಾದ್ ಮಾತನಾಡಿ, ಜಗತ್ತಿನಲ್ಲಿ ಪ್ರಸ್ತುತ ಹವಾಮಾನ ವೈಪರೀತ್ಯಗಳಿಂದ ತಾಪಮಾನ ಏರಿಕೆಯಾಗಿ ಮನುಷ್ಯನ ಜೀವನದ ಮೇಲೆ ಪ್ರಭಾವ ಬೀರುತ್ತಿದೆ. ದೊಡ್ಡ ದೊಡ್ಡ ಪಟ್ಟಣಗಳಲ್ಲಿ ಆಕ್ಸಿಜನ್ ಬ್ಯಾಂಕುಗಳನ್ನು ಸ್ಥಾಪನೆ ಮಾಡಿದ್ದಾರೆ. ಇಂತಹ ಪರಿಸ್ಥಿತಿ ಹಳ್ಳಿಗಳಿಗೂ ಬಾರದೆ ಇರಲು ಜಾಗವಿರುವ ಕಡೆಯಲ್ಲಿ ಗಿಡ ನೆಡುವುದೊಂದೆ ಪರಿಹಾರ ಎಂದರು. ಮೂಡುಗೂರು ಮಠಾಧೀಶ ಇಮ್ಮಡಿ ಉದ್ದಾನಸ್ವಾಮೀಜಿ ಅವರು ಹಸಿರೀಕರಣ ಮಾಡಲು ಅಭಿಯಾನ ನಡೆಸುತ್ತಿದ್ದಾರೆ. ತಾವೇ ಗಿಡಗಳನ್ನು ಬೆಳೆಸಿ ವಿತರಣೆ ಮಾಡುತ್ತಿದ್ದಾರೆ. ಈ ಕಾರ್ಯಕ್ಕೆ ನನ್ನ ಬೆಂಬಲವೂ ಇದ್ದು, ಪರಿಸರ ಸಂರಕ್ಷಣೆಗೆ ಕಟಿಬದ್ಧರಾಗಿರುವುದಾಗಿ ತಿಳಿಸಿದರು. ಸೋಮಹಳ್ಳಿ ಮಠಾಧೀಶ ಸಿದ್ದಮಲ್ಲಪ್ಪ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಪಡುಗೂರು ಮಠದ ಶಿವಲಿಂಗೇದ್ರ ಸ್ವಾಮೀಜಿ ಮಾರಮ್ಮನ ದೇವಸ್ಥಾನದ ಶಿಖರ ಕಳಸಾರೋಹಣ ನೆರವೇರಿಸಿದರು. ಇಮ್ಮಡಿ ಉದ್ದಾನ ಸ್ವಾಮೀಜಿ ಧ್ವಜಾರೋಹಣ ನೆರವೇರಿಸಿದರು. ನಿವೃತ್ತ ಪ್ರಾಧ್ಯಾಪಕ ಡಿ.ಎಸ್.ಸದಾಶಿವ ಮೂರ್ತಿ ಪ್ರಧಾನ ಭಾಷಣ ಮಾಡಿದರು.
ಸಿದ್ದಗಂಗಾ ಮಠದ ಕಿರಿಯ ಶ್ರೀ ಶಿವ ಸಿದ್ದೇಶ್ವರ ಸ್ವಾಮೀಜಿ, ಕನಕಪುರ ದೇಗುಲ ಮಠದ ಕಿರಿಯ ಶ್ರೀ ಚನ್ನಬಸವ ಸ್ವಾಮೀಜಿ,ಮರಿಯಾಲ ಮಠದ ಮುರುಘಾ ರಾಜೇಂದ್ರ ಸ್ವಾಮೀಜಿ, ಹರವೆ ಮಠದ ಸರ್ಪಭೂಷಣ ಸ್ವಾಮೀಜಿ,ರಾಮಾಪುರ ಮಠದ ಬಸವಣ್ಣ ಸ್ವಾಮೀಜಿ, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಚಾಮುಲ್ ನಿರ್ದೇಶಕ ಎಂ.ಪಿ.ಸುನಿಲ್ ಮತ್ತಿತರರು ವೇದಿಕೆಯಲ್ಲಿ ಇದ್ದರು.