ಕನ್ನಡಪ್ರಭ ವಾರ್ತೆ ಚೇಳೂರು
ತಾಲೂಕಿನ ರಾಶ್ಚೇರುವು ಗ್ರಾಪಂ ವ್ಯಾಪ್ತಿಯ ಕುರುಬವಾಂಡ್ಲಪಲ್ಲಿ ಗ್ರಾಮದಲ್ಲಿ ಕೆಲವಡೆ ಮಾಡಿರುವ ಅವೈಜ್ಞಾನಿಕ ಚರಂಡಿ ಕಾಮಗಾರಿಯಿಂದ ಚರಂಡಿಗಳಲ್ಲಿ ಹೂಳು ತುಂಬಿಕೊಂಡು ನೀರು ಸರಾಗವಾಗಿ ಸಾಗದೆ ನಿಂತಲ್ಲಿಯೇ ನಿಂತು ತ್ಯಾಜ್ಯವೆಲ್ಲ ಕೊಳೆತು ಸೊಳ್ಳೆಗಳು ಉತ್ಪತ್ತಿಯಾಗಿ ಡೆಂಘೀ, ಮಲೇರಿಯಾ ಹೀಗೆ ನಾನಾ ಕಾಯಿಲೆಗಳಿಗೆ ಸಾರ್ವಜನಿಕರು ಬಳಲುವಂತಾಗಿದೆ.ಗ್ರಾಪಂ ವ್ಯಾಪ್ತಿಯ ಬಹುತೇಕ ಚರಂಡಿಗಳು ಸ್ವಚ್ಛಗೊಳಿಸದೆ ಗಬ್ಬುನಾರುತ್ತಿವೆ. ಅಲ್ಲದೇ ಮುಖ್ಯ ರಸ್ತೆಯ ಪಕ್ಕದಲ್ಲೇ ಇರುವ ಚರಂಡಿಗಳು ಸದಾ ಗಬ್ಬು ಬರುತ್ತಿದ್ದು, ಸರಿಪಡಿಸುವ ಗೋಜಿಗೆ ಹೋಗದೇ ಗ್ರಾಪಂ ಬೇಜವಾಬ್ದಾರಿತನ ಪ್ರದರ್ಶಿಸುತ್ತಿದೆ.
ಕಟ್ಟಿಕೊಂಡ ಚರಂಡಿಗಳುರಾಶ್ಚೇರುವು ಗ್ರಾಮ ಪಂಚಾಯತಿ ಚರಂಡಿಗಳನ್ನು ಸ್ವಚ್ಛಗೊಳಿಸದೇ ಅನೈರ್ಮಲ್ಯ ಉಂಟಾಗಲು ಕಾರಣವಾಗಿದೆ. ಚರಂಡಿಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸದೆ ಗಬ್ಬೆದ್ದು ನಾರುತ್ತಿದೆ. ಕುರುಬವಾಂಡ್ಲಪಲ್ಲಿ ಗ್ರಾಮದಲ್ಲಿ ಮೂಗು ಮುಚ್ಚಿಕೊಂಡು ಹೋಗಬೇಕಾದ ಅನಿವಾರ್ಯತೆ ಉಂಟಾಗಿದೆ. ಚರಂಡಿಗಳಲ್ಲಿ ತ್ಯಾಜ್ಯ ವಸ್ತುಗಳ ಜತೆಯಲ್ಲಿ ಪ್ಲಾಸ್ಟಿಕ್ ಕವರ್‌ಗಳ ರಾಶಿಯೇ ತುಂಬಿದೆ. ಇದರಿಂದಾಗಿ ಕೊಳಚೆ ನೀರನ್ನು ಮುಂದೆ ಸಾಗಲು ಸಾಧ್ಯವಾಗುತ್ತಿಲ್ಲ. ಸಂಜೆಯಾದರೆ ಸೊಳ್ಳೆ ಕಾಟ
ರಾಶ್ಚೇರುವು ಗ್ರಾಪಂ ಬಹುತೇಕ ಗ್ರಾಮಗಳಲ್ಲಿ ಚರಂಡಿಗಳಲ್ಲಿ ನೀರು ಮಡುಗಟ್ಟಿರುವುದರಿಂದ ಸೊಳ್ಳೆಗಳು ವಾಸಿಸಲು ಹೇಳಿ ಮಾಡಿಸಿದಂತ ತಾಣವಾಗಿದೆ. ದುರ್ನಾತದ ನಡುವೆ ಸೊಳ್ಳೆಗಳ ಕಾಟದಿಂದ ಜನರು ರೋಸಿ ಹೋಗಿದ್ದಾರೆ. ಗ್ರಾಪಂ ಆಡಳಿತ ಇನ್ನಾದರೂ ಎಚ್ಚೆತ್ತುಕೊಂಡು ಸ್ವಚ್ಛತೆಯತ್ತ ಹೆಚ್ಚಿನ ಗಮನ ಹರಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.ಈ ಬಗ್ಗೆ ಪ್ರತಿಕ್ರಿಯಿಸಿರುವ ಬಾಗೇಪಲ್ಲಿ ತಾಲೂಕು ವೈದ್ಯಾಧಿಕಾರಿ ಡಾ.ಸತ್ಯ ನಾರಾಯಣ ರೆಡ್ಡಿ, ಆಶಾ ಕಾರ್ಯಕರ್ತೆಯರು ಹಾಗೂ ದಾದಿಯರು ಪ್ರತಿ ಹಳ್ಳಿಗೆ ಭೇಟಿ ನೀಡಿ ಡೆಂಘೀ , ಮಲೇರಿಯಾದಂತಹ ರೋಗ ರುಜಿನಗಳ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಕುರುಬವಾಂಡ್ಲಪಲ್ಲಿ ಗ್ರಾಮದಲ್ಲಿ ಚರಂಡಿ ಸ್ವಚ್ಛತೆ ಮಾಡುವಂತೆ ಈಗಾಗಲೇ ಪಂಚಾಯಿತಿಯವರಿಗೆ ಚಾಕವೇಲು ಆಸ್ಪತ್ರೆಯಿಂದ ಮನವಿ ಸಲ್ಲಿಸಲಾಗಿದೆ ಎಂದಿದ್ದಾರೆ.