- ಕಾಂಗ್ರೆಸ್ ನಾಯಕರ ಸಲಹೆ ನಯವಾಗಿಯೇ ತಿರಸ್ಕರಿಸಿದ ಅಹಿಂದ ಯುವನಾಯಕ- - -
ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ್ದರಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಇನ್‌ಸೈಟ್ಸ್ ಅಕಾಡೆಮಿ ಸಂಸ್ಥಾಪಕ ಜಿ.ಬಿ.ವಿನಯಕುಮಾರ ಅವರಿಗೆ ಮಾಜಿ ಸಚಿವ ಎಚ್.ಎಂ.ರೇವಣ್ಣ ನೇತೃತ್ವದ ಮುಖಂಡರ ನಿಯೋಗ ಕಣದಿಂದ ಹಿಂದೆ ಸರಿಯುವಂತೆ ಮಾಡಿದ ಸಂಧಾನ ಪ್ರಯತ್ನ ವಿಫಲವಾಗಿದೆ.
ನಗರದಲ್ಲಿ ಜಿ.ಬಿ.ವಿನಯಕುಮಾರ ನಿವಾಸಕ್ಕೆ ಬೆಳಗ್ಗೆ ಭೇಟಿ ನೀಡಿದ್ದ ಮಾಜಿ ಸಚಿವ ಎಚ್.ಎಂ.ರೇವಣ್ಣ, ವಿಪ ಸದಸ್ಯ ಕೆ.ಅಬ್ದುಲ್ ಜಬ್ಬಾರ್, ಹಿರಿಯ ಮುಖಂಡರಾದ ಎಂ.ಟಿ.ಸುಭಾಶ್ಚಂದ್ರ, ಬಿ.ವೀರಣ್ಣ, ಹೊನ್ನಾಳಿ ಸ್ವಾಮಿ, ಯೋಗೇಶ ಸೇರಿದಂತೆ ಅನೇಕರನ್ನು ಒಳಗೊಂಡ ನಿಯೋಗವು ಸುಮಾರು ಹೊತ್ತು ವಿನಯಕುಮಾರ ಅವರ ಮನವೊಲಿಕೆಗೆ ಪ್ರಯತ್ನಿಸಿತು.ಮಾಜಿ ಸಚಿವ ಎಚ್.ಎಂ. ರೇವಣ್ಣ ನೇತೃತ್ವದ ನಿಯೋಗವು, ಈಗಾಗಲೇ ಕಾಗಿನೆಲೆ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಹಾಗೂ ಸಿಎಂ ಸಿದ್ದರಾಮಯ್ಯ ಸಹ ಇನ್ನೂ ವಯಸ್ಸು, ಅವಕಾಶ ಸಾಕಷ್ಟು ಇವೆ. ದುಡುಕದಂತೆ ತಿಳಿಹೇಳಿದ್ದಾರೆ. ಪಕ್ಷೇತರರಾಗಿ ಸ್ಪರ್ಧಿಸಿದರೆ ಕಾಂಗ್ರೆಸ್‌ಗೆ ತೊಂದರೆ ಆಗುತ್ತದೆ. ಸಮಾಧಾನದಿಂದ ಯೋಚಿಸಿ. ಪಕ್ಷದ ವಿರುದ್ಧ ಸ್ಪರ್ಧೆ ಉಚಿತವಲ್ಲ. ಸಿಎಂ ಸಲಹೆಯಂತೆ ಚುನಾವಣಾ ಕಣದಿಂದ ಹಿಂದೆ ಸರಿಯಬೇಕು ಎಂದು ವಿನಯ್‌ಗೆ ಮನವೊಲಿಸಲು ಯತ್ನಿಸಿತು. ಆದರೆ, ಕಾಂಗ್ರೆಸ್ ಮುಖಂಡರ ಸಲಹೆಯನ್ನು ಜಿ.ಬಿ.ವಿನಯಕುಮಾರ ನಯವಾಗಿಯೇ ತಿರಸ್ಕರಿಸಿದ್ದಾರೆ.
ಕಾಂಗ್ರೆಸ್ ಬಂಡಾಯಗಾರ ವಿನಯಕುಮಾರ್ ಮನವೊಲಿಕೆಗೆ ಎಚ್.ಎಂ.ರೇವಣ್ಣ, ವಿಪ ಸದಸ್ಯ ಕೆ.ಅಬ್ದುಲ್ ಜಬ್ಬಾರ್, ಹಿರಿಯ ಮುಖಂಡರಾದ ಎಂ.ಟಿ.ಸುಭಾಶ್ಚಂದ್ರ, ಬಿ.ವೀರಣ್ಣ, ಹೊನ್ನಾಳಿ ಸ್ವಾಮಿ, ಯೋಗೇಶ ಸೇರಿದಂತೆ ಮುಖಂಡರ ನಿಯೋಗವು ಆಗಮಿಸಿತ್ತು.
-14ಕೆಡಿವಿಜಿ2: