- ಜಾತ್ಯತೀತ ನಿಲುವಿನ ಎಸ್‌ಎಸ್ ಕುಟುಂಬ ಬಗ್ಗೆ ಅರಿವಿಲ್ಲದೇ ಹೇಳಿಕೆ: ಜಿಲ್ಲಾಧ್ಯಕ್ಷ ಮಂಜಪ್ಪ
- - - ಕನ್ನಡಪ್ರಭ ವಾರ್ತೆ ದಾವಣಗೆರೆವಿನಯಕುಮಾರ ವಿಪಕ್ಷದವರ ಜೊತೆ ಸೇರಿ ಮುಖ್ಯಮಂತ್ರಿಗೆ ಅವಮಾನಿಸಲು ಹೊರಟಿದ್ದು, ಇಂಥವರಿಗೆ ಕ್ಷೇತ್ರದ ಮತದಾರರು ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಿದ್ದಾರೆ. ಇದರಿಂದಲೂ ಬುದ್ಧಿ ಕಲಿಯದ ವಿನಯಕುಮಾರ ಈಗ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಕುಟುಂಬದ ಮೇಲೆ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಚ್.ಬಿ. ಮಂಜಪ್ಪ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಮನೂರು ಸೇರಿದಂತೆ ಇಡೀ ಕುಟುಂಬ ಮುಂಚಿನಿಂದಲೂ ಜಾತ್ಯತೀತ ನಿಲುವು ಹೊಂದಿದೆ. ಸಿದ್ದರಾಮಯ್ಯನವರ ಕಷ್ಟ-ಸುಖ ಎರಡರಲ್ಲೂ ಶಾಮನೂರು ಕುಟುಂಬ ಜೊತೆಗೆ ಇದೆ. ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಮನೂರು ಶಿವಶಂಕರಪ್ಪ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಸಹ ಭಾಗಿಯಾಗಿದ್ದರು. ಅಷ್ಟೇ ಅಲ್ಲ, ಕಾರ್ಯಕರ್ತರು ಸಹ ಭಾಗವಹಿಸುವಂತೆ ನೋಡಿಕೊಂಡಿದ್ದಾರೆ. ವಾಸ್ತವ ಹೀಗಿದ್ದರೂ ಶಾಮನೂರು ಕುಟುಂಬದ ಮೇಲೆ ಆರೋಪ ಮಾಡುವ ಕೆಲಸವನ್ನು ವಿನಯಕುಮಾರ ಮುಂದುವರಿಸಿದ್ದು ಸರಿಯಲ್ಲ ಎಂದರು.ಕಾಂಗ್ರೆಸ್ ಪಕ್ಷದಲ್ಲಿ ಜಿ.ಬಿ. ವಿನಯಕುಮಾರ ಅವರಿಗೆ ಯಾವುದೇ ಹುದ್ದೆ, ಜವಾಬ್ದಾರಿಯೂ ಇಲ್ಲ. ಇಂತಹ ವ್ಯಕ್ತಿ ಪಕ್ಷದ ಬಗ್ಗೆ ಯಾವುದೇ ಮಾಹಿತಿ ಇಲ್ಲದವರು, ಜನರಲ್ಲಿ ಗೊಂದಲ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ವಿನಯಕುಮಾರಗೆ ಪಕ್ಷದಿಂದ ಉಚ್ಚಾಟಿಸಲು ಶಿಸ್ತು ಸಮಿತಿಗೆ ಶಿಫಾರಸು ಮಾಡಿದ್ದು, ಇನ್ನೊಂದು ವಾರದಲ್ಲಿ ಉಚ್ಚಾಟನೆ ಮಾಡುತ್ತೇವೆ ಎಂದು ಎಚ್.ಬಿ.ಮಂಜಪ್ಪ ತಿಳಿಸಿದರು.
ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ದೂಡಾ ಅಧ್ಯಕ್ಷ ದಿನೇಶ ಕೆ. ಶೆಟ್ಟಿ, ಅಯೂಬ್ ಪೈಲ್ವಾನ್, ಕೆ.ಜಿ.ಶಿವಕುಮಾರ, ಪಾಲಿಕೆ ಸದಸ್ಯ ಎ.ನಾಗರಾಜ, ಎಂ.ಮಂಜುನಾಥ, ಎಸ್.ಮಲ್ಲಿಕಾರ್ಜುನ, ಮಂಗಳಮ್ಮ, ದಾಕ್ಷಾಯಣಮ್ಮ, ರಾಜೇಶ್ವರಿ, ಶುಭಮಂಗಳ, ಚಂದ್ರು ಡೋಲಿ, ಜಮ್ನಳ್ಳಿ ನಾಗರಾಜ, ಚಂದ್ರು ದೀಟೂರು ಇತರರು ಇದ್ದರು.- - -
-12ಕೆಡಿವಿಜಿ12: