ಶಿಷ್ಟಾಚಾರ ಉಲ್ಲಂಘನೆ: ಸಭೆಯಿಂದ ಹೊರನಡೆದ ಸಂಸದ

KannadaprabhaNewsNetwork | Published : Apr 11, 2025 12:33 AM

ಸಾರಾಂಶ

ಕೇಂದ್ರ ಸರ್ಕಾರದ ಅನುದಾನದಲ್ಲಿ ನಿರ್ಮಾಣಗೊಳ್ಳುತ್ತಿರುವ ತುರ್ತು ನಿಗಾ ಘಟಕದ ಗುದ್ದಲಿಪೂಜೆ ವೇದಿಕೆ ಕಾರ್ಯಕ್ರಮದಲ್ಲಿ ಅಳವಡಿಸಿರುವ ಫ್ಲೆಕ್ಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾರ ಭಾವಚಿತ್ರಗಳನ್ನು ಹಾಕದಿರುವುದು ಶಿಷ್ಟಾಚಾರದ ಉಲ್ಲಂಘನೆಯಾಗಿದೆ.

ಕನ್ನಡಪ್ರಭ ವಾರ್ತೆ ಚಿಂತಾಮಣಿ

ಇದು ಸರ್ಕಾರಿ ಕಾರ್ಯಕ್ರಮವೋ ಅಥವಾ ಕಾಂಗ್ರೆಸ್‌ ಕಾರ್ಯಕ್ರಮವೋ ಎಂದು ಅಸಮಾಧಾನ ವ್ಯಕ್ತಪಡಿಸಿದ ಕೋಲಾರ ಸಂಸದ ಮಲ್ಲೇಶ್ ಬಾಬು ಸಭೆಯಿಂದ ಹೊರನಡೆದ ಘಟನೆ ನಡೆಯಿತು.

ಚಿಂತಾಮಣಿಯಲ್ಲಿ ೫೦ ಹಾಸಿಗೆಗಳ ತುರ್ತು ನಿಗಾ ಘಟಕದ ಗುದ್ದಲಿಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಮಲ್ಲೇಶ್‌ಬಾಬು, ಕೇಂದ್ರ ಸರ್ಕಾರದ ಅನುದಾನದಲ್ಲಿ ನಿರ್ಮಾಣಗೊಳ್ಳುತ್ತಿರುವ ತುರ್ತು ನಿಗಾ ಘಟಕದ ಗುದ್ದಲಿಪೂಜೆ ವೇದಿಕೆ ಕಾರ್ಯಕ್ರಮದಲ್ಲಿ ಅಳವಡಿಸಿರುವ ಫ್ಲೆಕ್ಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾರ ಭಾವಚಿತ್ರಗಳನ್ನು ಹಾಕದಿರುವುದು ಶಿಷ್ಟಾಚಾರದ ಉಲ್ಲಂಘನೆಯಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಭೂಮಿ ನೀಡಿದ್ದು ರಾಜ್ಯ ಸರ್ಕಾರ

ಕಾರ್ಯಕ್ರಮದಲ್ಲಿ ಹಾಜರಿದ್ದ ಸಚಿವ ಡಾ.ಎಂ.ಸಿ.ಸುಧಾಕರ್ ಬೆಂಬಲಿಗರು ಮತ್ತು ಮುಖಂಡರು ಮಲ್ಲೇಶ್‌ಬಾಬುರ ಆಕ್ಷೇಪಕ್ಕೆ ತೀವ್ರ ಅಸಮಾಧಾನ ಸೂಚಿಸಿ ವಿನಾಕಾರಣ ಗೊಂದಲ ಮೂಡಿಸುತ್ತೀದ್ದೀರಿ, ಯೋಜನೆ ಮಂಜೂರಾದರೆ ಸಾಕೆ ಅದಕ್ಕೆ ಬೇಕಾದ ಜಮೀನು ಮತ್ತಿತರೆ ಸೌಲಭ್ಯಗಳನ್ನು ಒದಗಿಸಿದ್ದು ಯಾರೆಂದು ಸಂಸದರಿಗೆ ಮರುಪ್ರಶ್ನೆ ಹಾಕಿದರಲ್ಲದೆ, ಈ ರೀತಿ ಗೊಂದಲ ಮೂಡಿಸುವುದಾದರೆ ಸಭೆಯಿಂದ ಹೊರನಡೆಯುವಂತೆ ತಾಕೀತು ಮಾಡಿದರು.

ಇದರಿಂದ ಅಸಮಾಧಾನಗೊಂಡ ಸಂಸದ ಮಲ್ಲೇಶ್‌ಬಾಬು ಮಾತನಾಡಿ, ಅಣ್ಣ (ಸಚಿವ ಡಾ.ಎಂ.ಸಿ.ಸುಧಾಕರ್) ನಾನು ಗೊಂದಲ ಮೂಡಿಸಲು ಬಂದಿಲ್ಲ, ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಪಾಲನೆಯಾಗಿಲ್ಲ, ಇದು ಸರ್ಕಾರಿ ಕಾರ್ಯಕ್ರಮವೋ ಅಥವಾ ಕಾಂಗ್ರೆಸ್‌ ಕಾರ್ಯಕ್ರಮವೋ ಎಂದು ತಿಳಿಯದಾಗಿದೆಯೆಂದರು.

ಮಾಜಿ ಸಂಸದರ ಪಾತ್ರ ಮರೆಯಬೇಡಿ

ಈ ಘಟಕಕ್ಕೆ ಅನುದಾನ ಮಂಜೂರು ಮಾಡಿಸುವಲ್ಲಿ ಮಾಜಿ ಸಂಸದ ಎಸ್.ಮುನಿಸ್ವಾಮಿರ ಪಾತ್ರವು ಸಾಕಷ್ಟಿದೆ. ಅವರು ಕೋವಿಡ್ ಸಂದರ್ಭದಲ್ಲಿ ಕಡತಗಳೊಂದಿಗೆ ಹಲವಾರು ಕಚೇರಿಗಳನ್ನು ಸುತ್ತಾಡಿ ಯೋಜನೆ ಮಂಜೂರು ಮಾಡಿಸಿದ್ದಾರೆ. ಈ ಬಗ್ಗೆ ಸಭೆಯಲ್ಲಿ ಹಾಜರಿರುವ ಜಿಲ್ಲಾ ಆರೋಗ್ಯಾಧಿಕಾರಿ ಮಹೇಶ್‌ಬಾಬು ಮಾಹಿತಿ ನೀಡುವಂತೆ ಸಂಸದರು ಒತ್ತಾಯಿಸಿದರು. ಆಗ ಸಚಿವ ಸುಧಾಕರ್‌ರ ಅಗತ್ಯ ಮಾಹಿತಿ ನೀಡುವಂತೆ ಡಿಎಚ್‌ಒಗೆ ಸೂಚಿಸಿದರೂ ಡಿಎಚ್‌ಒ ಮಾತನಾಡಲಿಲ್ಲ.

ಕಣ್ತಪ್ಪಿನಿಂದ ಪ್ರಮಾದ: ಸಚಿವ

ಈ ಹಂತದಲ್ಲಿ ಎದ್ದು ನಿಂತ ಸಚಿವ ಡಾ.ಎಂ.ಸಿ.ಸುಧಾಕರ್, ಈ ಯೋಜನೆ ಕೇಂದ್ರ ಸರ್ಕಾರದಾಗಿದ್ದು ಮೋದಿ ಹಾಗೂ ಜೆ.ಪಿ.ನಡ್ಡಾರ ಭಾವಚಿತ್ರಗಳನ್ನು ಹಾಕುವ ಮೂಲಕ ಶಿಷ್ಟಾಚಾರದ ಪಾಲನೆ ಮಾಡಬೇಕಾಗಿತ್ತು, ಕಣ್ತಪ್ಪಿನಿಂದ ಪ್ರಮಾದವಾಗಿದೆ ಎಂದು ಸಮಾಜಾಯಿಷಿ ನೀಡಿದರು. ಆ ವೇಳೆಗಾಗಲೇ ಸಂಸದ ಮಲ್ಲೇಶ್‌ಬಾಬು ಸಭೆಯಿಂದ ಹೊರನಡೆದಿದ್ದರು.

ಅಧಿಕಾರಿಗಳಿಂದ ಲೋಪ

ಶಿಷ್ಟಾಚಾರ ಪಾಲನೆ ಮಾಡಬೇಕಾದುದ್ದು ಅಧಿಕಾರಿಗಳ ಕರ್ತವ್ಯವಾಗಿದ್ದು ಈ ರೀತಿಯ ಲೋಪಗಳು ಮರುಕಳುಹಿಸದಂತೆ ಎಚ್ಚರ ವಹಿಸುವಂತೆ ಆರೋಗ್ಯ ಸಚಿವ ಡಾ.ದಿನೇಶ್ ಗುಂಡೂರಾವ್ ಈ ರೀತಿಯ ಲೋಪಗಳಿಂದ ಸರ್ಕಾರಕ್ಕೆ ಮುಜುಗರವಾಗುವಂತಹ ಸ್ಥಿತಿ ನಿರ್ಮಾಣಗೊಳ್ಳುವುದು ಸರಿಯಲ್ಲ, ಹಿರಿಯ ಅಧಿಕಾರಿಗಳು ಇದರತ್ತ ಗಮನ ಹರಿಸಬೇಕೆಂದು ಸೂಚಿಸಿದರು.

Share this article