ಪುರಸಭೆ ಚುನಾವಣೇಲಿ ಬಿಜೆಪಿ ಸದದ್ಯರ ವಿಪ್ ಉಲ್ಲಂಘನೆ

KannadaprabhaNewsNetwork | Published : Sep 27, 2024 1:18 AM

ಸಾರಾಂಶ

ಇಲ್ಲಿನ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಸಚೇತಕಾದೇಶ (ವಿಪ್) ಉಲ್ಲಂಘಿಸಿ ಪಕ್ಷಕ್ಕೆ ವಿರುದ್ಧವಾಗಿ ನಡೆದುಕೊಂಡ ಹಾಗೂ ಗೈರಾದ ಐವರು ಬಿಜೆಪಿ ಸದಸ್ಯರಿಗೆ ಕಾರಣ ಕೇಳಿ ಜಿಲ್ಲಾಧಿಕಾರಿ ಟಿ.ಸಿ.ಶಿಲ್ಪಾನಾಗ್‌ ನೋಟಿಸ್‌ ಜಾರಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಇಲ್ಲಿನ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಸಚೇತಕಾದೇಶ (ವಿಪ್) ಉಲ್ಲಂಘಿಸಿ ಪಕ್ಷಕ್ಕೆ ವಿರುದ್ಧವಾಗಿ ನಡೆದುಕೊಂಡ ಹಾಗೂ ಗೈರಾದ ಐವರು ಬಿಜೆಪಿ ಸದಸ್ಯರಿಗೆ ಕಾರಣ ಕೇಳಿ ಜಿಲ್ಲಾಧಿಕಾರಿ ಟಿ.ಸಿ.ಶಿಲ್ಪಾನಾಗ್‌ ನೋಟಿಸ್‌ ಜಾರಿ ಮಾಡಿದ್ದಾರೆ.

ಕಳೆದ ಸೆ.೪ ರಂದು ನಡೆದ ಗುಂಡ್ಲುಪೇಟೆ ಪುರಸಭೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಪುರಸಭೆ ಬಿಜೆಪಿ ಸದಸ್ಯ ಕಿರಣ್‌ ಗೌಡ, ಹೀನಾ ಕೌಸರ್‌ ಪಕ್ಷದ ಸಚೇತಕಾದೇಶ (ವಿಪ್)‌ ಉಲ್ಲಂಘಿಸಿ ಪಕ್ಷಕ್ಕೆ ವಿರುದ್ಧ ನಡೆದುಕೊಂಡಿದ್ದಾರೆ. ಹಾಗೂ ಬಿಜೆಪಿ ಸದಸ್ಯರಾದ ರಮೇಶ್‌, ರಾಣಿಲಕ್ಷ್ಮೀದೇವಿ, ವೀಣಾ ಗೈರು ಹಾಜರಾಗುವ ಮೂಲಕ ಪಕ್ಷದ ಸಚೇತಕಾದೇಶ (ವಿಪ್)‌ ಉಲ್ಲಂಘಿಸಿದ್ದಾರೆ ಎಂದು ಕರ್ನಾಟಕ ಸ್ಥಳೀಯ ಪ್ರಾಧಿಕಾರಗಳ (ಪಕ್ಷಾಂತರ ನಿಷೇಧ) ಅಧಿ ನಿಯಮ, ೧೯೮೭ ರ ಕಲಂ: ೪(೨)(೧೧೧) ರಲ್ಲಿ ಪದತ್ತವಾಗಿರುವ ಅಧಿಕಾರದನ್ವಯ ಜಿಲ್ಲಾಧಿಕಾರಿಗಳು ಕಾರಣ ಕೇಳಿ ನೋಟಿಸ್‌ ಜಾರಿಗೊಳಿಸಿದ್ದಾರೆ.

ದೂರುದಾರರ ಅರ್ಜಿ ತೀರ್ಮಾನಕ್ಕಾಗಿ ಪ್ರಸ್ತುತ ನೋಟಿಸ್‌ ನೀಡಲಾಗಿದ್ದು, ನಿಮ್ಮನ್ನು (ಐವರು ಬಿಜೆಪಿ ಸದಸ್ಯರು) ಗುಂಡ್ಲುಪೇಟೆ ಪುರಸಭೆ ಸದಸ್ಯತ್ವದಿಂದ ಏಕೆ ಅನರ್ಹ ಗೊಳಿಸಬಾರದು? ಎಂಬುದರ ಬಗ್ಗೆ ನೋಟಿಸ್‌ ತಲುಪಿದ ೭ ದಿನಗಳೊಳಗಾಗಿ ನಿಮ್ಮ ಲಿಖಿತ ಸಮಜಾಯಿಸಿಯನ್ನು ಸಲ್ಲಿಸತಕ್ಕದ್ದು, ಇಲ್ಲವಾದರಲ್ಲಿ ನಿಮ್ಮ ಸಮಜಾಯಿಷಿ ಏನು ಇರುವುದಿಲ್ಲವೆಂದು ಪರಿಗಣಿಸಿ ಕರ್ನಾಟಕ ಸ್ಥಳೀಯ ಪ್ರಾಧಿಕಾರಗಳ (ಪಕ್ಷಾಂತರ ನಿಷೇಧ) ಅಧಿ ನಿಯಮ,೧೯೮೭ ರನ್ವಯ ಮುಂದಿನ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂಬ ಅಂಶವನ್ನು ನೋಟೀಸ್‌ನಲ್ಲಿ ತಿಳಿಸಿದ್ದಾರೆ.

ದೂರಿನ ಸಾರಾಂಶ:

ಕರ್ನಾಟಕ ಸ್ಥಳೀಯ ಪ್ರಾಧಿಕಾರಗಳ (ಪಕ್ಷಾಂತರ ನಿಷೇಧ) ಅಧಿ ನಿಯಮ,೧೯೮೭ ರ ೩(೧)(ಬಿ) ರನ್ವಯ ಪುರಸಭೆ ಬಿಜೆಪಿ ಸದಸ್ಯರಾದ ಕಿರಣ್ ಗೌಡ, ಹೀನಾ ಕೌಸರ್‌, ರಮೇಶ್‌, ರಾಣಿಲಕ್ಷ್ಮೀದೇವಿ, ವೀಣಾರ ಪುರಸಭೆ ಸದಸ್ಯತ್ವದಿಂದ ಅನರ್ಹಗೊಳಿಸುವಂತೆ ಪುರಸಭೆ ಮಾಜಿ ಅಧ್ಯಕ್ಷರೂ ಆದ ಬಿಜೆಪಿ ಸದಸ್ಯರಾದ ಪಿ.ಗಿರೀಶ್‌, ಕುಮಾರ್‌ ಎಸ್‌ ಪುರಸಭೆ ಮುಖ್ಯಾಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು.ಇದು ನಮಗೆ ಮೊದಲ ಜಯಕಾಂಗ್ರೆಸ್‌ಗೆ ಮಾರಾಟವಾದ ಐವರು ಗುಂಡ್ಲುಪೇಟೆ ಪುರಸಭೆ ಸದಸ್ಯರ ಅನರ್ಹಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಕಾರಣ ಕೇಳಿ ನೋಟೀಸ್‌ ಜಾರಿ ಮಾಡಿದ್ದಾರೆ. ಇದು ನಮಗೆ ಮೊದಲ ಜಯ ಎಂದು ಪುರಸಭೆ ಮಾಜಿ ಅಧ್ಯಕ್ಷ, ಬಿಜೆಪಿ ಸದಸ್ಯ ಪಿ.ಗಿರೀಶ್‌ ಹೇಳಿದ್ದಾರೆ.

ಕನ್ನಡಪ್ರಭದೊಂದಿಗೆ ಮಾತನಾಡಿದ ಅವರು, ಜಿಲ್ಲಾಧಿಕಾರಿಗಳು ದಕ್ಷತೆಗೆ ಹೆಸರಾಗಿದ್ದಾರೆ. ಸರ್ಕಾರ, ಸಚಿವರು, ಶಾಸಕರು ಒತ್ತಡ ಹೇರಿದರೂ ಅನರ್ಹಗೊಳಿಸುವುದನ್ನು ನಿಲ್ಲಿಸಲ್ಲ ಎಂಬುದು ನನಗಲ್ಲ ಜಿಲ್ಲೆಯ ಜನರಿಗೆ ಗೊತ್ತಿದೆ ಎಂದರು. ಪಕ್ಷಾಂತರ ನಿಷೇಧದಡಿ ಜಿಲ್ಲೆಯ ಕೊಳ್ಳೇಗಾಲ ನಗರಸಭೆಯ ೭ ಮಂದಿ ಸದಸ್ಯರು ಅನರ್ಹಗೊಂಡರು. ಅದೇ ರೀತಿಯಲ್ಲಿಯೇ ಇಲ್ಲಿನ ಪುರಸಭೆಯ ಐವರು ಸದಸ್ಯರು ಸದಸ್ಯತ್ವ ಕಳೆದುಕೊಳ್ಳಲಿದ್ದಾರೆ ಎಂದು ಭವಿಷ್ಯ ನುಡಿದರು.

ಮುಂದಿನ ತಿಂಗಳೊಳಗೆ ಐವರು ಸದಸ್ಯರ ಸದಸ್ಯತ್ವ ಅನರ್ಹಗೊಳ್ಳಲಿದೆ. ಕೊಳ್ಳೇಗಾಲ ನಗರಸಭೆ ಸದಸ್ಯರ ಅನರ್ಹ ಪ್ರಕರಣದಲ್ಲಿ ಹೈ ಮತ್ತು ಸುಪ್ರೀಂ ಕೋರ್ಟ್‌ಗಳು ತಡೆಯಾಜ್ಷೆ ನೀಡಲಿಲ್ಲ. ಜಿಲ್ಲಾಧಿಕಾರಿಗಳ ಆದೇಶ ಎತ್ತಿ ಹಿಡಿದಿವೆ ಎಂದರು. ಕಾನೂನಿನ ಪ್ರಕಾರ ಪುರಸಭೆ ಬಿಜೆಪಿಯ ಐವರು ಸದಸ್ಯರಿಗೆ ಕಾರಣ ಕೇಳಿ ನೋಟೀಸ್‌ ಜಾರಿಗೆ ೭ ದಿನ ಕಾಲಾವಕಾಶ ನೀಡಿದ್ದಾರೆ. ನೋಟೀಸ್‌ಗೆ ಉತ್ತರ ಬಂದ ಬಳಿಕ ಖಂಡಿತ ಸದಸ್ಯರ ಸದಸ್ಯತ್ವ ರದ್ದಾಗಲಿದೆ ಕಾದು ನೋಡಿ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪಕ್ಷದ ಚಿಹ್ನೆಯಲ್ಲಿ ಗೆದ್ದು ಪಕ್ಷಾಂತರ ಮಾಡಿದ ಸದಸ್ಯರಿಗೆ ಬುದ್ದಿ ಕಲಿಸುವುದೇ ನಮ್ಮ ಮುಂದಿರುವ ಗುರಿಯಾಗಿದ್ದು, ಸದಸ್ಯತ್ವ ರದ್ದು ಪಡಿಸಲು ಹೈ ಕೋರ್ಟ್‌ ಅಲ್ಲ, ಸುಪ್ರೀಂ ಕೋರ್ಟ್‌ ಬೇಕಾದರೂ ಹೋಗುತ್ತೇವೆ ಎಂದು ಸ್ಪಷ್ಟಪಡಿಸಿದರು.

Share this article