ಹಗರಿಬೊಮ್ಮನಹಳ್ಳಿ: ಪಟ್ಟಣದ ಪುರಸಭೆ ಅಧ್ಯಕ್ಷರ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿ ಗೈರು ಹಾಜರಾದ ಆರೋಪ ಸಾಬೀತಾದ ಹಿನ್ನೆಲೆ ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನೀಕೇರಿ ಪುರಸಭೆಯ ಮೂವರು ಬಿಜೆಪಿ ಸದಸ್ಯರ ಸದಸ್ಯತ್ವ ರದ್ದುಪಡಿಸಿ ಆದೇಶಿಸಿದ್ದಾರೆ.
ಕಳೆದ ಏ.30 ರಂದು ಪುರಸಭೆ ಅಧ್ಯಕ್ಷರ ಚುನಾವಣೆ ನಡೆದಿದ್ದು, ಬಿಜೆಪಿ ಅಧಿಕೃತ ಅಭ್ಯರ್ಥಿಯಾಗಿ 13ನೇ ವಾರ್ಡಿನ ಸದಸ್ಯ ಬಣಕಾರ ಸುರೇಶ ಸ್ಪರ್ಧಿಸಿದ್ದರು. ಏ.27ರಂದೇ ಮುಖ್ಯ ಸಚೇತಕರು ಬಿಜೆಪಿ ಸದಸ್ಯರಿಗೆ ವಿಪ್ ಜಾರಿ ಮಾಡಿ ಕಡ್ಡಾಯವಾಗಿ ಚುನಾವಣೆಗೆ ಹಾಜರಾಗಿ ಬಿಜೆಪಿ ಅಬ್ಯರ್ಥಿ ಬಣಕಾರ ಸುರೇಶ ಅವರಿಗೆ ಮತ ಚಲಾಯಿಸುವಂತೆ ಸೂಚಿಸಿದ್ದರೂ ಈ ಮೂವರು ಸದಸ್ಯರು ಚುನಾವಣೆಗೆ ಹಾಜರಾಗದೇ ಗೈರಾಗಿದ್ದರು.
೨೩ ಸದಸ್ಯರ ಬಲವುಳ್ಳ ಪಟ್ಟಣದ ಪುರಸಭೆಗೆ ಕಾಂಗ್ರೆಸ್ ನ ೧೨ ಜನ ಸದಸ್ಯರು ಹಾಗೂ ಬಿಜೆಪಿಯ ೧೧ ಜನ ಸದಸ್ಯರು ಆಯ್ಕೆಯಾಗಿದ್ದರು. ೩೦ತಿಂಗಳ ಮೊದಲ ಅವಧಿಗೆ ಕಾಂಗ್ರೆಸ್ ಸದಸ್ಯ ಮರಿರಾಮಪ್ಪ ಅಧ್ಯಕ್ಷರಾದರು. ೧೭ ತಿಂಗಳ ನಂತರ ಕಾರಣಾಂತರಗಳಿಂದ ರಾಜಿನಾಮೆ ಸಲ್ಲಿಸಿದ್ದರು. ಬಳಿಕ ಮತ್ತೆ ಚುನಾವಣೆ ಘೋಷಿಸಲಾಗಿತ್ತು.ಬಿಜೆಪಿ ಸದಸ್ಯರು ಗೈರಾಗಿರುವ ಕುರಿತು ಬಿಜೆಪಿ ವಿಜಯನಗರ ಜಿಲ್ಲಾಧ್ಯಕ್ಷ ಸಂಜೀವರಡ್ಡಿ ಹಾಗೂ ೧೩ನೇ ವಾರ್ಡ್ ಸದಸ್ಯ ಬಣಕಾರ ಸುರೇಶ ಅವರು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ವಿಪ್ ಉಲ್ಲಂಘಿಸಿ ಉದ್ದೇಶ ಪೂರ್ವಕವಾಗಿ ಗೈರು ಹಾಜರಾಗಿದ್ದು, ಪ್ರತಿಪಕ್ಷದ ಅಭ್ಯರ್ಥಿಗೆ ಪರೋಕ್ಷವಾಗಿ ನೆರವಾಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.