ಮೈಕ್ರೋ ಫೈನಾನ್ಸ್ ಕಂಪನಿಗಳ ವಿರುದ್ಧ ವಾಟಾಳ್ ಒನಕೆ ಚಳವಳಿ

KannadaprabhaNewsNetwork |  
Published : Feb 03, 2025, 12:30 AM IST

ಸಾರಾಂಶ

ನೆರೆ ರಾಜ್ಯಗಳ ಕಪ್ಪು ಹಣ ತಂದು ರಾಜ್ಯದ ಜನರಿಗೆ ಹಿಂಸೆ ಕೊಡುವ ಫೈನಾನ್ಸ್ ಕಂಪನಿಗಳ ವಿರುದ್ಧ ಕಾನೂನಾತ್ಮಕ ಕ್ರಮ ಜರುಗಿಸಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಮೈಕ್ರೋ ಫೈನಾನ್ಸ್ ಕಂಪನಿಯವರು ಸಾಲಗಾರರಿಗೆ ನೀಡುತ್ತಿರುವ ಹಿಂಸೆ ಹಾಗೂ ದೌರ್ಜನ್ಯ ನಿಲ್ಲಬೇಕು ಎಂದು ಆಗ್ರಹಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಅವರು ನಗರದ ಹಾರ್ಡಿಂಜ್ ವೃತ್ತದಲ್ಲಿ ಭಾನುವಾರ ಒನಕೆ ಚಳವಳಿ ಹಮ್ಮಿಕೊಂಡಿದ್ದರು.

ಈ ವೇಳೆ ಮಾತನಾಡಿದ ಅವರು, ನೆರೆ ರಾಜ್ಯಗಳ ಕಪ್ಪು ಹಣ ತಂದು ರಾಜ್ಯದ ಜನರಿಗೆ ಹಿಂಸೆ ಕೊಡುವ ಫೈನಾನ್ಸ್ ಕಂಪನಿಗಳ ವಿರುದ್ಧ ಕಾನೂನಾತ್ಮಕ ಕ್ರಮ ಜರುಗಿಸಬೇಕು. ರಾಜ್ಯದಲ್ಲಿ ತಲೆ ಎತ್ತಿರುವ ಅಕ್ರಮ ಫೈನಾನ್ಸ್ ಕಂಪನಿಗಳನ್ನು ರದ್ದು ಮಾಡಬೇಕು. ಫೈನಾನ್ಸ್ ಕಂಪನಿಗಳ ವಿರುದ್ಧ ನಿವೃತ್ತ ನ್ಯಾಯಾಧೀಶ ನೇಮಕ ಮಾಡಿ ತನಿಖೆ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ. ಕರ್ನಾಟಕ ಬಂದ್ ಗೂ ಕರೆ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜಾರಿ ನಿರ್ದೇಶನಾಲಯದವರೇ, ನಿಮಗೆ ತಾಕತ್ತಿದ್ದರೆ ಮೈಕ್ರೋ ಫೈನಾನ್ಸ್ ಮೇಲೆ ದಾಳಿ ಮಾಡಿ. ಮೈಕ್ರೋ ಫೈನಾನ್ಸ್ ಸಾಲ ದೌರ್ಜನ್ಯ ನಿಲ್ಲಿಸಿ, ಹಿಂಸೆ ಕೊಡಬಾರದು. ಮನೆಗಳಿಗೆ ಬೀಗ ಹಾಕಬಾರದು. ಆತ್ಮಹತ್ಯೆ ಮಾಡಿಕೊಂಡವರಿಗೆ ಒಂದೊಂದು ಕೋಟಿ ರೂ. ಪರಿಹಾರ ಕೊಡಬೇಕು ಎಂದು ಅವರು ಒತ್ತಾಯಿಸಿದರು.

ಅಸಲಿಗಿಂತ ಬಡ್ಡಿ ವಸೂಲಿ ಜಾಸ್ತಿಯಾಗಿರುವುದರಿಂದ ಸಮಗ್ರವಾಗಿ ತನಿಖೆ ಆಗಬೇಕು. ರೌಡಿಗಳ ಮೂಲಕ ಬೆದರಿಕೆ ಹಾಕುವುದು, ಮನೆಗೆ ನುಗ್ಗುವುದು, ಮನೆಗಳಿಗೆ ಬೀಗ ಹಾಕುವುದು ನಿಲ್ಲಬೇಕು. ಇದುವರೆವಿಗೂ ಮೈಕ್ರೋ ಫೈನಾನ್ಸ್ ಸಾಲದಿಂದ ಆಗಿರುವ ಸಾವು- ನೋವುಗಳ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಲೇಬೇಕು. ಸರ್ಕಾರ ಇಡೀ ರಾಜ್ಯಾದ್ಯಂತ ತೀವ್ರ ಎಚ್ಚರ ವಹಿಸಬೇಕು. ಆತ್ಮಹತ್ಯೆ ನಿಲ್ಲಬೇಕು, ಮೀಟರ್ ಬಡ್ಡಿ ದುರಂತ ತಪ್ಪಬೇಕು ಎಂದು ಅವರು ಆಗ್ರಹಿಸಿದರು.

----

ಕೇಂದ್ರದಿಂದ ಮಲತಾಯಿ ಧೋರಣೆ

ಬಜೆಟ್ ನಲ್ಲಿ ರಾಜ್ಯಕ್ಕೆ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತೋರಿದೆ. ನಮ್ಮ ಸಂಸದರಿಗೆ ಮಾನ ಮರ್ಯಾದೆ ಇಲ್ಲ. ಎಚ್.ಡಿ. ಕುಮಾರಸ್ವಾಮಿ ಊರಲ್ಲಿರುವುದೆಲ್ಲ ಮಾತಾಡ್ತಾರೆ, ಇದರ ಬಗ್ಗೆ ಯಾಕೆ ಮಾತನಾಡಿಲ್ಲ? ಜೋಶಿ ಬಹಳ ಮಡಿವಂತ ಆದರೆ ಬಜೆಟ್ ಬಗ್ಗೆ ಮಾತನಾಡಿಲ್ಲ ಯಾಕೆ? ಶೋಭ ಕರಂದ್ಲಾಜೆ ತುಟಿ ಬಿಚ್ಚಿಲ್ಲ ಯಾಕೆ? ರಾಜ್ಯದ ಪರ ಧ್ವನಿ ಎತ್ತದ ಸಂಸದರು, ಕೂಡಲೇ ತಮ್ಮ ಹುದ್ದೆಗೆ ರಾಜೀನಾಮೆ ಕೊಡಬೇಕು. ಕೇಂದ್ರ ಹಣಕಾಸು ಮಂತ್ರಿ ರಾಜ್ಯದಿಂದ ಆಯ್ಕೆ ಆದವರು ಇವರು ರಾಜ್ಯಕ್ಕೆ ಏನೂ ಕೊಡುಗೆ ಕೊಟ್ಟಿಲ್ಲ, ಇವರನ್ನು ಮುಂದಿನ ದಿನಗಳಲ್ಲಿ ಆಯ್ಕೆ ಮಾಡಬಾರದು ಎಂದು ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದರು.

----

ಸಿದ್ದರಾಮಯ್ಯ ರಾಜೀನಾಮೆ ಕೊಡಬಾರದು

ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮ ರಾಜ್ಯದಲ್ಲಿ ಇರೋದರಲ್ಲಿ ಒಬ್ಬ ಒಳ್ಳೆಯ ವ್ಯಕ್ತಿ. ಇವರೇ ಕೊನೆಯ ಕೊಂಡಿ, ಈ ಕೊಂಡಿ ಕಳಚಿದರೆ ರಾಜ್ಯ ದಿಕ್ಕೆಟ್ಟು ಹೋಗುತ್ತದೆ. ಸಿದ್ದರಾಮಯ್ಯ ಅವರನ್ನು ತೆಗೆಯಲು ಜೆಡಿಎಸ್, ಬಿಜೆಪಿ ಮತ್ತು ಕಾಂಗ್ರೆಸ್ ನ ಕೆಲವರು ಪಿತೂರಿ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಬಾರದು ಎಂದು ವಾಟಾಳ್ ನಾಗರಾಜ್ ಆಗ್ರಹಿಸಿದರು.

ರಾಜ್ಯಪಾಲರು ಪ್ರಾಸಿಕೂಷನ್ ಕೊಡಬಾರದಿತ್ತು, ರಾಜ್ಯಪಾಲರಿಗೆ ಇರುವ ಈ ಕೆಟ್ಟ ಅಧಿಕಾರ ತೆಗೆಯಬೇಕು. ಈ ಸಂಬಂಧಿಸಿದಂತೆ ಚರ್ಚೆಗಳು ನಡೆಯಬೇಕು. ಸಿದ್ದರಾಮಯ್ಯ ನೂರಾರು ನಾಗರಹಾವುಗಳ ನಡುವೆ ಮಲಗಿದ್ದಾರೆ ಜೋಪಾನವಾಗಿ ಇರಬೇಕು. ಸಿದ್ದರಾಮಯ್ಯ ಅರೆಸ್ಟ್ ಆದರೂ ರಾಜೀನಾಮೆ ಕೊಡಬೇಡಿ ಜೈಲಿನಲ್ಲೇ ಇದ್ದು ಆಡಳಿತ ಮಾಡಿ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ