ತಾರತಮ್ಯ ನೀತಿ ಅಳವಡಿಸಿಕೊಂಡು ಕನ್ನಡಿಗರನ್ನೇ ಮರೆತ ಕೇಂದ್ರ ಬಜೆಟ್ : ಎಚ್. ಆಂಜನೇಯ

KannadaprabhaNewsNetwork |  
Published : Feb 03, 2025, 12:30 AM ISTUpdated : Feb 03, 2025, 12:58 PM IST
H Anjaneya

ಸಾರಾಂಶ

ತಾರತಮ್ಯ ನೀತಿ ಅಳವಡಿಸಿಕೊಂಡು ಮಂಡಿಸಿರುವುದನ್ನು ಬಜೆಟ್ ಎಂದು ಹೇಗೆ ಕರೆಯಲು ಸಾಧ್ಯ ಎಂದು ಮಾಜಿ ಸಚಿವ ಎಚ್.ಆಂಜನೇಯ ಪ್ರಶ್ನಿಸಿದ್ದಾರೆ.

 ಚಿತ್ರದುರ್ಗ : ದೇಶದ ಎಲ್ಲಾ ರಾಜ್ಯ, ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಯೋಜನೆ, ಹಸಿದ ಹೊಟ್ಟೆಗೆ ಅನ್ನ, ದುಡಿಯುವ ಕೈಗೆ ಉದ್ಯೋಗ, ಹಿಂದುಳಿದ ಪ್ರದೇಶಗಳ ಪ್ರಗತಿಗೆ ಆದ್ಯತೆ, ತೆರಿಗೆ ಪಾವತಿಸುವ ರಾಜ್ಯಗಳಿಗೆ ಅನ್ಯಾಯವಾಗದ ರೀತಿ ಅನುದಾನ ಹಂಚಿಕೆ ಮಾಡುವ ಅಂಶಗಳನ್ನು ಕೈಬಿಟ್ಟು ತಾರತಮ್ಯ ನೀತಿ ಅಳವಡಿಸಿಕೊಂಡು ಮಂಡಿಸಿರುವುದನ್ನು ಬಜೆಟ್ ಎಂದು ಹೇಗೆ ಕರೆಯಲು ಸಾಧ್ಯ ಎಂದು ಮಾಜಿ ಸಚಿವ ಎಚ್.ಆಂಜನೇಯ ಪ್ರಶ್ನಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದಿನ ಹಾಗೂ ಈಗಿನ ಬಜೆಟ್ ಅವಲೋಕಿಸಿದರೆ ಇದನ್ನು ಬಜೆಟ್ ಎಂದು ಭಾವಿಸಲು ಅಸಾಧ್ಯ. ಇದೊಂದು ಅಧಿಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ಸೇರಿದಂತೆ ಇತರೆ ಪ್ರತಿಪಕ್ಷಗಳ ವಿರುದ್ಧ ದ್ವೇಷಕಾರುವ ಪತ್ರವಾಗಿದೆ.ಕಾಂಗ್ರೆಸ್, ಜನತಾದಳ, ಈ ಹಿಂದಿನ ಬಿಜೆಪಿಯ ವಾಜಪೇಯಿ ಸರ್ಕಾರ ರಾಜಕಾರಣದ ಮಧ್ಯೆಯೂ ಎಲ್ಲ ರಾಜ್ಯಗಳ ಹಿತ ಬಯಸುವ ರೀತಿ ಬಜೆಟ್ ಮಂಡಿಸುತ್ತಿದ್ದರು. ಅದರಲ್ಲೂ ಮನಮೋಹನ್ ಸಿಂಗ್ ಸರ್ಕಾರದ ಬಜೆಟ್‌ಗಳು ರಾಜಕೀಯ ರಹಿತ, ಅಭಿವೃದ್ಧಿ ಪರ ಯೋಜನೆಗಳನ್ನು ಒಳಗೊಂಡಿರುತ್ತಿದ್ದವು.

ಆದರೆ ನರೇಂದ್ರ ಮೋದಿ ಅಧಿಕಾರಕ್ಕೆ ಬಂದಾಗಿನಿoದ ದೇಶದಲ್ಲಿ ಬಜೆಟ್ ಮಂಡನೆಯಲ್ಲೂ ದ್ವೇಷ ಪ್ರದರ್ಶಿಸಲಾಗುತ್ತಿದೆ. ಇದಕ್ಕೆ ಸ್ಪಷ್ಟ ನಿದರ್ಶನ ಈ ಬಾರಿಯ ಬಜೆಟ್ ಎಂದಿದ್ದಾರೆ.

ಎನ್‌ಡಿಎ ಹೊರತುಪಡಿಸಿದ ಪಕ್ಷಗಳು ಅಧಿಕಾರ ನಡೆಸುತ್ತಿರುವ ಕರ್ನಾಟಕ, ತಮಿಳುನಾಡು, ಪಶ್ಚಿಮಬಂಗಾಳ , ತೆಲಂಗಾಣ ಹೀಗೆ ಅನೇಕ ರಾಜ್ಯಗಳಿಗೆ ಪುಡಿಗಾಸು ನೀಡದೆ ವಂಚಿಸಲಾಗಿದೆ. ಅಧಿಕಾರಕ್ಕಾಗಿ ಬಿಹಾರ, ಆಂಧ್ರಪ್ರದೇಶ ರಾಜ್ಯಗಳಿಗೆ ಭರಪೂರ ಯೋಜನೆ, ದುಡ್ಡು ನೀಡಲಾಗಿದೆ. ಈ ಮೂಲಕ ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಎಂಬoತೆ ವರ್ತಿಸಲಾಗಿದೆ. ಕನ್ನಡಿಗರನ್ನೇ ಮರೆತ ಮೊದಲ ಬಜೆಟ್ ಎಂಬ ಅಪಕೀರ್ತಿಗೆ ಒಳಗಾಗಿದೆ. ಈ ಮೂಲಕ ಮಹನೀಯರ ಆಶಯಗಳಿಗೆ ಎಳ್ಳು ನೀರು ಬಿಟ್ಟ ಬಜೆಟ್ ಇದಾಗಿದೆ. ಯಡಿಯೂರಪ್ಪ, ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ ಸಂದರ್ಭ ಡಬಲ್ ಇಂಜಿನ್ ಸರ್ಕಾರದಲ್ಲೂ ಅನ್ಯಾಯ ಮಾಡಲಾಗಿದ್ದು ಅದನ್ನು ಈಗಲೂ ಮುಂದುವರಿಸಲಾಗಿದೆ.

ವಿಧಾನಸಭಾ ಚುನಾವಣೆ ಸಂದರ್ಭ ಮಂಡಿಸಿದ್ದ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗಾಗಿ ಘೋಷಿಸಿದ್ದ 5,300 ಕೋಟಿ ರು.ನೀಡಲು ಸತಾಯಿಸುತ್ತಿದ್ದ ಕೇಂದ್ರ ಸರ್ಕಾರ ಈಗ ತಾನೇ ಘೋಷಣೆ ಮಾಡಿದ್ದ ಅನುದಾನದ ಕುರಿತು ಬಜೆಟ್‌ನಲ್ಲಿ ಪ್ರಸ್ತಾಪಿಸದೆ ತೀವ್ರ ವಂಚನೆ ಮಾಡಲಾಗಿದೆ. ಜೊತೆಗೆ ರಾಷ್ಟ್ರೀಯ ಯೋಜನೆ ಸಾಧ್ಯವೇ ಇಲ್ಲವೆಂಬ ಸಂದೇಶ ಬಿಜೆಪಿ ಸರ್ಕಾರ ರವಾನಿಸಿದೆ.

ಚುನಾವಣೆ ಸಂದರ್ಭದಲ್ಲಿ ಚಿತ್ರದುರ್ಗ ಜಿಲ್ಲೆಗೆ ಪ್ರಚಾರಕ್ಕೆ ಆಗಮಿಸಿದ್ದ ಮೋದಿ ಸೇರಿದಂತೆ ಎಲ್ಲ ನಾಯಕರು ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಣೆ ಮಾಡಲಾಗುವುದು ಎಂದು ಹೇಳಿದ್ದರು. ಆದರೆ ಈಗ ಅವೆಲ್ಲವನ್ನೂ ಮರೆತು ಚಿತ್ರದುರ್ಗದ ಜನರಿಗೆ ಅನ್ಯಾಯ ಮಾಡಲಾಗಿದೆ.

ರಾಜ್ಯದಲ್ಲಿನ ಬಿಜೆಪಿ ನಾಯಕರು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಕಿತ್ತಾಡಿಕೊಳ್ಳುತ್ತಿದ್ದು ರಾಜ್ಯದ ಹಿತ ಮರೆತಿದ್ದಾರೆ. ಜೊತೆಗೆ ನರೇಂದ್ರ ಮೋದಿ ಬಳಿ ಹೋಗಿ ರಾಜ್ಯಕ್ಕೆ ಅನುದಾನ ಕೇಳಿ ತರುವಷ್ಟು ಶಕ್ತಿ ಇಲ್ಲದವರಾಗಿದ್ದಾರೆ. ಆದ್ದರಿಂದ ರಾಜ್ಯದಲ್ಲಿನ ಬಿಜೆಪಿ ಸಂಸದರು ಕೇವಲ ನೆಪ ಮಾತ್ರಕ್ಕೆ ಕ್ಷೇತ್ರದ ಪ್ರತಿನಿಧಿಗಳಾಗಿದ್ದಾರೆ. ಇವರ ಮಾತುಗಳನ್ನು ಕೇಂದ್ರ ನಾಯಕರು ಕಿವಿಗೆ ಹಾಕಿಕೊಳ್ಳುವುದಿಲ್ಲವೆಂಬುದಕ್ಕೆ ಈ ಬಾರಿಯ ಬಜೆಟ್ ಸ್ಪಷ್ಟ ಸಾಕ್ಷಿಯಾಗಿದೆ.

ಜಿಲ್ಲೆ, ರಾಜ್ಯಕ್ಕೆ ಆಗಿರುವ ಅನ್ಯಾಯ ಹಾಗೂ ಭದ್ರಾ ಮೇಲ್ದಂಡೆ ಯೋಜನೆಗೆ ಘೋಷಿತ ಅನುದಾನ ತರಲು ಹೋರಾಟವೊಂದೇ ಏಕೈಕ ಮಾರ್ಗವಾಗಿದ್ದು ಈ ಸಂಬoಧ ಜಿಲ್ಲೆಯ ಜನರು ಧ್ವನಿಯೆತ್ತಬೇಕಾಗಿದೆ. ಬಿಜೆಪಿ ಮುಖಂಡರಿಗೆ ಘೆರಾವ್ ಹಾಕುವ ಮೂಲಕ ನಮ್ಮ ಪಾಲಿನ ಹಕ್ಕು ಪಡೆದುಕೊಳ್ಳುವ ಪ್ರಯತ್ನ ನಡೆಸಬೇಕಾಗಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ಬೆಂಬಲವಾಗಿ ನಿಲ್ಲಲಿದೆ, ಸಂದರ್ಭ ಎದುರಾದರೆ ಹೋರಾಟಕ್ಕೂ ಸಿದ್ಧವಾಗಬೇಕಿದೆ ಎಂದು ಎಚ್‌.ಆಂಜನೇಯ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು ನಗರದಲ್ಲಿ 2026ಕ್ಕೆ ಅದ್ಧೂರಿ ಸ್ವಾಗತ
ನಗುವ ಜಗದ ಅಳುವ ಬಯಸಿದ ಚಿರಕವಿ ಸಣಕಲ್ಲ