ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆಮಾನವನ ಸ್ವಾರ್ಥಕ್ಕೆ ಪ್ರಕೃತಿ ಹಾಗೂ ಜೀವ ರಾಶಿಗಳಿಗೂ ಹಾನಿಯಾಗುತ್ತಿದೆ ಎಂದು ತಾಲೂಕಿನ ಮೂಡಗೂರು ವಿರಕ್ತ ಮಠಾಧೀಶ ಶ್ರೀ ಇಮ್ಮಡಿ ಉದ್ದಾನ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು.
ತಾಲೂಕಿನ ಬೇಗೂರು ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಮರ ಬೆಳೆಸಿ, ಧರೆ ಉಳಿಸಿ ಅಭಿಯಾನದಡಿ ಮೊದಲಿಗೆ ತರಬೇತಿದಾರ ಕುರಿತು ಮಾತನಾಡಿ, ಕಾಡು ನಾಶವಾಗುತ್ತಿದೆ, ಕಾಡು ಉಳಿಯಬೇಕಾದರೆ ಸಸಿ ನೆಟ್ಟು ಪೋಷಿಸಿದರೆ, ಜೀವ ರಾಶಿಗಳಿಗೆ ಆಹಾರ ಸಿಗಲಿದೆ ಎಂದರು. ಪ್ರಕೃತಿ ಉಳಿಸುವ ಪ್ರಯತ್ನದ ಫಲವಾಗಿ ಮರ ಬೆಳೆಸಿ, ಧರೆ ಉಳಿಸಿ ಅಭಿಯಾನ ತಾಲೂಕಿನಲ್ಲಿ ಆರಂಭವಾಗಿದ್ದು, ನೀವು ಕೂಡ ಈ ಅಭಿಯಾನಕ್ಕೆ ಕೈ ಜೋಡಿಸಿದರೆ ಮುಂದಿನ ಪೀಳಿಗೆಗೆ ನೆಲೆ ಕೊಟ್ಟಂತಾಗಲಿದೆ ಎಂದು ಪ್ರತಿಪಾದಿಸಿದರು. ತಾಪಮಾನ ಜಗತ್ತಿನಲ್ಲಿ ಏರತೊಡಗಿದೆ, ಜಾಗತಿಕ ತಾಪಮಾನ ಕಾಪಾಡಲು ಜನರು ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ ಸೇರಿದಂತೆ ಇನ್ನಿತರ ಸಮಾರಂಭಗಳಲ್ಲಿ ಒಂದು ಸಸಿ ನೆಡುವ ಪ್ರಯತ್ನ ಮಾಡಿದರೆ ಜನರಲ್ಲಿ ಅರಿವು ಮೂಡಲಿದೆ ಎಂದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಶೈಲಕುಮಾರ್ ಮಾತನಾಡಿ ಕಾರು, ಬೈಕ್ ಸೇರಿದಂತೆ ಯಂತ್ರಗಳು ಕೆಟ್ಟರೆ ದುರಸ್ತಿ ಮಾಡಿಸಬಹುದು ಆದರೆ ಭೂಮಿ ಕೆಟ್ಟರೆ ರಿಪೇರಿ ಮಾಡಿಸಲು ಆಗುವುದಿಲ್ಲ. ಹಾಗಾಗಿ ಪ್ರಕೃತಿ ಕಾಪಾಡುವ ಜವಬ್ದಾರಿ ಯುವಕರ ಮೇಲಿದೆ ಎಂದರು. ನಾಲ್ಕು ದಶಕಗಳ ಹಿಂದೆ ಜನರು ಕೆರೆಯಲ್ಲಿ ನೀರು ಕುಡಿಯುತ್ತಿದ್ದರು. ಕಾಡು ನಾಶವಾದ ಬಳಿಕ ಹಳ್ಳಿಗಳಲ್ಲಿ ತೋಡು ಬಾವಿ, ಬೋರ್ ವೆಲ್ ನೀರು ಕುಡಿಯುತ್ತಿದ್ದರು. ಇದೀಗ ಕಾಡು ನಾಶದಿಂದ ಅಂತರ್ಜಲ ಕುಸಿತಗೊಂಡು ನದಿ ಮೂಲದ ನೀರು ಕುಡಿಯುಂತಾಗಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಮಾಜಿ ಅಧ್ಯಕ್ಷ ಚಿದಾನಂದ ಮಾತನಾಡಿ, ಮನುಷ್ಯ ತನ್ನ ಸ್ವಾರ್ಥಕ್ಕೆ ಪ್ರಕೃತಿಯನ್ನೇ ಬಗ್ಗಿಸಿದ್ದಾನೆ ಇದು ಆತಂಕಕಾರಿ ವಿಷಯವಾಗಿದ್ದು, ಸಸಿ ನೆಟ್ಟು ಪೋಷಿಸುವ ಮೂಲಕ ಜನರು ಪ್ರಕೃತಿಗೆ ಕೊಡುಗೆ ನೀಡಬೇಕು ಎಂದರು. ಬೇಗೂರು ಕೈಗಾರಿಕಾ ತರಬೇತಿ ಸಂಸ್ಥೆಯ ತರಬೇತಿ ಅಧಿಕಾರಿ ಎಚ್.ಎಸ್.ಪ್ರಸಾದ್ ಮಾತನಾಡಿದರು. ಕಸಾಪದ ಮಹದೇವಸ್ವಾಮಿ, ಸಂಸ್ಥೆಯ ಅಧೀಕ್ಷಕಿ ಅನ್ನಪೂರ್ಣಮ್ಮ, ಕಿರಿಯ ತರಬೇತಿ ಅಧಿಕಾರಿಗಳಾದ ಬಸಂತಕುಮಾರಿ, ರೂಪಶ್ರೀ, ಫಾತಿಮಾ, ಆದಿಯಾ ಇತರರಿದ್ದರು.