15 ದಿನಗಳಲ್ಲಿ ಡಿಪೋ ಉದ್ಘಾಟಿಸದಿದ್ರೆ ಉಗ್ರ ಹೋರಾಟ

KannadaprabhaNewsNetwork | Published : Apr 5, 2025 12:50 AM

ಸಾರಾಂಶ

ತಾಲೂಕಿನ ಗ್ರಾಮಾಂತರ ಜನರಿಗೆ ಅನುಕೂಲವಾಗುವ ದೃಷ್ಠಿಯಿಂದ ಪಟ್ಟಣದ ಹೊರವಲಯದಲ್ಲಿ ₹8 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕೆ.ಎಸ್.ಆರ್.ಟಿ.ಸಿ. ಡಿಪೋ ನಿರ್ಮಾಣವಾಗಿದೆ. ಇದರ ಕಾಮಗಾರಿ ಸಂಪೂರ್ಣ ಮುಗಿದಿದೆ. ಆದರೂ, ಉದ್ಘಾಟಿಸಿ, ಜನಸೇವೆಗೆ ಸಮರ್ಪಿಸದೇ ವಿಳಂಬ ಮಾಡುತ್ತಿರುವುದು ಖಂಡನೀಯ. ಮುಂದಿನ 15 ದಿನಗಳೊಳಗೆ ಡಿಪೋ ಉದ್ಘಾಟನೆ ಮಾಡದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ತಾಲೂಕು ಹಸಿರು ಸೇನೆಯ ಅಧ್ಯಕ್ಷ ಬಸವಾಪುರ ರಂಗನಾಥ್ ಹೇಳಿದ್ದಾರೆ.

- ತಾಲೂಕಿನ ಹಲವಾರು ಗ್ರಾಮಗಳಿಗೆ ಸಾರಿಗೆ ಸೌಲಭ್ಯವೇ ಇಲ್ಲ: ರಂಗನಾಥ್‌ ಆರೋಪ - - - ಕನ್ನಡಪ್ರಭ ವಾರ್ತೆ ಚನ್ನಗಿರಿ

ತಾಲೂಕಿನ ಗ್ರಾಮಾಂತರ ಜನರಿಗೆ ಅನುಕೂಲವಾಗುವ ದೃಷ್ಠಿಯಿಂದ ಪಟ್ಟಣದ ಹೊರವಲಯದಲ್ಲಿ ₹8 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕೆ.ಎಸ್.ಆರ್.ಟಿ.ಸಿ. ಡಿಪೋ ನಿರ್ಮಾಣವಾಗಿದೆ. ಇದರ ಕಾಮಗಾರಿ ಸಂಪೂರ್ಣ ಮುಗಿದಿದೆ. ಆದರೂ, ಉದ್ಘಾಟಿಸಿ, ಜನಸೇವೆಗೆ ಸಮರ್ಪಿಸದೇ ವಿಳಂಬ ಮಾಡುತ್ತಿರುವುದು ಖಂಡನೀಯ. ಮುಂದಿನ 15 ದಿನಗಳೊಳಗೆ ಡಿಪೋ ಉದ್ಘಾಟನೆ ಮಾಡದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ತಾಲೂಕು ಹಸಿರು ಸೇನೆಯ ಅಧ್ಯಕ್ಷ ಬಸವಾಪುರ ರಂಗನಾಥ್ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಏ.16ರಂದು ದಾವಣಗೆರೆಯಲ್ಲಿ ನಡೆಯಲಿರುವ ನವ ಕರ್ನಾಟಕ ನಿರ್ಮಾಣ ಆಂದೋಲನ ಕಾರ್ಯಕ್ರಮ ನಿಮಿತ್ತದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿಳಂಬ ಏಕೆ?:

ಈ ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳೇ ಕಳೆದಿವೆ. ಇದುವರೆಗೂ ತಾಲೂಕಿನ ಹಲವಾರು ಗ್ರಾಮಗಳಿಗೆ ಸರಿಯಾದ ಸಾರಿಗೆ ಸೌಲಭ್ಯಗಳಿಲ್ಲ. ಬಡಜನರು ನಡೆದುಕೊಂಡು ಸಂಚರಿಸಬೇಕಾಗಿದೆ. ಸರ್ಕಾರಿ ಬಸ್‌ ಡಿಪೋ ಪ್ರಾರಂಭವಾದರೆ ತಾಲೂಕಿನ ಪ್ರತಿ ಗ್ರಾಮಗಳಿಗೂ ಸಾರಿಗೆ ಸಂಪರ್ಕ ದೊರೆಯಲಿದೆ ಎಂದು ಹೇಳುತ್ತಾರೆ. ಆದರೆ, ಕಾಮಗಾರಿ ಮುಗಿದರೂ ಡಿಪೋ ಉದ್ಘಾಟಿಸಲು ಮುಂದಾಗುತ್ತಿಲ್ಲ ಏಕೆ ಎಂದು ಕಿಡಿಕಾರಿದರು.

ಹಾಸ್ಟೆಲ್‌ ಕೂಡ ಉದ್ಘಾಟನೆಯಾಗಿಲ್ಲ:

ತಾಲೂಕಿನ ಚಿಕ್ಕಮಾಡಾಳು ಗ್ರಾಮದ ಬಳಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಕಟ್ಟಡ ಸಂಪೂರ್ಣ ಮುಗಿದಿದೆ. ಈ ಕಟ್ಟಡವೂ ಉದ್ಘಾಟನೆಯಾಗಿಲ್ಲ. ಇಂತಹ ಜನೋಪಯೋಗಿ ಕಾಮಗಾರಿಗಳು ಪೂರ್ಣಗೊಂಡಿದ್ದರೂ ಉದ್ಘಾಟಿಸಲು ಅಧಿಕಾರಿಗಳು ಮೀನ ಮೇಷ ಎಣಿಸಬಾರದು ಎಂದರು.

ಸಭೆಯಲ್ಲಿ ರೈತ ಸಂಘದ ಪ್ರಮುಖರಾದ ಚನ್ನಬಸಪ್ಪ, ಖಲೀಂವುಲ್ಲಾ, ಬಸವರಾಜ, ಶಂಕರ್, ನಾಗರಾಜ್, ಸಾಮಾಜಿಕ ಹೋರಾಟಗಾರ ದೊಡ್ಡಘಟ್ಟ ರಂಗಸ್ವಾಮಿ ಮೊದಲಾದವರು ಹಾಜರಿದ್ದರು.

- - -

ಕೋಟ್‌ ಏ.16ರಂದು ದಾವಣಗೆರೆಯಲ್ಲಿ ನಡೆಯಲಿರುವ ನವಕರ್ನಾಟಕ ನಿರ್ಮಾಣ ಆಂದೋಲನಕ್ಕೆ ತಾಲೂಕಿನಿಂದ ಒಂದು ಸಾವಿರ ಜನ ಭಾಗವಹಿಸಲಿದ್ದಾರೆ

- ಬಸವಾಪುರ ರಂಗನಾಥ್, ಅಧ್ಯಕ್ಷ

- - -

-4ಕೆಸಿಎನ್‌ಜಿ1.ಜೆಪಿಜಿ:

ತಾಲೂಕು ಹಸಿರು ಸೇನೆ ಅಧ್ಯಕ್ಷ ರಂಗನಾಥ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

Share this article