ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಚಿತ್ರದುರ್ಗದ ಪತ್ರಿಕಾ ಭವನದಲ್ಲಿ ಗುರುವಾರ ಕರೆಯಲಾಗಿದ್ದ ಒಳಮೀಸಲಾತಿ ಕುರಿತ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರು ಪರಿಶಿಷ್ಟರ ಒಳ ಮೀಸಲಾತಿ ವಿಷಯದಲ್ಲಿ ಸುಖಾಸುಮ್ಮನೆ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳು ಕಳೆದರೂ ಮಾದಿಗರ ಬಹುದಿನದ ಬೇಡಿಕೆ ಈಡೇರಿಕೆಗೆ ಮೀನಮೇಷ ಎಣಿಸುತ್ತಿರುವುದು ಈ ಸಮುದಾಯಕ್ಕೆ ಮಾಡುತ್ತಿರುವ ಘೋರ ಅನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಏ.24ರಂದು ನಡೆಯುವ ಒಳ ಮೀಸಲಾತಿ ಕುರಿತ ಸಚಿವ ಸಂಪುಟ ಸಭೆಯಲ್ಲಿ 56 ಸಾವಿರ ಹುದ್ದೆಗಳ ನೇಮಕ ಪ್ರಕ್ರಿಯೆಯಲ್ಲಿ ಒಳಮೀಸಲು ಜಾರಿಗೊಳಿಸಬೇಕು. ಇಲ್ಲವಾದಲ್ಲಿ ರಕ್ತಸಿಕ್ತ ಹೋರಾಟವೂ ಸೇರಿದಂತೆ ಜೈಲ್ ಬರೋ ಚಳವಳಿ ಮಾಡಲಾಗುವುದು ಎಂದು ಎಚ್ಚರಿಸಿದರು.ಹೋರಾಟಗಾರ ಬಿ.ಆರ್.ಬಾಸ್ಕರ್ ಪ್ರಸಾದ್ ಮಾತನಾಡಿ, ಮಾದಿಗರ 35 ವರ್ಷಗಳ ಹೋರಾಟವನ್ನು ಕಾಂಗ್ರೆಸ್ ಸರ್ಕಾರ ಲಘುವಾಗಿ ಪರಿಗಣಿಸಿದಂತೆ ಕಾಣುತ್ತಿದೆ. ಚಿತ್ರದುರ್ಗದಲ್ಲಿ ಇಂದು ರಾಜ್ಯಮಟ್ಟದ ಒಳ ಮೀಸಲಾತಿ ಸಭೆ ನಡೆಸಲಾಗಿದೆ. ವಿವಿಧ ಜಿಲ್ಲೆಗಳಿಂದ 500ಕ್ಕೂ ಹೆಚ್ಚು ಹೋರಾಟಗಾರರು ಬಂದಿದ್ದಾರೆ. ಈ ಸಭೆಯಲ್ಲಿ ಒಕ್ಕೋರಲ ನಿರ್ಧಾರಕ್ಕೆ ಬರಲಾಗಿದೆ. ಸರ್ಕಾರದ ತೀರ್ಮಾನ ನೋಡಿ ನಾವು ಯಾವುದೇ ಹೋರಾಟಕ್ಕೂ ಸಿದ್ಧ ಎಂದು ಕರೆ ನೀಡಿದರು.
ಒಳ ಮೀಸಲಾತಿ ಹಿರಿಯ ಹೋರಾಟಗಾರರಾದ ಮಾರಸಂದ್ರ ಮುನಿಯಪ್ಪ ಮಾತನಾಡಿ, ಮುಖ್ಯ ಕಾರ್ಯದರ್ಶಿ ಸೇರಿದಂತೆ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಿದಾಗ ಒಳಮೀಸಲು ಜಾರಿ ಆಗದೇ ನೇಮಕಾತಿ ಮಾಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಆದರೆ, ಕೃಷಿ ಇಲಾಖೆಯಲ್ಲಿ 891 ಹುದ್ದೆಗಳ ಅಧಿಸೂಚನೆ ಇನ್ನೂ ಅಂತರ್ಜಾಲದಲ್ಲಿ ಹಾಗೆಯೇ ಇದೆ ಎಂದರು.
ಒಳಮೀಸಲು ಜಾರಿಗೆ ಹೊಲೆಯ ಸೇರಿದಂತೆ ಕೊಲಂಭೋ ಸಚಿವರು ವಿರೋಧಿಸುತ್ತಿರುವುದು ವಂಚಿತ ಸಮುದಾಯಕ್ಕೆ ಎಸಗುವ ದ್ರೋಹ. ಸರ್ಕಾರ ಇಂತಹುದನ್ನು ಮುಂದಿಟ್ಟುಕೊಂಡು ಮಾದಿಗರಿಗೆ ಮೋಸ ಮಾಡುತ್ತಿದೆ ಎಂದು ದೂರಿದರು.