ಗದಗ: ಜಿಲ್ಲೆಯ ಕಪ್ಪತಗುಡ್ಡದ 80 ಸಾವಿರ ಎಕರೆ ಅರಣ್ಯ ಪ್ರದೇಶವನ್ನು ಸಂರಕ್ಷಿತ ಜೀವ ವೈವಿಧ್ಯತಾ ತಾಣವನ್ನಾಗಿ ವಿಸ್ತರಿಸುವುದು ಮತ್ತು ಅದರ ಪರಿಧಿಯ 10 ಕಿಮೀ ವ್ಯಾಪ್ತಿಯಲ್ಲಿ ಯಾವುದೇ ಗಣಿಗಾರಿಕೆ ಕೈಗೊಳ್ಳದಂತೆ ನಿಷೇಧಿಸುವಂತೆ ಒತ್ತಾಯಿಸಿ ಕಪ್ಪತಗುಡ್ಡ ಶ್ರೀನಂದಿವೇರಿ ಸಂಸ್ಥಾನ ಮಠದ ಶಿವಕುಮಾರ ಸ್ವಾಮಿಗಳ ನೇತೃತ್ವದಲ್ಲಿ ಗುರುವಾರ ಬೆಳಗಾವಿ ವಿಭಾಗೀಯ ಆಯುಕ್ತರ ಮೂಲಕ ಸಿಎಂಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಶ್ರೀಗಳು, ಕಪ್ಪತಗುಡ್ಡದ ಸಂರಕ್ಷಣಾ ವಿಷಯದಲ್ಲಿ ಮಲತಾಯಿ ಧೋರಣೆ ಅನುಸರಿಸಿ ಆಗಾಗ ಸಂಕಷ್ಟ ಸೃಷ್ಟಿಸುತ್ತಿರುವ ಕರ್ನಾಟಕ ಸರ್ಕಾರದ ಧೋರಣೆಯನ್ನು ತೀವ್ರವಾಗಿ ವಿರೋಧಿಸುತ್ತೇವೆ. ಕಪ್ಪತಗುಡ್ಡದ ನೆಲ-ಜಲ ಜಾನುವಾರಗಳ ಹಾಗೂ ಜೀವ ವೈವಿಧ್ಯತೆಗಳ ಸಂರಕ್ಷಣೆಗಾಗಿ ಬದ್ಧವಿರಬೇಕಿದ್ದ ಸರ್ಕಾರವು ಹಿತ್ತಲು ಬಾಗಿಲಿನಿಂದ ಗಣಿಗಾರಿಕೆಗೆ ಅವಕಾಶ ನೀಡುವ ಹುನ್ನಾರದೊಂದಿಗೆ ನೀತಿ ರೂಪಿಸಿ ಜನಸಾಮಾನ್ಯರ ಕಣ್ಣು ಒರೆಸುವ ತಂತ್ರ ಅನುಸರಿಸುತ್ತಿರುವುದು ದುರದೃಷ್ಟಕರ ವಿಷಯವಾಗಿದೆ ಎಂದರು.ಇತ್ತೀಚೆಗೆ ಗಣಿಗಾರಿಕೆಗೆ ಅನುಮತಿ ನೀಡುವ ಪ್ರಸ್ತಾವನೆಗಳ ಮೇಲೆ ನಿರ್ಧಾರ ಕೈಗೊಳ್ಳುವುದನ್ನು ಸರ್ಕಾರ ಮುಂದೂಡಿದೆ ವಿನಃ ಕೈಬಿಟ್ಟಿಲ್ಲ, ಇದೊಂದು ಇಬ್ಬಗೆಯ ನೀತಿಯಾಗಿದ್ದು, ಕಪ್ಪತಗುಡ್ಡದ ಮೇಲೆ ಸರ್ಕಾರದ ತೂಗುಗತ್ತಿ ಜೋತಾಡುತ್ತಿದ್ದು, ಯಾವುದೇ ಕ್ಷಣದಲ್ಲಿ ಸರ್ಕಾರ ತಪ್ಪುನಿರ್ಧಾರ ಕೈಗೊಳ್ಳುವ ಅಪಾಯವಿದ್ದೇ ಇದೆ, ಸರ್ಕಾರದ ನಿರ್ಧಾರದ ವಿರುದ್ಧ ನಾವು ತೀವ್ರವಾದ ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದು ಎಚ್ಚರಿಸಿದರು.
ಹೋರಾಟಗಾರ ರುದ್ರಣ್ಣ ಗುಳಗುಳಿ ಮಾತನಾಡಿ, ಗಣಿಗಾರಿಕೆಗೆ ಅನುವು ಮಾಡಿಕೊಡುವ ಉದ್ದೇಶದಿಂದ ಈ ಹಿಂದೆ ಸರ್ಕಾರವು ವ್ಯತಿರಿಕ್ತ ಆದೇಶ ಹೊರಡಿಸಿ ಕೈ ಸುಟ್ಟುಕೊಂಡು ತೋಂಟದ ಸಿದ್ಧಲಿಂಗ ಸ್ವಾಮಿಗಳು ಮತ್ತು ನಂದಿವೇರಿ ಶ್ರೀಮಠದ ಶಿವಕುಮಾರ ಸ್ವಾಮಿಗಳು ಹಾಗೂ ಇನ್ನಿತರ ಮಠಾಧೀಶರ ನೇತೃತ್ವದಲ್ಲಿ ಹಾಗೂ ಗದಗ ಜಿಲ್ಲೆಯ ಅನೇಕ ನಾಗರಿಕ ಸಂಘಟನೆ ಮತ್ತು ಸಾರ್ವಜನಿಕರ ಹೋರಾಟದ ತೀವ್ರತೆಗೆ ಮಣಿದ ಸರ್ಕಾರ ಕಪ್ಪತಗುಡ್ಡದ ಕೆಲವೇ ಕೆಲವು ಭಾಗವನ್ನು ಜೀವ ವೈವಿಧ್ಯತಾ ತಾಣವೆಂದು ಘೋಷಿಸಿ ಮುಜುಗರದಿಂದ ಪಾರಾಗಲು ಮೂಗಿಗೆ ತುಪ್ಪ ಸವರುವ ಕಾರ್ಯ ಮಾಡಿದಾಗ ಹೋರಾಟ ತಾತ್ಕಾಲಿಕವಾಗಿ ಸ್ಥಗಿತವಾಗಿದ್ದು, ಈಗ ಇತಿಹಾಸ ನಂತರದ ಪ್ರಶಾಂತ ವಾತಾರವಣವನ್ನು ತಪ್ಪಾಗಿ ಭಾವಿಸಿರುವ ಸರ್ಕಾರವು ಜೇನುಗೂಡಿಗೆ ಕೈಹಾಕಿದ್ದು ಈ ಭಾಗದ ಜನರ ರೋಷಕ್ಕೆ ಕಾರಣವಾಗಿದ್ದು ಜನಸಾಮಾನ್ಯರು ಸಿಡಿದೆದ್ದು ಸರ್ಕಾರ ಮತ್ತೊಮ್ಮೆ ಮುಜುಗರಕ್ಕೆ ಈಡಾಗುವುದರಲ್ಲಿ ಎರಡು ಮಾತಿಲ್ಲವೆಂದರು.ಪರಿಸರವಾದಿ ಬಾಲಚಂದ್ರ ಜಾಬಶೆಟ್ಟಿ ಮಾತನಾಡಿ, ಸಾಮಾಜಿಕ ಜಾಲತಾಣದ ಪ್ರಾಬಲ್ಯ ಅಷ್ಟೊಂದು ತೀವ್ರವಾಗಿರದ ಅಂದಿನ ದಿನಮಾನಗಳಲ್ಲಿ ವ್ಯಕ್ತವಾದ ಪ್ರತಿಭಟನೆ ಸರ್ಕಾರ ಮರೆತಂತೆ ನಟಿಸಿದರೆ ಮತ್ತೆ ಮತ್ತೆ ತೀವ್ರ ಮುಖಭಂಗ ಅನುಭವಿಸಬೇಕಾಗುತ್ತದೆ. ಸಾಮಾಜಿಕ ಜಾಲತಾಣದ ಬೃಹತ್ ಶಕ್ತಿ 24 ಗಂಟೆಗಳ ಅವಧಿಯಲ್ಲಿ ಲಕ್ಷಾಂತರ ಜನರು ಸರ್ಕಾರದ ವಿರುದ್ಧ ಹೋರಾಟಕ್ಕೆ ಸನ್ನದ್ಧಗೊಳ್ಳುವ ಅಪಾಯದ ಅರಿವು ಇಂಟಲಿಜೆನ್ಸ್ಇ ಲಾಖೆಯ ಮೂಲಕ ತಿಳಿದಿದ್ದರೂ ಮತ್ತೆ ಗಣಿಗಾರಿಕೆಗೆ ಅನುಮತಿ ನೀಡಲು ಸರ್ಕಾರ ಹವಣಿಸುತ್ತಿರುವದು ಗಣಿ ಲಾಬಿಯ ಒತ್ತಡ ಎಷ್ಟಿರಬಹುದೆಂದು ಅಂದಾಜಿಸಲಾರದಷ್ಟು ಜನಸಾಮಾನ್ಯರು ಅಜ್ಞರಲ್ಲವೆಂಬುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕೆಂದರು.
ನ್ಯಾಯವಾದಿ ಸರಸ್ವತಿ ಪೂಜಾರ ಮಾತನಾಡಿ, ಕಪ್ಪತಗುಡ್ಡದ ಸಂರಕ್ಷಣೆಗೆ ಇಂದು ಜಾಗೃತ ಸಮಾಜ ಟೊಂಕ ಕಟ್ಟಿ ನಿಂತಿರುವುದರಿಂದ ಯಾವ ಕಾಲಕ್ಕೂ ಗಣಿಗಾರಿಕೆ ನಡೆಸಲು ಬಿಡಲಾರೆವೆಂಬ ಸಾರ್ವಜನಿಕ ಸಂಕಲ್ಪವು ಸರ್ಕಾರಗಳನೇ ಆಹುತಿ ತೆಗೆದುಕೊಳ್ಳುವುದರಲ್ಲಿ ಸಂಶಯವಿಲ್ಲ. ಇನ್ನಾದರೂ ಸರ್ಕಾರ ಗಣಿಗಾರಿಕೆ ಆಟ ಎಂಬ ಪ್ರಹಸನ ಕೂಡಲೇ ನಿಲ್ಲಿಸಬೇಕೆಂದು ಆಗ್ರಹಸಿದರು.ಹುಬ್ಬಳ್ಳಿಯ ಕಾನೂನು ಮಹಾವಿದ್ಯಾಲಯದ ಸಂಗನಗೌಡ ಬಿರಾದಾರ ಮಾತನಾಡಿದರು.
ಈ ವೇಳೆ ಶಂಕರ ಕುಂಬಿ, ಎಂ.ವೈ. ಮೆಣಶಿನಕಾಯಿ, ಶಾರದಾ ಗೋಪಾಲ, ಅನಿತಾ ಪಾಟೀಲ, ಸುಭದ್ರಾ ಕುಲಕರ್ಣಿ, ನೈಲಾ ಕೋಯ್ಲೋ, ಕೆ.ಎಸ್. ನಾಯಕ, ಪರಿಮಳಾ ಜಕ್ಕಣ್ಣವರ, ಆರ್.ಜಿ. ತಿಮ್ಮಾಪೂರ, ಸ್ವಪ್ನಾ ಕರಬಶೆಟ್ಟರ್, ದೀಪಕ ಕಟ್ಟಿಮನಿ, ವೀರೇಶ ಅರಕೇರಿ, ಅಸ್ಲಮ್ ಅಬ್ಬಿಹಾಳ ಸೇರಿದಂತೆ ಪರಿಸರಾಸಕ್ತರು ಇದ್ದರು.